ದೆಹಲಿಯ ಪೊಲೀಸ್ ಅಧಿಕಾರಿಯ ಅತ್ಯಾಚಾರ, ಹತ್ಯೆ ಖಂಡಿಸಿ ಉಡುಪಿಯಲ್ಲಿ ಪ್ರತಿಭಟನಾ ಜಾಥಾ

Prasthutha|

ಉಡುಪಿ: ದೆಹಲಿ ಡಿಫೆನ್ಸ್ ನ ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆ ನಡೆದ ಅತ್ಯಾಚಾರ ಹಾಗೂ ಬರ್ಬರ ಹತ್ಯೆಯನ್ನು ಖಂಡಿಸಿ ಮತ್ತು ವಿಶೇಷ ತನಿಖಾ ತಂಡವನ್ನು ನೇಮಿಸಿ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲೆ ವತಿಯಿಂದ ಉಡುಪಿಯಲ್ಲಿ ಪ್ರತಿಭಟನಾ ಜಾಥಾ ಹಾಗೂ ಸಾರ್ವಜನಿಕ ಸಭೆ ನಡೆಯಿತು.

- Advertisement -


ಪ್ರತಿಭಟನಾ ಜಾಥಾ ಉಡುಪಿ ಬೋರ್ಡ್ ಹೈಸ್ಕೂಲಿನಿಂದ ಪ್ರಾರಂಭಗೊಂಡು ಅಜ್ಜರಕಾಡಿನ ಹುತಾತ್ಮರ ಸ್ಮಾರಕ ಭವನದ ಬಳಿ ಸಮಾಪನಗೊಂಡಿತು.
ಮುಖ್ಯ ಭಾಷಣ ಮಾಡಿದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮಹಮ್ಮದ್ ತುಂಬೆ, ದೇಶದಲ್ಲಿ ಹೆಣ್ಣು ಮಕ್ಕಳ ಗೌರವ ಕಾಪಾಡಲು ಪ್ರತಿಭಟನೆ ನಡೆಸಬೇಕಾದ ಪರಿಸ್ಥಿತಿ ಬಂದಿದೆ. ದೆಹಲಿಯ ಡಿಫೆನ್ಸ್ ಪೊಲೀಸ್ ವಿಭಾಗದಲ್ಲಿ ಭ್ರಷ್ಟಾಚಾರ ಅವ್ಯಾವಹವಾಗಿತ್ತು. ವರ್ಮಾ ಎಂಬ ಅಧಿಕಾರಿ ಈಗಾಗಲೇ ಜೈಲಿನಲ್ಲಿದ್ದಾರೆ. ಅತ್ಯಂತ ರಹಸ್ಯವಾಗಿ ನಡೆಯುತ್ತಿದ್ದ ಈ ವ್ಯವಹಾರಗಳು ಹತ್ಯೆಯಾದ ಪೊಲೀಸ್ ಅಧಿಕಾರಿಗೆ ತಿಳಿದಿತ್ತು. ಈ ಹಿನ್ನೆಲೆಯಲ್ಲಿ ಅತ್ಯಂತ ಬರ್ಬರವಾಗಿ ಆ ಮಹಿಳಾ ಪೊಲೀಸ್ ಅಧಿಕಾರಿಯನ್ನು ಅತ್ಯಾಚಾರವೆಸಗಿ ಕೊಲ್ಲಲಾಗಿದೆ. ಆದರೆ ಪೋಸ್ಟ್ ಮಾರ್ಟಂ ವರದಿಯಲ್ಲಿ, ಅತ್ಯಾಚಾರವೇ ನಡೆದಿಲ್ಲ ಎಂದು ತಿಳಿಸಲಾಗಿದೆ. ಇವೆಲ್ಲವೂ ಷಡ್ಯಂತ್ರದ ಭಾಗವಾಗಿದೆ ಎಂದು ಅವರು ಆರೋಪಿಸಿದರು.
ಹತ್ಯೆ ಮಾಡಿದ್ದೇನೆ ಎಂದು ಶರಣಾದ ವ್ಯಕ್ತಿಯನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿಲ್ಲ. ನೇರವಾಗಿ ಆತನನ್ನು ಜೈಲಿಗೆ ಕಳುಹಿಸಲಾಗಿದೆ. ಶರಣಾದ ವ್ಯಕ್ತಿಯನ್ನು ಬಲಿಪಶು ಮಾಡಿ ಇಡೀ ಘಟನೆಯನ್ನು ಮುಚ್ಚಿಹಾಕಲು ಹಾಗೂ ತಪ್ಪಿತಸ್ಥರನ್ನು ರಕ್ಷಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.


ಕ್ರೈಸ್ತ ಧರ್ಮಗುರು ಫಾದರ್ ವಿಲಿಯಮ್ ಮಾರ್ಟಿಸ್ ಮಾತನಾಡಿ, ಗಡೀಪಾರು ಆದ ವ್ಯಕ್ತಿಯೊಬ್ಬ ನಮ್ಮ ಗೃಹ ಸಚಿವರಾಗಿರುವುದು ದೇಶದ ದುರಂತ. ಪೊಲೀಸ್ ಅಧಿಕಾರಿಯೊಬ್ಬರಿಗಾಗಿ ನಾವು ಪ್ರತಿಭಟನೆ ನಡೆಸಬೇಕಾಗಿ ಬಂದಿದೆ ಎಂದು ಹೇಳಿದರು.
ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ ರಾಜ್ಯ ಕಾರ್ಯದರ್ಶಿ ಮೌಲಾನ ಮುಅಝ್ಝಮ್ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿರುವ ಮುಸ್ಲಿಮ್ ಮಹಿಳೆಯೊಬ್ಬರನ್ನು ಕ್ರೂರವಾಗಿ ಅತ್ಯಾಚಾರವೆಸಗಿ ಕೊಲ್ಲಲಾಗಿದೆ. ಮುಸ್ಲಿಮರ ಮೇಲೆ ಇಂತಹ ಅನ್ಯಾಯ ನಡೆಯುತ್ತಿದ್ದರೂ ಯಾರೂ ಮಾತನಾಡುತ್ತಿಲ್ಲ, ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಒದಗಿಸಿಕೊಡಲು ನಾವೆಲ್ಲಾ ಒಂದಾಗಬೇಕಾಗಿದೆ ಎಂದರು.

- Advertisement -


ದಲಿತ ಸಂಘರ್ಷ ಸಮಿತಿ ಉಡುಪಿ ಜಿಲ್ಲಾ ಮುಖಂಡ ಉಮಾನಾಥ್ ಕೋಟ್ಯಾನ್ ಪಡುಬಿದ್ರಿ ಮಾತನಾಡಿ, ಅತ್ಯಾಚಾರಿಗಳಿಗೆ ಗಲ್ಫ್ ರಾಷ್ಟ್ರಗಳಲ್ಲಿ ಇರುವ ಶಿಕ್ಷೆಯನ್ನು ವಿಧಿಸಬೇಕು. ಹಾಗಾದರೆ ಮಾತ್ರ ಇಂತಹ ಪ್ರಕರಣ ಕಡಿಮೆಯಾಗಬಹುದು ಎಂದು ಹೇಳಿದರು.
NWF ನಾಯಕಿ ನಸೀಮಾ ಝರೈ ಮಾತನಾಡಿ, ಅತ್ಯಾಚಾರಕ್ಕೆ ಹೆಣ್ಣೇ ಕಾರಣ ಎಂದು ಹೇಳುವ ಮೂಲಕ ಅತ್ಯಾಚಾರಿಗಳನ್ನು ಸಮರ್ಥಿಸುವ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಆಕೆಯ ವಸ್ತ್ರ ಕಾರಣ, ಆಕೆಯ ನಡತೆ ಕಾರಣ ಎಂದು ಹೇಳುತ್ತಿದ್ದಾರೆ. ಗೃಹ ಸಚಿವ ಅರಗ ಜ್ಞಾನೇಂದ್ರ ಕೂಡ ಇಂತಹ ಹೇಳಿಕೆ ಕೊಟ್ಟಿದ್ದಾರೆ. ಇದು ಖಂಡನೀಯ ಎಂದರು.
ಸಭೆಯಲ್ಲಿ ನಮ್ಮ ನಾಡು ಒಕ್ಕೂಟದ ರಾಜ್ಯ ಕಾರ್ಯದರ್ಶಿ ಜಮೀರ್ ಅಹಮ್ಮದ್ ರಶಾದಿ, S D P I ಉಡುಪಿ ಜಿಲ್ಲಾ ಮುಖಂಡ ಶಾಹಿದ್ ಅಲಿ ಸ್ವಾಗತಿಸಿದರು, ಜಿಲ್ಲಾಧ್ಯಕ್ಷ ಇಲ್ಯಾಸ್ ಸಾಸ್ತಾನ ವಂದಿಸಿದರು. ಹನೀಫ್ ಮುಳೂರ್ ನಿರೂಪಿಸಿದರು.

Join Whatsapp