Home ಟಾಪ್ ಸುದ್ದಿಗಳು ಹಳೆ ಪಿಂಚಣಿ, ಸಂಜೀವಿನಿ ಯೋಜನೆಗಳ ಜಾರಿಗಾಗಿ ಆಗ್ರಹಿಸಿ ನಡೆಸುತ್ತಿರುವ ಹೋರಾಟ 135ನೇ ದಿನಕ್ಕೆ

ಹಳೆ ಪಿಂಚಣಿ, ಸಂಜೀವಿನಿ ಯೋಜನೆಗಳ ಜಾರಿಗಾಗಿ ಆಗ್ರಹಿಸಿ ನಡೆಸುತ್ತಿರುವ ಹೋರಾಟ 135ನೇ ದಿನಕ್ಕೆ

►ಬಜೆಟ್’ನಲ್ಲಿ ಪರಿಹಾರ ನೀಡದ ಸರ್ಕಾರದ ವಿರುದ್ಧ ಸೋಮವಾರ ವಿಧಾನಸೌಧಕ್ಕೆ ಮುತ್ತಿಗೆ


ಬೆಂಗಳೂರು: ನಿಶ್ಚಿತ ಪಿಂಚಣಿ (ಹಳೇ ಪಿಂಚಣಿ ಯೋಜನೆ) ಮತ್ತು ಆರೋಗ್ಯ ಸಂಜೀವಿನಿ ಯೋಜನೆಗಳನ್ನು ಅನುದಾನಿತ ಶಾಲಾ, ಕಾಲೇಜು ನೌಕರರಿಗೆ ಜಾರಿಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಮುಷ್ಕರ [ಪೆ.20ಕ್ಕೆ] 135 ದಿನ ತಲುಪಲಿದ್ದು, ಬಜೆಟ್ ನಲ್ಲಿ ಬೇಡಿಕೆ ಈಡೇರಿಸದ ಹಿನ್ನೆಲೆಯಲ್ಲಿ ಸೋಮವಾರ[ಫೆ.20] ವಿಧಾನಸೌಧಕ್ಕೆ ಮುತ್ತಿಗೆ ಹಾಕಿ, ನಂತರ ಅಹೋರಾತ್ರಿ ಅಮರಣಾಂತ ಉಪವಾಸ ನಡೆಸಲು ನಿರ್ಧರಿಸಿದೆ.


ಫ್ರೀಡಂ ಪಾರ್ಕ್’ನಲ್ಲಿಂದು ಸುದ್ದಿಗಾರರಿಗೆ ಈ ಮಾಹಿತಿ ನೀಡಿದ ಸಂಘದ ರಾಜ್ಯಾಧ್ಯಕ್ಷ ಜಿ. ಹನುಮಂತಪ್ಪ, ನಮ್ಮ ಹೋರಾಟ, ಮನವಿಗಳಿಗೆ ಸರ್ಕಾರ ಕಿಂಚಿತ್ತೂ ಮನ್ನಣೆ ನೀಡಿಲ್ಲ. ನಮ್ಮ ಯಾವುದೇ ಬೇಡಿಕೆಗಳನ್ನು ಸರ್ಕಾರ ಈಡೇರಿಸಿಲ್ಲ. ಈ ನಿರ್ಲಕ್ಷ್ಯ ಧೋರಣೆ ವಿರುದ್ಧ ಫೆ.20 ರಂದು ಸಹಸ್ರಾರು ನೌಕರರು ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತೇವೆ ಎಂದರು.


ವಿಧಾನಮಂಡಲ ಅಧಿವೇಶನ ನಡೆಯುತ್ತಿರುವ ಈ ಸಂದರ್ಭದಲ್ಲಿ ಸರ್ಕಾರ ನಮ್ಮ ಬೇಡಿಕೆ ಈಡೇರಿಸಬಹುದು. ಬಜೆಟ್ ನಲ್ಲಿ ಸೂಕ್ತ ಪರಿಹಾರ ದೊರೆಯಬಹುದು ಎನ್ನುವ ನಿರೀಕ್ಷೆ ಹುಸಿಯಾಗಿದೆ. ಅಕ್ಟೋಬರ್ 7 ರಿಂದ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು, 2006, ಏಪ್ರಿಲ್ 1ಕ್ಕೂ ಮುನ್ನ ನೇಮಕವಾದವರನ್ನು ಪಿಂಚಣಿ ವ್ಯವಸ್ಥೆಗೆ ಪರಿಗಣಿಸಿ, ನಿವೃತ್ತಿಯಾದ ದಿನಾಂಕದಂದು ವೇತನಕ್ಕೆ ಅನುಗುಣವಾಗಿ “ಹಳೆಯ ನಿಶ್ಚಿತ ಪಿಂಚಣಿ” ಯೋಜನೆ ನೀಡಬೇಕು. ಈಗಾಗಲೇ ಬರಿಗೈಯಲ್ಲಿ ನಿವೃತ್ತಿ ಹಾಗೂ ನಿಧನ ಹೊಂದಿದ ಕುಟುಂಬಗಳಿಗೆ ಈ ಸೌಲಭ್ಯವನ್ನು ಕೂಡಲೇ ಜಾರಿಗೆ ತರಬೇಕು. ಸರ್ಕಾರಿ ನೌಕರರಿಗೆ ನೀಡುತ್ತಿರುವ ಜ್ಯೋತಿ ಸಂಜೀವಿನಿ ಮತ್ತಿತರ ವೈದ್ಯಕೀಯ ಸೌಲಭ್ಯ ಗಳನ್ನು ತಾರತಮ್ಯ ಇಲ್ಲದೇ ಅನುದಾನಿತ ನೌಕರರಿಗೂ ನೀಡಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಗಳಾಗಿವೆ ಎಂದರು.


ನಮ್ಮ ಪ್ರಾಮಾಣಿಕ ಮತ್ತು ಶಾಂತಿಯುತ ಹೋರಾಟವನ್ನು ಅಂತ:ಕರಣದಿಂದ ಈಡೇರಿಸುವ ನಿಟ್ಟಿನಲ್ಲಿ ಸ್ವಲ್ಪವೂ ಕಾಳಜಿ ತೋರುತ್ತಿಲ್ಲ. ಸರಕಾರದ ಘೋರ ಅನ್ಯಾಯ ಖಂಡಿಸಿ ಬೃಹತ್ ಹೋರಾಟಕ್ಕೆ ಸಜ್ಜಾಗಿದ್ದೇವೆ. “ಅನುದಾನಿತ ಪಿಂಚಣಿ ವಂಚಿತ ನೌಕರರ ನಡೆ ಬೆಂಗಳೂರು ಫ್ರೀಡಂ ಪಾರ್ಕ್ ಕಡೆ” ಎಂಬ ಘೋಷ ವಾಕ್ಯದೊಂದಿಗೆ ಹೋರಾಟ ಆರಂಭಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ. ಪಿಂಚಣಿ ಸೌಲಭ್ಯ ದೊರೆಯದೇ ಈಗಾಗಲೇ ಸುಮಾರು ೩೦೦೦ಕ್ಕೂ ಹೆಚ್ಚು ನೌಕರರು ಕೊನೆಯ ತಿಂಗಳ ಸಂಬಳ ಮಾತ್ರ ಪಡೆದು ಬರಿಗೈಯಲ್ಲಿ ನಿವೃತ್ತಿಯಾಗಿದ್ದಾರೆ. ಅನೇಕರು ಸೇವೆಯಲ್ಲಿರುವಾಗಲೇ ಮರಣಹೊಂದಿದ್ದು, ಹನ್ನೆರಡು ವರ್ಷಗಳ ಹೋರಾಟಕ್ಕೆ ಯಾವುದೇ ಮನ್ನಣೆ ನೀಡುತ್ತಿಲ್ಲ ಎಂದು ಜಿ. ಹನುಮಂತಪ್ಪ ಅಸಮಧಾನ ವ್ಯಕ್ತಪಡಿಸಿದರು.

Join Whatsapp
Exit mobile version