SDPI ಮೇಲೆ NIA ದಾಳಿ ಖಂಡಿಸಿ ತೊಕ್ಕೊಟ್ಟುವಿನಲ್ಲಿ ಪ್ರತಿಭಟನೆ

Prasthutha|

ತೊಕ್ಕೊಟ್ಟು: ಎಸ್ಡಿಪಿಐ ದಕ್ಷಿಣ ಕನ್ನಡ ಜಿಲ್ಲಾ ಕಚೇರಿಯ ಮೇಲೆ ರಾಷ್ಟ್ರೀಯ ತನಿಖಾ ದಳ ನಡೆಸಿದ ಅತಿಕ್ರಮಣದ ದಾಳಿ ಮತ್ತು ಪಾಪ್ಯುಲರ್ ಫ್ರಂಟ್ ನಾಯಕರ ಅಕ್ರಮ ಬಂಧನವನ್ನು ಖಂಡಿಸಿ ಸೋಶಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ( ಎಸ್ಡಿಪಿಐ ) ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿಯ ವತಿಯಿಂದ ತೊಕ್ಕೊಟ್ಟು ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಸಲಾಯಿತು.

- Advertisement -

ಪ್ರತಿಭಟನಾ ಸಭೆಯ ನೇತೃತ್ವವನ್ನು ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಇರ್ಷಾದ್ ಅಜ್ಜಿನಡ್ಕ ವಹಿಸಿದ್ದರು. ಮುಖ್ಯ ಭಾಷಣಕಾರರಾಗಿ ಮಾತನಾಡಿದ ಎಸ್ಡಿಪಿಐ ದ. ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು, ಬಿಜೆಪಿ ಹಾಗೂ ಆರೆಸ್ಸೆಸ್ ನಿರ್ದೇಶನದಂತೆ ರಾಷ್ಟ್ರೀಯ ತನಿಖಾ ದಳ ದೇಶಾದ್ಯಂತ ವಿರೋಧ ಪಕ್ಷಗಳ ನಾಯಕರ ಮೇಲೆ ದಾಳಿ ನಡೆಸುತ್ತಿವೆ. ಇದರ ಮುಂದುವರಿದ ಭಾಗವಾಗಿ RSS ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಪಾಪ್ಯುಲರ್ ಫ್ರಂಟ್ ನಾಯಕರ ಮನೆಗಳಿಗೆ ದಾಳಿ ನಡೆಸಿ ಅವರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸುವ ಹುನ್ನಾರ ನಡೆಸಿದೆ. ಕೇಂದ್ರ ಹಾಗೂ ರಾಜ್ಯ ಗೃಹ ಸಚಿವರು ಎಸ್ಡಿಪಿಐಯನ್ನು ಬ್ಯಾನ್ ಮಾಡುತ್ತೇವೆ ಎಂದು ಹೇಳುತ್ತಿದ್ದು, ಬ್ಯಾನ್ ಮಾಡಲು ಇದೇನೂ ಗೂಡಂಗಡಿಯಲ್ಲ. ಇದು ಚುನಾವಣಾ ಆಯೋಗದಲ್ಲಿ ನೋಂದಾಯಿತವಾದ ಒಂದು ರಾಜಕೀಯ ಪಕ್ಷ ಎಂದು ಗುಡುಗಿದರು.

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದರೆ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಝಾಹಿದ್ ಮಲಾರ್, ಕೆಲವು ನಾಯಕರ ಬಂಧನ ಅಥವಾ ದಾಳಿಯಿಂದ ನಮ್ಮ ಶಕ್ತಿ ಕುಂದಿಸಲು ಸಾಧ್ಯವಿಲ್ಲ. ಈ ಕ್ರಾಂತಿಕಾರಿ ಚಳುವಳಿ ಒಂದು ಮನೋಸ್ಥಿತಿಯಾಗಿ ಮಾರ್ಪಟ್ಟಿದ್ದು, ನೀವು ತುಳಿದಷ್ಟು ಮತ್ತೆ ಹೆಚ್ಚು ಹೆಚ್ಚು ಚಿಗುರುತ್ತದೆ ಎಂದರು.

- Advertisement -

ಪ್ರತಿಭಟನಾ ಸಭೆಯಲ್ಲಿ ರಾಜ್ಯ ನಾಯಕ ಅಕ್ರಮ್ ಹಸನ್, ಜಿಲ್ಲಾ ಕಾರ್ಯದರ್ಶಿ ಸುಹೈಲ್ ಖಾನ್, ಜಿಲ್ಲಾ ಸಮಿತಿ ಸದಸ್ಯ ಅಶ್ರಫ್ ಕೆಸಿ ರೋಡ್, ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ನ ಜಾಫರ್ ಸಾದಿಕ್ ಫೈಝಿ, ವಿಮೆನ್ ಇಂಡಿಯಾ ಮೂವ್ಮೆಂಟ್’ನ ಮಿಸ್ರಿಯಾ ಕಣ್ಣೂರು, ಉಳ್ಳಾಲ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಇಸ್ಮಾಯಿಲ್ ಉಳ್ಳಾಲ್, ಪಾವೂರು ಗ್ರಾ. ಪಂ ಉಪಾಧ್ಯಕ್ಷ ಅನ್ಸಾರ್ ಇನೋಳಿ, ಉಳ್ಳಾಲ ನಗರಸಭಾ ಕೌನ್ಸಿಲರ್ ರಮೀಝ್, ಅಸ್ಗರ್ ಅಲಿ ಮತ್ತಿತರು ಪಾಲ್ಗೊಂಡರು. ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೂ ಉಪಸ್ಥಿತರಿದ್ದರು.

Join Whatsapp