Home ಕರಾವಳಿ ವೈದ್ಯಕೀಯ ನಿರ್ಲಕ್ಷ್ಯದಿಂದ ಕಾಲು ಕಳೆದುಕೊಂಡ ನೌಷಾದ್ ಪರ ಧರಣಿ: ಮಾತುಕತೆಗೆ ಬಂದ ಕೆ.ಎಸ್.ಹೆಗ್ಡೆ ಆಸ್ಪತ್ರೆ

ವೈದ್ಯಕೀಯ ನಿರ್ಲಕ್ಷ್ಯದಿಂದ ಕಾಲು ಕಳೆದುಕೊಂಡ ನೌಷಾದ್ ಪರ ಧರಣಿ: ಮಾತುಕತೆಗೆ ಬಂದ ಕೆ.ಎಸ್.ಹೆಗ್ಡೆ ಆಸ್ಪತ್ರೆ

ಮಂಗಳೂರು: ಕೆ.ಎಸ್. ಹೆಗ್ಡೆ ಮೆಡಿಕಲ್ ಕಾಲೇಜು ಆಸ್ಪತ್ರೆಯ ನಿರ್ಲಕ್ಷ್ಯ, ತಪ್ಪಾದ ಚಿಕಿತ್ಸೆಗೆ ಕಾಲು ಕಳೆದುಕೊಂಡ ಕುರ್ನಾಡು ಗ್ರಾಮದ ನೌಷಾದ್ ಎಂಬ ಯುವಕನಿಗೆ ಪರಿಹಾರ ಒದಗಿಸಲು ಆಗ್ರಹಿಸಿ ನಾಗರಿಕ ಸಮಿತಿ ನೇತೃತ್ವದಲ್ಲಿ ಮಂಗಳವಾರ ದೇರಳಕಟ್ಟೆಯಲ್ಲಿ ಬೃಹತ್ ಸಾಮೂಹಿಕ ಪ್ರತಿಭಟನೆ ನಡೆಯಿತು.
ಪ್ರತಿಭಟನೆಗೆ ಮಣಿದ ಕೆ.ಎಸ್. ಹೆಗ್ಡೆ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಆಡಳಿತ ಮಂಡಳಿಯ ಪದಾಧಿಕಾರಿಗಳು ಪ್ರತಿಭಟನಕಾರರನ್ನು ಮಾತುಕತೆಗೆ ಕರೆದು ಒಂದು ವಾರದಲ್ಲಿ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದರು.
ಪ್ರತಿಭಟನಕಾರರನ್ನು ಉದ್ದೇಶಿಸಿ ಬರಹಗಾರ ಇಸ್ಮತ್ ಫಜೀರ್ ಮಾತನಾಡಿ, ಕೆ. ಎಸ್. ಹೆಗ್ಡೆ ಮೆಡಿಕಲ್ ಕಾಲೇಜು ಆಸ್ಪತ್ರೆಯ ತಪ್ಪು ಚಿಕಿತ್ಸೆ, ಗಂಭೀರ ಕರ್ತವ್ಯ ಲೋಪ, ನಿರ್ಲಕ್ಷ್ಯದಿಂದಾಗಿ ನೌಷಾದ್ ತನ್ನ ಎಡಗಾಲನ್ನು ಕಳೆದುಕೊಂಡಿದ್ದಾರೆ. ಆಗಿರುವ ತಪ್ಪಿಗಾಗಿ ಪರಿಹಾರ ಧನ ಕೊಡುವುದಾಗಿ ಒಪ್ಪಿಕೊಂಡು ಆಸ್ಪತ್ರೆ ಆಡಳಿತ ಒಂದು ವರ್ಷಕ್ಕೂ ಹೆಚ್ಚು ಕಾಲ ನೌಷಾದ್ ಅವರನ್ನು ಅಲೆದಾಡಿಸಿ ಈಗ ನಡು ಬೀದಿಯಲ್ಲಿ ಕೈಬಿಟ್ಟಿದೆ. ವಿದ್ಯಾರ್ಥಿಗಳಿಂದ ಕೋಟಿಗಟ್ಟಲೆ ಶುಲ್ಕ, ಡೊನೇಶನ್ ವಸೂಲಿ ಮಾಡುವ ಶ್ರೀಮಂತ ವೈದ್ಯಕೀಯ ಕಾಲೇಜು ನಿರ್ಲಕ್ಷ್ಯ ವಹಿಸಿ ನೌಷಾದ್ ಎಂಬ ಯುವಕ ಕಾಲು ಕಳೆದುಕೊಳ್ಳುವಂತೆ ಮಾಡಿದ್ದರೂ ಪರಿಹಾರ ನೀಡಲು ಸಂತ್ರಸ್ತ ಕುಟುಂಬವನ್ನು ಸತಾಯಿಸಿದೆ. ಆದ್ದರಿಂದ ನಮ್ಮ ಬೇಡಿಕೆಗೆ ಕಾಲೇಜು ಆಡಳಿತ ಮಂಡಳಿ ಮಣಿಯದಿದ್ದರೆ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಹೇಳಿದರು.
ಎಸ್ ಡಿಪಿಐ ಮುಖಂಡ ಅಶ್ರಫ್ ಮೋನು ಮಾತನಾಡಿ, ಪ್ರತಿಭಟನೆಯ ನಂತರ ಕಾಲೇಜು ಆಡಳಿತ ಮಂಡಳಿಯವರು ಮಾತುಕತೆ ನಡೆಸಿದ್ದಾರೆ. ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಒಂದು ವಾರದೊಳಗೆ ಭರವಸೆ ಈಡೇರದಿದ್ದರೆ ಮುಂದೆ ನಡೆಯುವ ಎಲ್ಲಾ ಹೋರಾಟಗಳಿಗೆ ಪಕ್ಷ ಸಂಪೂರ್ಣ ಬೆಂಬಲ ನೀಡಲಿದೆ ಎಂದು ತಿಳಿಸಿದರು.
ಡಿವೈಎಫ್’ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ವಿದೇಶದಲ್ಲಿ ಉದ್ಯೋಗದಲ್ಲಿದ್ದ ನೌಷಾದ್ ಊರಿಗೆ ಬಂದಾಗ ಸಣ್ಣ ಅಪಘಾತಕ್ಕೊಳಗಾಗಿ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ದಾಖಲಾಗಿದ್ದ. ಆದರೆ ವೈದ್ಯರ ನಿರ್ಲಕ್ಷ್ಯದಿಂದಾಗಿ ತನ್ನ ಕಾಲನ್ನು ಕಳೆದುಕೊಳ್ಳುವಂತಾಯಿತು. ಆದರೆ ಒಂದು ವರ್ಷ ಕಳೆದರೂ ತನ್ನ ತಪ್ಪನ್ನು ಒಪ್ಪಿಕೊಂಡು ಪರಿಹಾರ ನೀಡದೆ ನಿರ್ಲಕ್ಷ್ಯ ವಹಿಸಿದ್ದರಿಂದ ಇಂದು ಬೀದಿಗಿಳಿಯಬೇಕಾಗಿ ಬಂತು. ಈಗ ಕಾಲೇಜು ಆಡಳಿತ ಮಂಡಳಿ ಮಾತುಕತೆಗೆ ಬಂದಿದೆ. ಆದರೆ ನಮ್ಮ ಬೇಡಿಕೆ ಈಡೇರದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

Join Whatsapp
Exit mobile version