ಹಾವೇರಿ: ‘ಜೂ.29ರಂದು ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಶಿಗ್ಗಾವಿ ಪಟ್ಟಣದಲ್ಲಿರುವ ಸಿಎಂ ಬೊಮ್ಮಾಯಿ ನಿವಾಸದ ಎದುರು ಧರಣಿ ಹಮ್ಮಿಕೊಳ್ಳಲಾಗಿದೆ’ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಪಂಚಮಸಾಲಿ ಸಮಾಜದ ಪೂರ್ವಭಾವಿ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘2ಎ ಮೀಸಲಾತಿಗೆ ಆಗ್ರಹಿಸಿ ಕಳೆದ ವರ್ಷ ಪಾದಯಾತ್ರೆ ನಡೆಸಿ ಹಕ್ಕೊತ್ತಾಯ ಮಾಡಲಾಗಿತ್ತು. ಆಗಿನ ಮುಖ್ಯಮಂತ್ರಿ ಹುದ್ದೆಗೇರಿದ ಬಸವರಾಜ ಬೊಮ್ಮಾಯಿ ಮೀಸಲಾತಿ ನೀಡುವ ಭರವಸೆ ನೀಡಿದ್ದರೂ, ಇನ್ನೂ ಈಡೇರಿಸಿಲ್ಲ’ ಎಂದರು.
‘ಈಗಾಗಲೇ ನಾಲ್ಕು ಹಂತದ ಹೋರಾಟ ಮುಗಿದಿದ್ದು, ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸುವ ಕೆಲಸ ಮಾಡಿಲ್ಲ. ಸತ್ಯಾಗ್ರಹ ನಡೆಸುವ ಮೂಲಕ ರಾಜ್ಯದಾದ್ಯಂತ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ ಎದುರು ಹೋರಾಟಕ್ಕೆ ಹಾವೇರಿಯಿಂದ ಚಾಲನೆ ನೀಡಲಾಗುವುದು’ ಎಂದು ತಿಳಿಸಿದರು.