ಬೆಂಗಳೂರು: ಸಬ್ ಇನ್ಸ್ ಪೆಕ್ಟರ್ (ಪಿಎಸ್ ಐ)ನೇಮಕಾತಿ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಕಿಂಗ್ ಪಿನ್ ಸೇರಿ ಪ್ರಮುಖ ಆರೋಪಿಗಳನ್ನು ಖೆಡ್ಡಾಕ್ಕೆ ಬೀಳಿಸಿದ್ದಾರೆ. ಬ್ಲೂಟೂತ್ ನಲ್ಲಿ ಆರೋಪಿತ ಅಭ್ಯರ್ಥಿಗಳಿಗೆ ಉತ್ತರ ರವಾನಿಸಿ ಅಕ್ರಮ ಎಸಗಿರುವ ಮತ್ತೊಂದು ಸ್ಫೋಟಕ ಅಂಶ ಬಯಲಾಗಿದೆ.
ಸಿನಿಮೀಯ ಮಾದರಿಯಲ್ಲಿ ಬ್ಲೂಟೂತ್ ಮೂಲಕ ಉತ್ತರ ರವಾನಿಸಿದ್ದಾರೆ. ಪರೀಕ್ಷೆಗೂ ಮುನ್ನ ಪ್ರಶ್ನೆಪತ್ರಿಕೆ ಸೋರಿಕೆ ಆಗಿರುವ ಮಾಹಿತಿ ಬಹಿರಂಗಗೊಂಡಿದೆ. ಸೋರಿಕೆಯಾದ ಪ್ರಶ್ನೆಪತ್ರಿಕೆಯ ಉತ್ತರಗಳನ್ನು ಸಿದ್ಧಪಡಿಸಿಕೊಂಡಿದ್ದ ಆರೋಪಿಗಳು ಹಣ ಕೊಟ್ಟು ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಬ್ಲೂಟೂತ್ ಮೂಲಕ ಉತ್ತರ ರವಾನೆ ಮಾಡಿಸಿದ್ದಾರೆ. ದಾಳಿ ನಡೆಸಿರುವ ಅಧಿಕಾರಿಗಳಿಗೆ ಎಲೆಕ್ಟ್ರಾನಿಕ್ ಡಿವೈಸ್ ಲಭ್ಯವಾಗಿದ್ದು, ಆರೋಪಿಗಳ ಎಟಿಎಂ ಕಾರ್ಡ್ಗಳು ಸಹ ದೊರೆತಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಎಲೆಕ್ಟ್ರಾನಿಕ್ ಡಿವೈಸ್ ಬಳಸಿ ಉತ್ತರ ನೀಡಲಾಗಿದ್ದು, ಹಣಕೊಟ್ಟ ಅಭ್ಯರ್ಥಿಗಳಿಗೆ ಎಬಿಸಿಡಿ ಮಾದರಿ ಪ್ರಶ್ನೆಪತ್ರಿಕೆಗಳಂತೆ ಒಂದೇ ಬಾರಿಗೆ ಉತ್ತರ ಹೇಳಿಕೊಟ್ಟಿದ್ದಾರೆ. ಇದೀಗ ಪ್ರಶ್ನೆ ಪತ್ರಿಕೆಗೆ ಉತ್ತರ ಕೊಡುವ ವೀಡಿಯೋ ವೈರಲ್ ಆಗಿದೆ.
ಪಿಎಸ್ ಐ ಅಕ್ರಮ ನೇಮಕಾತಿ ಪ್ರಕರಣದ ರೂವಾರಿಗಳು ಸಿಐಡಿ ಖೆಡ್ಡಕ್ಕೆ ಬೀಳುತ್ತಿದ್ದಂತೆ ಉಳಿದವರಿಗೆ ನಡುಕ ಶುರುವಾಗಿದೆ. ಕಿಂಗ್ಪಿನ್ ಗಳ ವಿಚಾರಣೆ ವೇಳೆ ಹೆಸರುಗಳು ಬಾಯಿಬಿಟ್ಟರೆ ಸಂಕಷ್ಟ ಕಟ್ಟಿಟ್ಟ ಬುತ್ತಿ ಎಂಬ ಆತಂಕ ಉಳಿದ ಆರೋಪಿಗಳಿಗೆ ಶುರುವಾಗಿದೆ. ಪ್ರಕರಣದಲ್ಲಿ ಭಾಗಿಯಾಗಿ ತಲೆಮರಿಸಿಕೊಂಡಿರುವ ಆರೋಪಿಗಳನ್ನು ಸದ್ಯದಲ್ಲೇ ಬಂಧಿಸಿ ಪ್ರಕರಣಗಳ ಸತ್ಯಾಸತ್ಯತೆ ತಿಳಿದುಕೊಳ್ಳುವ ನಿಟ್ಟಿನಲ್ಲಿ ಸಿಐಡಿ ತನಿಖೆ ಮುಂದುವರೆದಿದೆ.