ಗಾಝಾ: ಇಸ್ರೇಲ್ ತನ್ನ ದಿಗ್ಬಂಧನವನ್ನು ತೆಗೆದುಹಾಕುವಂತೆ ಒತ್ತಾಯಿಸಲು ಮತ್ತು ಗಾಝಾದ ಪುನರ್ನಿರ್ಮಾಣಕ್ಕೆ ಅವಕಾಶ ನೀಡಲು ಬೇಕಾಗಿ ಗಾಜಾದಲ್ಲಿ ಫೆಲೆಸ್ತೀನ್ ಗುಂಪುಗಳು ಗಡಿಯುದ್ದಕ್ಕೂ ಪ್ರತಿಭಟನೆಗಳನ್ನು ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿವೆ.
ಗಾಝಾದ ಆಡಳಿತಗಾರರಾದ ಹಮಾಸ್ ನೇತೃತ್ವಕ್ಕೆ ಸೇರಿದ ಗುಂಪುಗಳು ಸುದ್ದಿಗೋಷ್ಠಿ ನಡೆಸಿ ಈ ವಿಷಯ ತಿಳಿಸಿವೆ.
ಆಕ್ರಮಿತ ಪೂರ್ವ ಜೆರುಸಲೇಂನಲ್ಲಿ ಅಲ್-ಅಕ್ಸಾ ಮಸೀದಿ ಕಾಂಪೌಂಡ್ ಸುಟ್ಟು ಹಾಕಿದ 52 ನೇ ವರ್ಷಾಚರಣೆಯ ಪ್ರಯುಕ್ತ ಮತ್ತು 2007ರಲ್ಲಿ ಹಮಾಸ್ ಆಡಳಿತಕ್ಕೆ ಬಂದ ಮೇಲೆ ಇಸ್ರೇಲ್ ಮೇಲೆ ಹೇರಿರುವ ದಿಗ್ಬಂಧನವನ್ನು ನೆನಪಿಸುವ ಸಲುವಾಗಿ ನೂರಾರು ಫೆಲೆಸ್ತೀನಿಯರು ಗಾಝಾ ಮತ್ತು ಇಸ್ರೇಲ್ ಅನ್ನು ಬೇರ್ಪಡಿಸುವ ಗಡಿಯಲ್ಲಿ ಪ್ರತಿಭಟನೆ ನಡೆಸಿದರು. ಆಗ ಇಸ್ರೇಲಿ ಸೈನ್ಯ ದಾಳಿ ಮಾಡಿದ್ದು, ಡಜನ್ ಗಟ್ಟಲೆ ಫೆಲೆಸ್ತೀನ್ ಪ್ರತಿಭಟನಕಾರರು ಗಾಯಗೊಂಡಿದ್ದರು.
ಫೆಲೆಸ್ತೀನ್ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ PFLP ಮತ್ತು ಇತರ ಸಣ್ಣ ಬಣಗಳು ಸುದ್ದಿಗೋಷ್ಠಿಯ ನಂತರ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ -“ಇಸ್ರೇಲಿ ಆಕ್ರಮಣದಿಂದಾಗಿ ಗಾಝಾ ಹಾನಿಗೊಳಗಾಗಿದ್ದು ಇಸ್ರೇಲ್ ಅದರ ಹೊಣೆ ಹೊರಬೇಕು. ಗಾಝಾದ ಪುನರ್ನಿರ್ಮಾಣವನ್ನು ಅದು ಮಾಡಿಕೊಡಬೇಕು” ಎಂದು ಒತ್ತಾಯಿಸಿದ್ದಾರೆ.
“ನಾವು ನಮ್ಮ ಜನರನ್ನು ಗಾಜಾದಲ್ಲಿ ದಂಗೆಯನ್ನು ಮುಂದುವರಿಸಲು ಕರೆ ನೀಡುತ್ತೇವೆ ಮತ್ತು ನಮ್ಮ ಚಟುವಟಿಕೆಯು ಒಂದು ಯೋಜನೆಯ ಪ್ರಕಾರ ಮುಂದುವರಿಯುತ್ತದೆ … ನಾವು ಇಸ್ರೇಲಿನ ಅಕ್ರಮಣವನ್ನು ಸಹಿಸುವುದಿಲ್ಲ” ಎಂದೂ ಅವರು ಹೇಳಿದ್ದಾರೆ.