Home ಟಾಪ್ ಸುದ್ದಿಗಳು ನೇತನ್ಯಾಹು ಸರಕಾರದ ವಿರುದ್ಧ ಇಸ್ರೇಲ್’ನಲ್ಲಿ ತೀವ್ರಗೊಂಡ ಪ್ರತಿಭಟನೆ

ನೇತನ್ಯಾಹು ಸರಕಾರದ ವಿರುದ್ಧ ಇಸ್ರೇಲ್’ನಲ್ಲಿ ತೀವ್ರಗೊಂಡ ಪ್ರತಿಭಟನೆ

ಟೆಲ್ ಅವೀವ್: ನ್ಯಾಯಾಂಗ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆ ಹೇರಲು ಹೊರಟಿರುವ ಇಸ್ರೇಲಿನ ಹೊಸ ನೀತಿಯ ವಿರುದ್ಧ ಇಸ್ರೇಲಿಗರು ತಿರುಗಿಬಿದ್ದಿದ್ದು, ದೇಶಾದ್ಯಂತ ಪ್ರತಿಭಟನೆ ತೀವ್ರಗೊಂಡಿದೆ.


ಟೆಲ್ ಅವೀವ್’ನಲ್ಲಿ 80,000ಕ್ಕೂ ಹೆಚ್ಚು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇತರ ಇಸ್ರೇಲಿನ ಎಲ್ಲ ನಗರಗಳಲ್ಲೂ ಸಾಕಷ್ಟು ಜನರು ಸೇರಿದ ಪ್ರತಿಭಟನೆಗಳು ನಡೆದವು. ಕ್ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದಂತೆ ಇತ್ತೀಚಿನ ವರ್ಷಗಳಲ್ಲಿಯೇ ಅತಿ ದೊಡ್ಡ ಮಟ್ಟದ ಪ್ರತಿಭಟನೆ ಇದಾಗಿದೆ ಎನ್ನಲಾಗಿದೆ.


‘ಹುಚ್ಚುತನ ಬಿಡಿರಿ, ದೇಶಕ್ಕಾಗಿ ಹೋರಾಡಿರಿ’ ಮೊದಲಾದ ಫಲಕಗಳನ್ನು ಪ್ರತಿಭಟನಕಾರರು ಹಿಡಿದುಕೊಂಡಿದ್ದರು. ಇಸ್ರೇಲ್ ಅಧ್ಯಕ್ಷರಾದ ಇಸಾಕ್ ಹೆರ್ಜಾಗ್ ಮತ್ತು ಹೊಸ ಸರಕಾರದ ವಿರುದ್ಧ ಘೋಷಣೆಗಳು ಮೊಳಗಿದವು. ನೇತನ್ಯಾಹು ಸರಕಾರವು ದೇಶವನ್ನು ನುಂಗುತ್ತಿರುವಾಗ ಮೌನವಾಗಿದ್ದೀರಾ ಎಂದು ಅಧ್ಯಕ್ಷರನ್ನು ಹಳಿದರು.


ಕಳೆದ ವಾರ ಇಸ್ರೇಲಿನ ಕಾನೂನು ಮಂತ್ರಿ ಯೆರಿವ್ ಲೆವಿನ್ ರವರು ಹಲವು ನ್ಯಾಯಾಂಗ ಸುಧಾರಣೆಯ ಅಂಶಗಳನ್ನು ಪ್ರಕಟಿಸಿದರು. ಅದರಲ್ಲಿ ಮುಖ್ಯವಾದುದು ಸರಳ ಬಹುಮತದ ಮೂಲಕ ಸಂಸತ್ತು ಸುಪ್ರೀಂ ಕೋರ್ಟಿನ ಯಾವುದೇ ತೀರ್ಪನ್ನು ಬುಡಮೇಲು ಮಾಡಬಹುದು. ನ್ಯಾಯಾಧೀಶರ ನೇಮಕಾತಿ ಮತ್ತು ಕಾನೂನು ಸಲಹೆಗಾರರನ್ನು ನೇಮಿಸುವಲ್ಲಿ ಜನಪ್ರತಿನಿಧಿಗಳದೇ ಅಂತಿಮ ವಾಕ್ಯ ಎನ್ನುವುದೂ ಅದರಲ್ಲಿ ಸೇರಿದೆ.


ಈ ಸುಧಾರಣೆ ಹೆಸರಿನ ಹೇರಿಕೆಗಳು ಸರ್ವೋಚ್ಚ ನ್ಯಾಯಾಲಯವನ್ನು ದುರ್ಬಲಗೊಳಿಸುತ್ತದೆ ಹಾಗೂ ದೇಶದ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತದೆ ಎನ್ನುವುದು ಪ್ರತಿಭಟನಕಾರರ ಆತಂಕವಾಗಿದೆ.
ಎರಡು ವಾರದ ಹಿಂದೆ ಪ್ರಮಾಣ ವಚನ ಸ್ವೀಕರಿಸಿದ ಇಸ್ರೇಲಿನ ಹೊಸ ಮೈತ್ರಿ ಸರಕಾರವು ಆ ದೇಶದ ಇತಿಹಾಸದಲ್ಲಿಯೇ ಅತ್ಯಂತ ಬಲಪಂಥೀಯ ಮನೋಭಾವ ಮತ್ತು ನಿಲುವಿನದಾಗಿದೆ. ನ್ಯಾಯಾಂಗವನ್ನು ಆಡಳಿತ ನಡೆಸುವವರು ತಮ್ಮ ಕೈಗೊಂಬೆಯಂತೆ ಇಟ್ಟುಕೊಳ್ಳಲು ಯತ್ನಿಸುತ್ತಿರುವುದು ಈಗ ಎಲ್ಲ ಕಡೆ ಬಿಸಿಬಿಸಿ ಚರ್ಚೆಗೆ ಒಳಗಾಗಿರುವ ವಿಷಯವಾಗಿದೆ. ಇದೇ ಪ್ರತಿಭಟನೆಗೆ ಕಾರಣವೂ ಆಗಿದೆ.

Join Whatsapp
Exit mobile version