ಗಾಂಧಿನಗರ: ಘೋಗಾದ ದಲಿತ ಆರ್‌ಟಿಐ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಸಬ್ ಇನ್ಸ್’ಪೆಕ್ಟರ್ ಪಿ.ಆರ್.ಸೋಲಂಕಿಯನ್ನು ಬಂಧಿಸದಿರುವ ಸರ್ಕಾರದ ನಿಷ್ಕ್ರಿಯತೆಯನ್ನು ವಿರೋಧಿಸಿ ರ‍್ಯಾಲಿ ನಡೆಸಿದ ಗುಜರಾತಿನ ಸ್ವತಂತ್ರ ಶಾಸಕ ಜಿಗ್ನೇಶ್ ಮೇವಾನಿ ಅವರನ್ನು ಬಂಧಿಸಲಾಗಿದೆ.
ವಡ್ಗಾಂವ್ ಕ್ಷೇತ್ರದ ಶಾಸಕರಾದ ಮೇವಾನಿ ಮತ್ತು ಇತರ 20 ಮಂದಿಯನ್ನು ಸೆಕ್ರೇಟರಿಯೇಟ್‌ಗೆ ಮಾರ್ಚ್ ನಡೆಸುತ್ತಿದ್ದಾಗ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಾಂಧಿನಗರದ ಶಾಸಕ ಕ್ವಾರ್ಟರ್ಸ್‌ನಿಂದ ಪ್ರಾರಂಭವಾದ ಪ್ರತಿಭಟನಾ ರ‍್ಯಾಲಿಯನ್ನು ತಡೆದ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ. ಮಾರ್ಚ್ 3 ರಂದು ಪೊಲೀಸ್ ಭದ್ರತೆಯಲ್ಲಿರುವಾಗಲೇ ದಲಿತ ಆರ್‌ಟಿಐ ಕಾರ್ಯಕರ್ತ ಅಮ್ರಾಭಾಯ್ ಬೋರಿಚಾ ಅವರು ತನ್ನ ಮನೆಯೊಳಗೆ ಕ್ರೂರ ಹತ್ಯೆಗೊಳಗಾದ ಪ್ರಕರಣದಲ್ಲಿ ಸರ್ಕಾರದ ನಿಷ್ಕ್ರಿಯತೆಯ ವಿರುದ್ಧ ರ‍್ಯಾಲಿ ನಡೆಸುವುದಾಗಿ ಮೇವಾನಿ ಹೇಳಿದ್ದರು. ಮೇಲ್ಜಾತಿಯಾದ ಕ್ಷತ್ರಿಯ ಗುಂಪು ಬೋರಿಚಾನನ್ನು ಕೊಳವೆ ಮತ್ತು ಕತ್ತಿಗಳಿಂದ ಕೊಚ್ಚಿ ಕೊಲೆ ನಡೆಸಿದೆ ಎಂದು ಮೃತನ ಕುಟುಂಬ ಆರೋಪಿಸಿದೆ.