Home ಟಾಪ್ ಸುದ್ದಿಗಳು ಸ್ಟ್ಯಾನ್ ಸ್ವಾಮಿ ಕೊಲೆ ಖಂಡಿಸಿ ನಾಗರಿಕ ಹೋರಾಟ ಸಂಘಟನೆಗಳಿಂದ ಪ್ರತಿಭಟನೆ

ಸ್ಟ್ಯಾನ್ ಸ್ವಾಮಿ ಕೊಲೆ ಖಂಡಿಸಿ ನಾಗರಿಕ ಹೋರಾಟ ಸಂಘಟನೆಗಳಿಂದ ಪ್ರತಿಭಟನೆ

ಬೆಂಗಳೂರು, ಆ.3: ಅದಿವಾಸಿಗಳ ಹಕ್ಕುಗಳ ಹೋರಾಟಗಾರ ಫಾ. ಸ್ಟ್ಯಾನ್ ಸ್ವಾಮಿ ಸಾವು ಖಂಡಿಸಿ ಮತ್ತು ನ್ಯಾಯಕ್ಕಾಗಿ ಆಗ್ರಹಿಸಿ ನಾಗರಿಕ ಹೋರಾಟ ಸಂಘಟನೆಯು ಬೆಂಗಳೂರಿನ ಮೌರ್ಯ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿ ಸರಕಾರದ ದಬ್ಬಾಳಿಕೆಯ ವಿರುದ್ಧ ಕಳವಳ ವ್ಯಕ್ತಪಡಿಸಿದೆ.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಪ್ರೊ. ನಾಗೇಂದ್ರ, ಎಲ್ಲೆಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದೆ, ಅಲ್ಲೆಲ್ಲಾ ಜನರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ನಾಗರಿಕತ್ವವನ್ನು ನಾಶ ಮಾಡುವ NRC, CAA ತಂದು ಜನರನ್ನು ಬೀದಿಗೆ ತಂದರು. ಪ್ರಭುತ್ವವು ಜನರನ್ನು ಸಾಯಿಸುವಂತಹ ಕೆಲಸ ಮಾಡುತ್ತಿದೆ. ಈ ಮೂಲಕ ಸರಕಾರವೇ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡುತ್ತಿದೆ ಎಂದು ಆರೋಪಿಸಿದರು.

ಕರಾಳ ಕಾಯ್ದೆಯ ನೆಪದಲ್ಲಿ ಫಾ. ಸ್ಟ್ಯಾನ್ ಸ್ವಾಮಿಯನ್ನು ಬಂಧಿಸಿ ಜೈಲಿನಲ್ಲಿ ಕೊಲೆ ಮಾಡಲಾಗಿದೆ. ಸ್ಟ್ಯಾನ್ ಸ್ವಾಮಿ ಹತ್ಯೆಯು ಪ್ರಜಾಪ್ರಭುತ್ವದ ಕೊಲೆಯಾಗಿದೆ. ಫಾ. ಸ್ಟ್ಯಾನ್ ಸ್ವಾಮಿಯವರಿಗೆ ನ್ಯಾಯ ಸಿಗಬೇಕು. ಸುಳ್ಳು ಸಾಕ್ಷಿಯಲ್ಲಿ ಬಂಧಿಸಿ ಜೈಲಿನಲ್ಲಿ ಅವರನ್ನು ಕೊಲೆ ಮಾಡಲಾಗಿದೆ. ಯುಎಪಿಎ ಅಡಿಯಲ್ಲಿ ಬಂಧನವಾಗಿರುವ ನಿರಪರಾಧಿಗಳನ್ನು ತಕ್ಷಣ ಬಿಡುಗಡೆ ಮಾಡಬೇಕು. ಅದೇ ರೀತಿ ಡಿಜೆ ಹಳ್ಳಿ ಘಟನೆಯಲ್ಲೂ ಕರಾಳ ಕಾಯ್ದೆ UAPA ಅಡಿ ಬಂಧಿಸಿರುವ ನಿರಪರಾಧಿಗಳನ್ನು ಬಿಡುಗಡೆಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಲ್ಲದೆ ದೇಶದ ಸಂವಿಧಾನವನ್ನು, ಪ್ರಜಾಪ್ರಭುತ್ವವನ್ನು ಉಳಿಸಬೇಕಾಗಿರುವ ಅವಶ್ಯಕತೆ ದೇಶದ ಜನರ ಮುಂದಿದೆ ಎಂದು ಹೇಳಿದ್ದಾರೆ.

ದಲಿತ ಹೋರಾಟಗಾರ ಮಾವಳ್ಳಿ ಶಂಕರ್ ಮಾತನಾಡಿ, ದೇಶದಲ್ಲಿ ಇಂದು ಸುಳ್ಳಿನ ಡೆಮಾಕ್ರಸಿ ಅಸ್ತಿತ್ವದಲ್ಲಿದೆ. ಅದರ ಮೂಲಕ ಬಡವರನ್ನು ಬಲಿ ಪಡೆಯಲಾಗುತ್ತಿದೆ. ಪ್ರಭುತ್ವವು ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ಬ್ರಿಟಿಷ್ ಕಾಲದ ಕಾನೂನನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ರಾಜಕೀಯ ಪಕ್ಷಗಳು ಜನರನ್ನು ವಂಚಿಸುತ್ತಲೇ ಬರುತ್ತಿದೆ. ಮತ್ತು ಅವರೆಲ್ಲರೂ ಬಂಡವಾಳಶಾಹಿಗಳ ಏಜೆಂಟರು ಎಂದು ಹೇಳಿದರು. ರೈತ ನಾಯಕರಾದ ಬಡಗಲಪುರ ನಾಗೇಂದ್ರ, ದಲಿತ ನಾಯಕರಾದ ಗುರುಪ್ರಸಾದ್ ಮತ್ತಿತರು ಪ್ರತಿಭಟನೆಯನ್ನುದ್ದೇಶಿ ಮಾತನಾಡಿದರು.

Join Whatsapp
Exit mobile version