Home ಟಾಪ್ ಸುದ್ದಿಗಳು ಕೋಲ್ಕತ್ತಾದಲ್ಲಿ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ; ಪೊಲೀಸ್ ಅಧಿಕಾರಿಗೆ ಗಾಯ, ಲಾಠಿಚಾರ್ಜ್ ಅಸ್ತ್ರ ಪ್ರಯೋಗ

ಕೋಲ್ಕತ್ತಾದಲ್ಲಿ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ; ಪೊಲೀಸ್ ಅಧಿಕಾರಿಗೆ ಗಾಯ, ಲಾಠಿಚಾರ್ಜ್ ಅಸ್ತ್ರ ಪ್ರಯೋಗ

ಕೋಲ್ಕತ್ತ: ‘ನಬನ್ನ ಅಭಿಜಾನ್’ ರ್‍ಯಾಲಿ ನಡೆಸುತ್ತಿರುವ ಪ್ರತಿಭಟನಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿದ್ದು, ಹೌರಾದ ಸಂತ್ರಗಚಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಘರ್ಷಣೆಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಗಾಯಗೊಂಡಿದ್ದಾರೆ.

ಆರ್ ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಆವರಣದಲ್ಲಿ ಮಹಿಳಾ ಟ್ರೈನಿ ವೈದ್ಯೆಯ ಮೇಲೆ ಅಮಾನುಷ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯು ಇಡೀ ರಾಷ್ಟ್ರವನ್ನು ಬೆಚ್ಚಿಬೀಳಿಸಿದೆ. ಅಂದಿನಿಂದ ಸಂತ್ರಸ್ತರಿಗೆ ನ್ಯಾಯಕ್ಕಾಗಿ ಒತ್ತಾಯಿಸಿ ಹಲವಾರು ಪ್ರತಿಭಟನೆಗಳನ್ನು ನಡೆಸಲಾಗುತ್ತಿದೆ.


ಈ ಹಿನ್ನೆಲೆಯಲ್ಲಿ ನಬನ್ನ ರ್‍ಯಾಲಿ ನಡೆಯುತ್ತಿದೆ. ಕೋಲ್ಕತ್ತಾದಿಂದ ಹೌರಾಕ್ಕೆ ಎರಡು ಮಾರ್ಗಗಳ ಮೂಲಕ ರ್ಯಾಲಿ ನಡೆಯುತ್ತಿದೆ. ಮೊದಲ ಮೆರವಣಿಗೆ ಸಂತ್ರಗಚಿಯಿಂದ ನಬಣ್ಣಗೆ ಮತ್ತು ಎರಡನೇ ರ್ಯಾಲಿ ಕಾಲೇಜು ಆವರಣದಿಂದ ಮುಂದುವರೆದಿದೆ.


ಹೌರಾ ಮೈದಾನದ ಬಳಿ ಪೊಲೀಸ್ ಬ್ಯಾರಿಕೇಡ್ ಗಳನ್ನು ಭೇದಿಸಿ ಮುನ್ನುಗಲು ಪ್ರಯತ್ನಿಸಿದ ವೇಳೆ ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ಘರ್ಷಣೆ ನಡೆದಿದೆ. ಭದ್ರತಾ ಪಡೆಗಳ ಮೇಲೆ ಕಲ್ಲು ಮತ್ತು ಇಟ್ಟಿಗೆಗಳನ್ನು ಎಸೆದ ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್ ಗಳನ್ನು ಸಿಡಿಸಿದ್ದಾರೆ.


ಹೇಸ್ಟಿಂಗ್ಸ್ ಮತ್ತು ಎಂಜಿ ರೋಡ್ ನಲ್ಲಿಯೂ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದ್ದು, ಪ್ರತಿಭಟನಕಾರರ ಮೇಲೆ ಲಾಠಿ ಚಾರ್ಜ್ ನಡೆಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

Join Whatsapp
Exit mobile version