ನವದೆಹಲಿ: ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ದೇಶಾದ್ಯಂತ ನಡೆದ ಪ್ರತಿಭಟನೆ ವೇಳೆ ಪ್ರತಿಭಟನಾಕಾರರು ಅಲ್ಲಲ್ಲಿ ರೈಲುಗಳಿಗೆ ಬೆಂಕಿ ಹಚ್ಚಿದ್ದು, ಭಾರತೀಯ ರೈಲ್ವೆಗೆ 259 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಅಶ್ವಿನಿ ವೈಷ್ಣವ್ , ರಾಜ್ಯಸಭೆಗೆ ನೀಡಿದ ಲಿಖಿತ ವರದಿಯಲ್ಲಿ ಅಗ್ನಿಪಥ್ ಪ್ರತಿಭಟನೆ ವೇಳೆ ಸಾಕಷ್ಟು ಸ್ಥಳಗಳಲ್ಲಿ ರೈಲ್ವೆಯ ಆಸ್ತಿಗೆ ಮತ್ತು ರೈಲುಗಳಿಗೆ ಹಾನಿಯುಂಟಾಗಿದೆ. ಇನ್ನು ರೈಲುಗಳನ್ನು ಕ್ಯಾನ್ಸಲ್ ಮಾಡಿದ್ದರಿಂದಾಗಿಯೂ ನಷ್ಟ ಉಂಟಾಗಿದೆ. ರೈಲ್ವೆಯ ಆಸ್ತಿ ಮತ್ತು ರೈಲುಗಳಿಗೆ ಆದ ಒಟ್ಟು ಹಾನಿಯ ಪ್ರಮಾಣ ಬರೊಬ್ಬರಿ 259.44 ಕೋಟಿ ರೂ. ರಷ್ಟಿದೆ ಎಂದು ಹೇಳಿದ್ದಾರೆ.
ಇನ್ನು ಪ್ರತಿಭಟನೆ ಸಂದರ್ಭದಲ್ಲಿ ಸುಮಾರು 2000 ರೈಲುಗಳನ್ನು ಕ್ಯಾನ್ಸಲ್ ಮಾಡಲಾಗಿದ್ದು, ಟಿಕೆಟ್ ರೀಫಂಡ್ ಗಾಗಿಯೇ 102.96 ಕೋಟಿ ರೂ. ವ್ಯಯಿಸಲಾಗಿದೆ ಎಂದು ತಿಳಿಸಿದ್ದಾರೆ.
ಅಗ್ನಿಪಥ್ ಪ್ರತಿಭಟನೆ ವೇಳೆ ಪೂರ್ವ ರೈಲ್ವೆ ವಲಯಕ್ಕೆ ಹೆಚ್ಚು ಹಾನಿಯುಂಟಾಗಿದೆ. ಜೂನ್ 15 ರಿಂದ 23 ರವರೆಗೆ ಒಟ್ಟು 2132 ರೈಲುಗಳನ್ನು ಕ್ಯಾನ್ಸಲ್ ಮಾಡಲಾಗಿತ್ತು ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.