Home ಟಾಪ್ ಸುದ್ದಿಗಳು ಕ್ರೈಸ್ತರ ಮೇಲಿನ ದಾಳಿ ಖಂಡಿಸಿ ಬೀದರ್ ನಲ್ಲಿ ಬೃಹತ್ ಪ್ರತಿಭಟನೆ

ಕ್ರೈಸ್ತರ ಮೇಲಿನ ದಾಳಿ ಖಂಡಿಸಿ ಬೀದರ್ ನಲ್ಲಿ ಬೃಹತ್ ಪ್ರತಿಭಟನೆ

ಬೀದರ್: ಕ್ರೈಸ್ತರ ಮೇಲೆ ಹಾಗೂ ಚರ್ಚ್ ಗಳ ಮೇಲೆ ಸಂಘಪರಿವಾರದಿಂದ ನಡೆಯುತ್ತಿರುವ ದಾಳಿಗಳನ್ನು ಖಂಡಿಸಿ ಬೀದರ್ ನಲ್ಲಿ ಯುನೈಟೆಡ್ ಕ್ರಿಶ್ಚಿಯನ್ ವೇದಿಕೆ, ಕರ್ನಾಟಕ ಕ್ರೈಸ್ತರ ಸಂಘಟನೆ, ಹಾಗೂ ಇತರ ಕ್ರೈಸ್ತ ಸಂಘಟನೆಗಳಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು.


ಈ ಪ್ರತಿಭಟನಾ ಮೆರವಣಿಗೆಯಲ್ಲಿ ಕ್ರೈಸ್ತಪರ ಹೋರಾಟಗಾರರಾದ ಸ್ಟ್ಯಾನಿ ಪಿಂಟೋ, ಅಲ್ಪಸಂಖ್ಯಾತ ಆಯೋಗದ ಮಾಜಿ ಸದಸ್ಯ ಮೆಟಿಲ್ಡ ಡಿಸೋಜ ಸೇರಿದಂತೆ ಅನೇಕ ಮುಖಂಡರು, ಹೋರಾಟಗಾರರು ಪಾಲ್ಗೊಂಡಿದ್ದರು. ಅಂಬೇಡ್ಕರ್ ವೃತ್ತದಿಂದ ಹೊರಟ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನೂರಾರು ಸಂಖ್ಯೆಯಲ್ಲಿ ಕ್ರೈಸ್ತ ಬಾಂಧವರು ಘೋಷಣೆ ಕೂಗುತ್ತಾ ಕ್ರೈಸ್ತರ ಮೇಲಿನ ದಾಳಿಯನ್ನು ಖಂಡಿಸಿದರು.


ಕ್ರೈಸ್ತಪರ ಹೋರಾಟಗಾರ ಸ್ಟ್ಯಾನಿ ಪಿಂಟೋ, ಕ್ರೈಸ್ತರು ಕೂಡ ಭಾರತೀಯರೇ ಆಗಿದ್ದಾರೆ. ಅವರನ್ನು ತಾರತಮ್ಯದಿಂದ ನೋಡುತ್ತಿರುವುದು ಸರಿಯಲ್ಲ. ಮತಾಂತರದ ಹೆಸರಿನಲ್ಲಿ ಅವರ ಚರ್ಚ್ ಗಳು ಮತ್ತು ಧರ್ಮಗುರುಗಳ ಮೇಲೆ ಹಲ್ಲೆ ನಡೆಸುತ್ತಿರುವುದು ಖಂಡನೀಯ. ಇಂತಹ ದಾಳಿಗಳನ್ನು ತಡೆಯಬೇಕಾಗಿದೆ. ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಇಂತಹ ದಾಳಿಕೋರರ ಹೆಡೆಮುರಿ ಕಟ್ಟಬೇಕು, ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.


ಚರ್ಚ್ ಗಳ ಸಮೀಕ್ಷೆಗೆ ಮುಂದಾಗಿರುವುದು ತಾರತಮ್ಯ ನೀತಿಯಾಗಿದೆ. ಯಾವುದೇ ಧರ್ಮದವರಿಗೆ ಇಲ್ಲದ ನೀತಿಯನ್ನು ಕ್ರೈಸ್ತರ ಮೇಲೆ ಹೇರುತ್ತಿರುವುದು ಸರಿಯಲ್ಲ. ಇದರ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಲಾಗುವುದು. ಬೆಂಗಳೂರಿನಲ್ಲಿ ರಾಜ್ಯಮಟ್ಟದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.

Join Whatsapp
Exit mobile version