ಪ್ರವಾದಿ ನಿಂದನೆ: ಭುಗಿಲೆದ್ದ ಜಾಗತಿಕ ಆಕ್ರೋಶ

Prasthutha: June 17, 2022
✍️ಇಲ್ಯಾಸ್ ಮುಹಮ್ಮದ್

►ವಿಶ್ವದ ಮುಂದೆ ಕುಗ್ಗಿದ ಭಾರತ

ಜಗತ್ತಿನ ಮುಂದೆ ಭಾರತದ ಮಾನ ಮೂರಾಬಟ್ಟೆಯಾಗಿರುವುದು ಇಂದು ಹೊಸತೇನಲ್ಲ. ಈ ಹಿಂದೆ ಗಾಂಧೀಜಿಯವರನ್ನು ಕೊಂದಾಗ, ಬಾಬರಿ ಮಸ್ಜಿದ್ ಧ್ವಂಸಗೊಳಿಸಿದಾಗ, ದೆಹಲಿಯ ರಸ್ತೆಗಳಲ್ಲಿ ಸಿಖ್ಖರನ್ನು ಬೆಂಬತ್ತಿ ಹತ್ಯಾಕಾಂಡ ನಡೆಸಿದಾಗ, ಗುಜರಾತಿನಲ್ಲಿ ಸಾವಿರಾರು ಮುಸ್ಲಿಮರ ನರಮೇಧ ನಡೆಸಿದಾಗ ವಿಶ್ವದಾದ್ಯಂತ ಭಾರತವು ಛೀಮಾರಿ ಎದುರಿಸಿ ತಲೆತಗ್ಗಿಸಿ ನಿಂತಿತ್ತು. ಅದೇ ಹಾದಿಯಲ್ಲಿ ಭಾರತ ಇಂದು ಅಪಮಾನಕ್ಕೊಳಗಾಗಿ ತಲೆ ತಗ್ಗಿಸಿ ನಿಂತಿದೆ. ಪ್ರವಾದಿ ಮುಹಮ್ಮದ್ (ಸ)ರನ್ನು ನಿಂದನೆಗೈದ ಬಿಜೆಪಿ ನಾಯಕರಿಂದಾಗಿ ಭಾರತಕ್ಕೆ ಇಂದು ಇಂತಹ ದುಃಸ್ಥಿತಿ ಒದಗಿದೆ. ಈ ಬಾರಿಯ ವಿಶೇಷತೆಯೇನೆಂದರೆ ಭಾರತ ಸರ್ಕಾರವನ್ನು ನಡೆಸುವ ಬಿಜೆಪಿ ಪಕ್ಷದ ಆ ಇಬ್ಬರು ನಾಯಕರನ್ನೇ ಉಚ್ಛಾಟಿಸಬೇಕಾಗಿ ಬಂದಿರುವುದು. ಭಾರತೀಯ ಉತ್ಪನ್ನಗಳೇ ಏಕಾಏಕಿ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ನಿಷೇಧಕ್ಕೊಳಗಾಗಿರುವುದು. ಭಾರತದ ಉಪರಾಷ್ಟ್ರಪತಿಗೆ ವಿದೇಶದಲ್ಲಿ ನಿಗದಿಯಾಗಿದ್ದ ರಾಜತಾಂತ್ರಿಕ ಭೋಜನ ಕೂಡ ರದ್ದಾಗಿ ಅವಮಾನಕ್ಕೊಳಗಾಗಿರುವುದು. ಸಾವಿರಾರು ಕೆಲಸಗಾರರು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಕೆಲಸವನ್ನು ಕಳೆದುಕೊಂಡಿರುವುದು.

‘ಜೀವ ಬೇಕಾದರೂ ತ್ಯಾಗ ಮಾಡಬಲ್ಲೆವು. ಆದರೆ ಪ್ರವಾದಿ ನಿಂದನೆ ಮಾತ್ರ ಯಾವ ಕಾರಣಕ್ಕೂ ಕ್ಷಮಾರ್ಹವಲ್ಲ !’ ಇದು ಜಗತ್ತಿನ ಎಲ್ಲ ಮುಸ್ಲಿಮರ ಗಟ್ಟಿ ನಿಲುವು. ಮುಸ್ಲಿಮರು ಪ್ರವಾದಿ ಮುಹಮ್ಮದ್ (ಸ)ರವರನ್ನು ತಮ್ಮ ಪ್ರಾಣಕ್ಕಿಂತ ಮಿಗಿಲಾಗಿ ಪ್ರೀತಿಸುತ್ತಾರೆ. ತಮ್ಮ ದಿನನಿತ್ಯದ ಪ್ರಾರ್ಥನೆಯಲ್ಲಿ ಪ್ರವಾದಿ ಮುಹಮ್ಮದ್(ಸ)ರವರಿಗೆ ರಕ್ಷೆಯನ್ನು (ಸ್ವಲಾತ್) ಹೇಳುತ್ತಾರೆ. ಅವರ ನರನಾಡಿಗಳಲ್ಲಿ ಪ್ರವಾದಿ ಪ್ರೇಮ ಹರಿಯುತ್ತಲೇ ಇರುತ್ತದೆ. ವಿಶ್ವದ ಎಲ್ಲೇ ಆಗಲಿ, ಯಾರಾದರೂ ಪ್ರವಾದಿ ನಿಂದನೆಗೈದರೆ ಅದಕ್ಕೆ ಜಗತ್ತಿನೆಲ್ಲೆಡೆ ಮುಸ್ಲಿಮರು ವಿರೋಧಿಸುತ್ತಾರೆ. ಆಕ್ರೋಶ ವ್ಯಕ್ತಪಡಿಸುತ್ತಾರೆ.

ಈ ವಾಸ್ತವವನ್ನು ವಿಶ್ವದಲ್ಲಿ ಸರ್ವ ಧರ್ಮೀಯ ಬಾಂಧವರು ಚೆನ್ನಾಗಿ ತಿಳಿದುಕೊಂಡಿರುತ್ತಾರೆ. ಹಾಗಿರುವಾಗ ಪ್ರವಾದಿ ನಿಂದನೆ ಮಾಡುತ್ತಿರುವವರು ಹಾಗೇ ಮಾಡುತ್ತಿರುವುದು ದ್ವೇಷ ಸಾಧನೆಗೇ ಹೊರತು ಬೇರೆ ಕಾರಣಕ್ಕಲ್ಲ. ಇಸ್ಲಾಮ್ ಧರ್ಮದ ಅವಹೇಳನ ಮಾಡುವುದರಿಂದ ಮುಸ್ಲಿಮರ ಸ್ವಾಭಿಮಾನವನ್ನು ಧ್ವಂಸಗೊಳಿಸುವುದು ಅಥವಾ ಆತ್ಮಸ್ಥೈರ್ಯವನ್ನು ಕುಗ್ಗಿಸಬಹುದು ಎಂಬುದೇ ಇಂತಹ ನಿಂದನೆಯ ಉದ್ದೇಶ.

ಪ್ರವಾದಿ(ಸ)ರನ್ನು ನಿಂದಿಸಿದ ನೂಪುರ್ ಶರ್ಮಾ ಬಿಜೆಪಿಯ ಓರ್ವ ಸಾಮಾನ್ಯ ಕಾರ್ಯಕರ್ತಳೇನಲ್ಲ. ಆಕೆ ಬಿಜೆಪಿ ರಾಷ್ಟ್ರೀಯ ವಕ್ತಾರೆ. ಅದೇ ರೀತಿ ಟ್ವೀಟ್ ಮೂಲಕ ಪ್ರವಾದಿ (ಸ)ರನ್ನು ನಿಂದಿಸಿದ ನವೀನ್ ಜಿಂದಲ್ ಕೂಡಾ ಒಬ್ಬ ತಿರುಬೋಕಿ ಬಿಜೆಪಿಯ ಕಾರ್ಯಕರ್ತನಲ್ಲ, ಆತ ಬಿಜೆಪಿ ಪಕ್ಷದ ಮಾಧ್ಯಮ ವಿಭಾಗದ ರಾಷ್ಟ್ರೀಯ ಮುಖ್ಯಸ್ಥ. ಇವರಿಬ್ಬರ ನಿಂದನೆಯ ಬಗ್ಗೆ ದೇಶಾದ್ಯಂತ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾದಾಗಲೂ ನರೇಂದ್ರ ಮೋದಿಯಾಗಲೀ, ಅಮಿತ್ ಶಾ ಆಗಲಿ ಕಿಂಚಿತ್ತೂ ಕ್ಯಾರೇ ಅಂದಿರಲಿಲ್ಲ. ಹಲವರು ಈ ಬಗ್ಗೆ ಪೊಲೀಸ್ ದೂರು ನೀಡಿದಾಗ ಅದನ್ನು ದಾಖಲಿಸಲು ಪೊಲೀಸರು ಮುಂದಾಗಿರಲಿಲ್ಲ. ಕೊನೆಗೆ ಒಂದೆರಡು ದೂರುಗಳು ಮಾತ್ರ ದಾಖಲಾದವು. ಆದರೆ, ಎಲ್ಲೂ ಮುಂದಿನ ಹಂತದ ಪೊಲೀಸ್ ಕ್ರಮಗಳು ನಡೆಯಲೇ ಇಲ್ಲ. ಸೋಶಿಯಲ್ ಮೀಡಿಯಾಗಳಲ್ಲಿ ಪ್ರವಾದಿ ನಿಂದಕರನ್ನು ಬೆಂಬಲಿಸಿ ಕಮೆಂಟ್ ಗಳ ಮಹಾಪೂರವೇ ಹರಿಯಿತು. ಸಾಮಾಜಿಕ ಮಾಧ್ಯಮಗಳ ಮೂಲಕ ಈ ಪ್ರಕರಣವು ಅಂತಾರಾಷ್ಟ್ರೀಯ ಮಟ್ಟಕ್ಕೂ ತಲುಪಿತು. ಜೀನುಗೂಡಿಗೆ ಕಲ್ಲೆಸೆದರೆ ಮಧು ಹೀರಿ ಸಂಗ್ರಹಿಸುವ ಜೇನ್ನೊಣಗಳು ದಾಳಿಕೋರರನ್ನು ಕಚ್ಚಿ ಅಟ್ಟಿಸದೇ ಬಿಡುವುದಿಲ್ಲ. ಅದೇ ರೀತಿ ವಿಶ್ವದ ಮುಸ್ಲಿಮರಿಂದ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಯಿತು. ಇಸ್ಲಾಮಿಕ್ ರಾಷ್ಟ್ರಗಳು ಭಾರತಕ್ಕೆ ಕಟುಶಬ್ದಗಳಲ್ಲಿ ಖಂಡನೆಯ ಮಾತುಗಳಿಂದ ಪ್ರತಿಭಟಿಸಿದವು. ಕತಾರ್, ಕುವೈತ್, ಇರಾನ್ ಮುಂತಾದ ರಾಷ್ಟ್ರಗಳು ಭಾರತದ ಹೈಕಮಿಷರನ್ನು ಕರೆಸಿ ಕಠಿಣ ಶಬ್ದಗಳಲ್ಲಿ ಖಂಡಿಸಿದವು. ಕತಾರ್ ದೇಶವು ಅಲ್ಲಿ ಭೇಟಿ ನೀಡಿದ್ದ ಭಾರತದ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಜತೆಗೆ ನಿಗದಿಯಾಗಿದ್ದ ಭೋಜನ ಕೂಟವನ್ನು ರದ್ದುಪಡಿಸಿತು. ಕತಾರ್ ಹಾಗೂ ಕುವೈತ್ ನಲ್ಲಿ ಹಲವು ಭಾರತೀಯರನ್ನು ಹೆಚ್ಚಿನ ಸಂಬಳ ನೀಡಿ ವಿಮಾನಯಾನ ಟಿಕೆಟ್ ನೀಡಿ ಭಾರತಕ್ಕೆ ಪ್ಯಾಕ್ ಮಾಡಿದವು. ಗಲ್ಫ್ ರಾಷ್ಟ್ರಗಳಲ್ಲಿದ್ದ ಹಲವು ಸೂಪರ್ ಸ್ಟೋರ್ ಗಳು ಭಾರತೀಯ ಉತ್ಪನ್ನಗಳನ್ನು ತಮ್ಮ ಶೆಲ್ಫ್ ಗಳಿಂದ ಕೆಳಗಿಳಿಸಿದವು. ಭಾರತದ ಮೇಲೆ ನಡೆದ ಸೂಪರ್ ಮಾಸ್ಟರ್ ಸ್ಟ್ರೋಕ್ ಇದಾಗಿದೆ. ಪರಿಣಾಮ ಬಿಜೆಪಿ ಆ ಇಬ್ಬರು ತಿರುಬೋಕಿ ರಾಷ್ಟ್ರೀಯ ಮುಖಂಡರನ್ನು ಉಚ್ಚಾಟಿಸುವ ಕ್ರಮಕೈಗೊಂಡಿತು.

ಬಿಜೆಪಿ ಪಕ್ಷವು ಹೇಳಿಕೆಯೊಂದನ್ನು ಹೊರಡಿಸಿ, ಸಾವಿರಾರು ವರ್ಷಗಳಿಂದ ಸಮನ್ವಯ – ಸಹಯೋಗದೊಂದಿಗೆ ಜೀವಿಸುತ್ತಿರುವ ಭಾರತದಲ್ಲಿ ಸರ್ವಧರ್ಮೀಯರಿಗೆ ಸಮಾನ ಗೌರವವನ್ನು ನೀಡಲಾಗುತ್ತಿದೆ. ಅದು ಇಂದೂ, ಎಂದೂ ಮುಂದುವರೆಯುತ್ತದೆ ಎಂದಿತು. ಅಲ್ಲದೆ, ಆ ಇಬ್ಬರು ರಾಷ್ಟ್ರೀಯ ಮುಖಂಡರನ್ನು ಫ್ರಿಂಜ್( ಅಂಚು) ಎಂದು ಘೋಷಿಸಿತು. ವಿಷಯ ಇರುವುದೇ ಇಲ್ಲಿ. ಆ ಇಬ್ಬರು ಫ್ರಿಂಜ್ ಎಂದಾದರೆ ಬಿಜೆಪಿಯಲ್ಲಿ ಫ್ರಿಂಜ್ ಅಲ್ಲದವರೇ ಇಲ್ಲ. ನರೇಂದ್ರ ಮೋದಿಯಿಂದ ಮೊದಲ್ಗೊಂಡು ಪಂಚಾಯತ್  ಮಟ್ಟದಲ್ಲಿನ ಬಿಜೆಪಿ ಕಾರ್ಯಕರ್ತರವರೆಗೆ ಎಲ್ಲರೂ ಫ್ರಿಂಜ್ ಆಗಿದ್ದಾರೆ. ಕೇವಲ ಫ್ರಿಂಜ್ ಅಂದರೆ ಮಾತ್ರ ಸಾಲದು, ಫ್ರಿಂಜ್ ಅಥವಾ ಅಂಚು ಅಥವಾ ನಗಣ್ಯರು ಎಂದು ಹೆಗಲಿನ ಬೂದಿ ಒರೆಸ ಹೊರಟ ಬಿಜೆಪಿಯ ಇತಿಹಾಸ ಜಗತ್ತಿಗೆ ಚೆನ್ನಾಗಿ ತಿಳಿದಿದೆ. ಈ ಫ್ರಿಂಜ್ ಗಳನ್ನು ಇಂಗ್ಲೀಷಿನಲ್ಲೇ ಸರಿಯಾಗಿ ಕರೆಯುವುದಾದರೆ ಹೀಗೆ ಹೇಳಬಹುದು; ಬಿಗೋಟರ್, ಕಮ್ಯುನಲ್, ಫ್ಯಾಶಿಸ್ಟರು, ಟೆರರಿಸ್ಟ್, ಸ್ಯಾಡಿಸ್ಟ್ ಗಳು, ಡಿವಿಸಿವ್ ಗಳು, ಕಿಲ್ಲರ್ ಗಳು, ಮನುವಾದಿಗಳು ಎಂದೆಲ್ಲಾ ಕರೆಯಬೇಕಾಗಿರುವುದನ್ನು ಸಾವಿರಾರು ನಿದರ್ಶನಗಳೊಂದಿಗೆ ಕರಾರುವಕ್ಕಾಗಿ ಸಾಧಿಸಬಹುದು. ಬಿಜೆಪಿಯ ಸಂಸದರಾದ ಅನಂತ್ ಕುಮಾರ್ ಹೆಗಡೆ, ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹ ಮುಂತಾದವರು ಕುರ್ ಆನ್, ಇಸ್ಲಾಮ್, ಮುಸ್ಲಿಮರ ನಿಂದನೆ ಮಾಡಿರುವ ಅಸಂಖ್ಯಾತ ನಿದರ್ಶನಗಳಿವೆ. ಈಶ್ವರಪ್ಪ, ಯತ್ನಾಳ್ ಮುಂತಾದವರು ಮುಸ್ಲಿಮರನ್ನು ಕಡಿಯಬೇಕು, ಕೊಲ್ಲಬೇಕು ಎಂದಿರುವ ಉದಾಹಣೆಗಳಿವೆ. ಉತ್ತರ ಪ್ರದೇಶದ ಶಾಸಕ ಮಾಯಾ ಶಂಕರ್ ಸಿಂಗ್ ಎಂಬಾತ ‘ಹಿಂದೂಗಳು ಎದ್ದು ಬಿಟ್ಟರೆ ಮುಸ್ಲಿಮರ ಗಡ್ಡವನ್ನು ತಲೆಗೂದಲಿನ ಜಡೆ (ಚೋಟೀ)ಯಾಗಿ ಬದಲಿಸುವುದು’ ಎಂದಿದ್ದರು. ಇನ್ನೊಬ್ಬ ಉತ್ತರ ಪ್ರದೇಶ ಶಾಸಕ ರಾಘವೇಂದ್ರ ಪ್ರತಾಪ್ ಸಿಂಗ್ ‘ನನಗೆ ಮತ ಹಾಕದವರ ದೇಹದ ರಕ್ತನಾಳಗಳಲ್ಲಿ ಮಿಯಾಗಳ ರಕ್ತ ಹರಿಯುತ್ತಿದೆ. ಅವರ ಹಾದರಕ್ಕೆ ಹುಟ್ಟಿದವರು’ ಎಂದು ದ್ವೇಷ ಉಗುಳಿದ್ದರು.

ಹಲವು ಕಾರ್ಯಕ್ರಮಗಳಲ್ಲಿ ಆರೆಸೆಸ್ಸ್ ನ ನಾಯಕರು ಇಸ್ಲಾಮ್ ಧರ್ಮವನ್ನೇ ಭಾರತದಿಂದ ನಿರ್ಮೂಲನೆಗೊಳಿಸಬೇಕೆಂದು ಕರೆ ಕೊಟ್ಟ ಭಾಷಣಗಳು ಜನರ ಮುಂದಿವೆ. ಸ್ವತಃ ಗೃಹಮಂತ್ರಿ ಅಮಿತ್ ಶಾ ಮುಸ್ಲಿಮರನ್ನು ‘ಗೆದ್ದಲುಗಳು’ ಎಂದಿದ್ದಾರೆ. ಗಲಭೆಕೋರರನ್ನು ಅವರ ಬಟ್ಟೆಗಳ ಮೂಲಕ ಯಾವ ಧರ್ಮದವರೆಂದು ಗುರುತು ಹಿಡಿಯಬಹುದು ಎಂದು ಸ್ವತಃ ಪ್ರಧಾನಿಯೇ ಹೇಳಿದ್ದಾರೆ. ಸಂಸದೆ ಪ್ರಜ್ಞಾ ಸಿಂಗ್, ಗಾಂಧೀಜಿಯನ್ನು ಕೊಂದ ಗೋಡ್ಸೆಯನ್ನು ಪೂಜಿಸಬೇಕು ಎಂದಿರುವಾಗ ಮೌನ ಮುರಿಯದ ಮೋದಿ ಮತ್ತು ಶಾ ದೇಶವನ್ನು ಆಳುತ್ತಿದ್ದಾರೆ. ಒಕ್ಕೂಟದ ಹಣಕಾಸು ರಾಜ್ಯ ಸಚಿವ ಅನುರಾಗ್ ಠಾಕೂರ್ ‘ದೇಶ್ ಕೆ ಗದ್ದಾರೊ ಸಾಲೊಂಕೊ ಗೋಲಿಮಾರೋ’ ಎಂದು ಮುಸ್ಲಿಮರನ್ನು ಕೊಲ್ಲಲು ಬಹಿರಂಗ ಕರೆ ಕೊಟ್ಟಿದ್ದಾರೆ. ಕಪಿಲ್ ಶರ್ಮಾ ಎಂಬ ಸಂಸದ ಮುಸ್ಲಿಮರ ಹತ್ಯಾಕಾಂಡಕ್ಕೆ ಕರೆ ನೀಡಿದ್ದರು. ಹಿಂದಿ ರಾಜ್ಯಗಳಲ್ಲಿ ಮತ್ತು ಕರ್ನಾಟಕದಲ್ಲಿ ‘ದನ ಸಾಗಾಟಗಾರರು’ ಎಂಬ ನೆಪದಲ್ಲಿ ಸಂಘಪರಿವಾರದ ಕಾರ್ಯಕರ್ತರು ನೂರಾರು ಮುಸ್ಲಿಮರನ್ನು ಹೊಡೆದು ಕೊಂದ, ಜೈಶ್ರೀರಾಮ್ ಹೇಳುವಂತೆ ಬಲವಂತ ಪಡಿಸಿ ಮುಸ್ಲಿಮರನ್ನು ಥಳಿಸಿ ಕೊಂದ ನೂರಾರು ಪ್ರಕರಣಗಳು ಇರುವಾಗ ಮೌನ ಸಮ್ಮತಿ ನೀಡಿದ ಕುಖ್ಯಾತಿ ಪ್ರಧಾನಿ, ಗೃಹಮಂತ್ರಿಯದ್ದು, ಅನಾಗರಿಕ ಮನಸ್ಸು ಎನ್ನುವುದನ್ನು ಸಾಬೀತುಪಡಿಸುತ್ತಿದೆ.

ಬಾಬರಿ ಮಸ್ಜಿದನ್ನು ಧ್ವಂಸಗೊಳಿಸಿದ ಅದೇ ಬಿಜೆಪಿ, ಆರೆಸ್ಸೆಸ್ ಇಂದು ದೇಶದಲ್ಲಿ ಮಂದಿರ-ಮಸೀದಿ ವಿವಾದಗಳನ್ನು ಹುಟ್ಟು ಹಾಕಿ ದ್ವೇಷವನ್ನು ಹರಿಯ ಬಿಟ್ಟಿರುವುದು. ಪ್ರಧಾನಿಯೊಬ್ಬರು ಸಂಘಿ ಪ್ರಾಯೋಜಿತ ರಾಮಮಂದಿರ ಭೂಮಿ ಪೂಜೆಗೆ ಶಿಲಾನ್ಯಾಸ ಮಾಡುತ್ತಿರುವುದು ಬಾಬರಿ ಮಸ್ಜಿದ್ ಭೂಮಿ ಮೇಲೆ ಈ ಮಂದಿರ ಸ್ಥಾಪನೆ ಎಂದು ಗೊತ್ತಿದ್ದರೂ ಅದರಲ್ಲಿ ಪಾಲ್ಗೊಳ್ಳುತ್ತಿರುವುದು ‘ಮುಸ್ಲಿಮರನ್ನು ಸೋಲಿಸಿ ಮಂದಿರ ಕಟ್ಟುತ್ತಿದ್ದೇವೆ ಎಂಬ ಭಾವನೆಯಿಂದಲ್ಲವೆ?… ಈಗ ಜ್ಞಾನವ್ಯಾಪಿ, ತಾಜ್ ಮಹಲ್, ಕುತುಬ್ ಮಿನಾರ್, ಶ್ರೀರಂಗಪಟ್ಟಣ ಮಸ್ಜಿದ್ ಇತ್ಯಾದಿಗಳನ್ನು ಮಂದಿರಗಳೆಂದು ಕ್ಯಾತೆ ತೆಗೆಯುವ ಸಂಘಿಗಳನ್ನು ಬಾಯಿ ಮುಚ್ಚಿಸಲು ಪ್ರಧಾನಿ, ಗೃಹಮಂತ್ರಿ ಮುಂತಾದವರು ಒಂದೇ ಒಂದು ಮಾತೂ ಆಡುವುದಿಲ್ಲವಾದರೆ ಅದು ಅವರ ಒಪ್ಪಿಗೆಯಿಂದ ಆಗುತ್ತಿರುವುದು ತಾನೆ?

ಅವೆಷ್ಟು ಚರ್ಚುಗಳ ಮೇಲೆ ಭಾರತದಲ್ಲಿ ಸಂಘಿಗಳು ದಾಳಿ ಮಾಡಿಲ್ಲ. 2020ರಲ್ಲಿ ದೇಶದಲ್ಲಿ 426 ಚರ್ಚ್ ಮತ್ತು ಕ್ರೈಸ್ತರ ಗುರುಗಳ ಮೇಲೆ ದಾಳಿ ನಡೆದಿದೆ ಎಂದು ಸರಕಾರಿ ಅಂಕಿಅಂಶಗಳೇ ಹೇಳುತ್ತಿವೆ. ಕ್ರೈಸ್ತರ ಪ್ರಾರ್ಥನಾ ಸಭೆಗಳ ಮೇಲೆ ದಾಳಿಗಳನ್ನು ನಡೆಸಿದ ಸಂಘಪರಿವಾರದ ಮೇಲೆ ಕಾನೂನು ಕ್ರಮಗಳನ್ನು ಕೈಗೊಂಡಿರುವುದಾಗಲೀ, ಬಂಧಿಸಿ ಜೈಲಿಗೆ ತಳ್ಳುವುದಾಗಲೀ ಎಲ್ಲೂ ಕಂಡುಬಂದಿಲ್ಲ. ಬದಲಿಗೆ ತುಳಿತಕ್ಕೊಳಗಾದವರ ಮೇಲೆ ಮತಾಂತರದ ಹೆಸರಿನಲ್ಲಿ ಕೇಸು ದಾಖಲಾಗಿ ಜೈಲಿಗೆ ಹೋದ ಪ್ರಕರಣಗಳೇ ಸಾಕಷ್ಟಿವೆ.

ಗಲ್ಫ್ ರಾಷ್ಟ್ರಗಳಿಂದ ವ್ಯಕ್ತವಾದ ಪ್ರತಿಕೂಲ ವಿರೋಧಗಳಿಂದ ಬೆದರಿದ ಒಕ್ಕೂಟ ಸರಕಾರ, ಕೇವಲ ಇಬ್ಬರು ನಾಯಕರನ್ನು ಉಚ್ಚಾಟಿಸಿದರೆ ಅದು ತಕ್ಕುದಾದ ಶಿಸ್ತುಕ್ರಮ ಹೇಗಾದೀತು? ಅವರಿಬ್ಬರನ್ನು ಬಂಧಿಸಿ ಜೈಲಿಗೆ ಕಳಿಸಬೇಕಿತ್ತಲ್ಲವೇ? ಬಿಜೆಪಿಯ ಸುಮಾರು 53 ವಕ್ತಾರರಿಗೆ ಇನ್ನು ಮುಂದೆ ಮಾತನಾಡುವಾಗ ಯೋಚಿಸಿ ಮಾತನಾಡಬೇಕೆಂದು ಆದೇಶ ನೀಡುವುದರಿಂದ ಬಿಜೆಪಿಯ ಮುಸ್ಲಿಮ್, ಕ್ರೈಸ್ತ ವಿರೋಧಿ ತತ್ವಗಳು ಇಲ್ಲವಾದೀತೆ?

ಸರ್ವಧರ್ಮದವರೂ ಇದೀಗ ಬಹಳ ಅನ್ಯೋನ್ಯತೆಯಿಂದ ಭಾರತದಲ್ಲಿ ಜೀವಿಸುತ್ತಿದ್ದಾರೆ ಎನ್ನುವುದು ಕಡು ಸುಳ್ಳು ಎನ್ನುವುದು ಅಷ್ಟೇ ಸತ್ಯ. ದೇಶದ ನಗರಗಳಲ್ಲಿ ಮುಸ್ಲಿಮರಿಗೆ ಪ್ಲ್ಯಾಟ್ ನೀಡಲಾಗದು, ಮುಸ್ಲಿಮರಿಗೆ ಭೂಮಿ ಮಾರಲಾಗದು, ಮುಸ್ಲಿಮರ ಅಂಗಡಿ, ವ್ಯಾಪಾರಗಳಿಗೆ ಹೋಗಬಾರದು ಎನ್ನುವ ನಿಷೇಧ, ಬಹಿಷ್ಕಾರ ವ್ಯಾಪಕವಾಗಿ ಕಂಡುಬರುತ್ತಿದೆ. ರಾಮನವಮಿ, ವಿಜಯದಶಮಿ ಮುಂತಾದ ಹಬ್ಬದ ಸಂದರ್ಭಗಳಲ್ಲಿ ಸಂಘಪರಿವಾರದವರು ವಾಹನಗಳಲ್ಲಿ ಖಡ್ಗ, ಕೊಡಲಿ, ತ್ರಿಶೂಲ, ರಿವಾಲ್ವರ್, ಬಂದೂಕುಗಳನ್ನು ಪ್ರದರ್ಶಿಸುತ್ತಾ ಮುಸ್ಲಿಮರನ್ನು ಕೊಲ್ಲಬೇಕು, ಪಾಕಿಸ್ತಾನಕ್ಕೆ ಕಳುಹಿಸುತ್ತೇವೆ ಎನ್ನುತ್ತಾ ಮಸ್ಜಿದ್ಗಳ, ಮಿನಾರಗಳ ಮೇಲೆ ಏರಿ ಭಗವಾಧ್ವಜಗಳನ್ನು ಏರಿಸಿದ ಘಟನೆಗಳು ಸಂಭವಿಸಿದಾಗ ಪ್ರತಿಕ್ರಿಯಿಸಿದ ಮುಸ್ಲಿಮರ ಮೇಲೆ ಪ್ರಕರಣಗಳು ದಾಖಲಾದವು. ಅವರ ಮನೆಗಳನ್ನು ಬುಲ್ಡೋಜರ್ಗಳಿಂದ ಧ್ವಂಸಗೊಳಿಸಲಾಯಿತು. ಮನೆಗಳೊಳಗೆ ಪೊಲೀಸರು ನುಗ್ಗಿ ಸಿಕ್ಕ ಸಿಕ್ಕವರನ್ನು ಎಳೆದುಕೊಂಡು ಹೋದರು. ಠಾಣೆಗಳಲ್ಲಿ ತಮ್ಮವರನ್ನು ಮಾತನಾಡಿಸಲು ಬಂದವರನ್ನೇ ಕೇಸುಗಳಲ್ಲಿ ಫಿಕ್ಸ್ ಮಾಡಿ ಜೈಲಿಗೆ ಕಳುಹಿಸಲಾಯಿತು. ಇವೆಲ್ಲಾ ಇದೇ ಪ್ರಧಾನಿ, ಗೃಹಮಂತ್ರಿಯ ಮೂಗಿನ ನೇರದಲ್ಲಿ ನಡೆಯುವ ಪ್ರಾಯೋಜಿತ ಘಟನೆಗಳಲ್ಲವೇ?

ಅನುರಾಗ್ ಠಾಕೂರ್ ‘ಸಾಲೋಂಕೋ ಗೋಲಿ ಮಾರೋ‘ ಎಂದು ನಗು ನಗುತ್ತಾ ಹೇಳಿದ್ದಾರೆ, ಅದು ಪ್ರಕರಣದ ತನಿಖೆಗೆ ಅರ್ಹವಲ್ಲ ಎಂದಿರುವ ನ್ಯಾಯಾಧೀಶರು ಯಾವ ಸಂದೇಶವನ್ನು ಸಮಾಜಕ್ಕೆ ನೀಡುತ್ತಿದ್ದಾರೆ.

1925ರಲ್ಲೇ ಆರೆಸ್ಸೆಸ್ ಒಂದು ಗುರಿಯೊಂದಿಗೆ ಹೊರಟಿದೆ. ಅದುವೇ ಹಿಂದೂ ರಾಷ್ಟ್ರದ ಗುರಿ. ಅಂದರೆ ‘ಮನುವಾದೀ ರಾಷ್ಟ್ರ’ ಗುರಿ. ಆರೆಸ್ಸೆಸ್ ನ ಸರಸಂಘಚಾಲಕ  ಗೋಳ್ವಾಲ್ಕರ್ ಬರೆದ ಪುಸ್ತಕದಲ್ಲೇ ಆ ಗುರಿಯ ವ್ಯಾಖ್ಯಾನ ಬರೆಯಲಾಗಿದೆ. ಹಿಂದೂ ರಾಷ್ಟ್ರದಲ್ಲಿ ಮುಸ್ಲಿಮ್, ಕ್ರೈಸ್ತ ಹಾಗೂ ಪ್ರಗತಿಪರರಿಗೆ ಜಾಗವಿಲ್ಲ. ಅವರು ದೇಶದಿಂದ ತೆರಳಬೇಕು. ಇಲ್ಲದಿದ್ದರೆ ಎರಡನೇ ದರ್ಜೆಗೆ ಇಳಿಯಬೇಕು ಮತ್ತು ಜರ್ಮನಿಯಲ್ಲಿ ನಡೆದ ಶುದ್ಧೀಕರಣದಂತೆ ದೇಶವನ್ನು ಶುದ್ದೀಕರಿಸಬೇಕು ಎಂದಿರುವಾಗ ಆರೆಸ್ಸೆಸ್ ನ ಕಾರ್ಯಕರ್ತರಿಗೆ ಅದುವೇ ಮಾರ್ಗದರ್ಶಕವಲ್ಲವೇ? ಕೊಡಗಿನಲ್ಲಿ ಸಂಘಪರಿವಾರದ ಕಾರ್ಯಕರ್ತರಿಗೆ ರೈಫಲ್ ತರಬೇತಿ ನೀಡಲಾಯಿತು. ಇದು ಕೊಡಗಿನಲ್ಲಿ ಮಾತ್ರವೇ ಅಲ್ಲ. ಇಡೀ ದೇಶದಲ್ಲಿ ಬಹಳ ಹಿಂದೆಯೇ ನಡೆಯುತ್ತಿದೆ.ಜತೆಗೆ ತ್ರಿಶೂಲ, ಖಡ್ಗ, ಕೊಡಲಿ ಹಾಗೂ ಬಂದೂಕು ವಿತರಣೆ ಕೂಡ ನಡೆಯುತ್ತಿದೆ. ಇಂತಹ ಭಯೋತ್ಪಾದಕ ಶಿಬಿರಗಳಿಗೆ ಬಿಜೆಪಿ, ಕಾಂಗ್ರೆಸ್ ಸರಕಾರ ಸಂಪೂರ್ಣ ಆಶೀರ್ವಾದ ನೀಡುತ್ತಿದೆ. ಆಶ್ಚರ್ಯ ಎಂದರೆ, ಕೇರಳದಲ್ಲಿ ಕಮ್ಯುನಿಸ್ಟ್ ಸರಕಾರವಿದ್ದರೂ ಅಲ್ಲೂ ಸಂಘಿಗಳ ಭಯೋತ್ಪಾದನೆ ಶಿಬಿರ ಜಾರಿಯಲ್ಲಿರುವುದು. ಇಂತಹ ಭಯೋತ್ಪದನಾ ಶಿಬಿರಗಳಲ್ಲಿರುವ ಉಗ್ರರಿಗೆ ನೀಡುವ ಸಂದೇಶವೇನೆಂದರೆ, ಮುಸ್ಲಿಮರ ಸಂಹಾರ ಹಾಗೂ ಮಸೀದಿಗಳ ಧ್ವಂಸದಿಂದ ಹಿಂದೂ ರಾಷ್ಟ್ರ ಕಟ್ಟುವುದಾಗಿದೆ. ಅಂತಹ ಶಿಬಿರಗಳಲ್ಲಿ ಇಸ್ಲಾಮ್, ಪ್ರವಾದಿ, ಮುಸ್ಲಿಮರ ನಿಂದನೆ ನಿರಂತರವಾಗಿ ನಡೆಯುತ್ತಿದೆ. ಎಲ್ಲವೂ ಸರಕಾರ, ಪೊಲೀಸ್ ಹಾಗೂ ಮಾಧ್ಯಮಗಳ ಕೃಪಾಕಟಾಕ್ಷ ಆಶೀರ್ವಾದದೊಂದಿಗೆ ನಡೆಯುತ್ತಿದೆ.

ಭಾರತವು ಪರಂಪರೆಯಲ್ಲಿ ಸೌಹಾರ್ದ ರಾಷ್ಟ್ರ ಹೌದು. ಆದರೆ ಇದೀಗ ದ್ವೇಷ, ಅಸೂಯೆ, ವಿತಂಡವಾದ, ಮತಾಂಧತೆ, ಕ್ರೌರ್ಯ, ಅತ್ಯಾಚಾರಗಳಂತಹ ಕ್ಷುದ್ರತೆಯ ಕೇಂದ್ರವಾಗಿ ಮಾರ್ಪಾಡಾಗಿರುವುದನ್ನು ಅಲ್ಲಗಳೆಯಲಾಗದು. ಹಾಗೆಂದ ಮಾತ್ರಕ್ಕೆ ಎಲ್ಲವೂ ಎಲ್ಲರೂ, ಎಲ್ಲೆಲ್ಲಿಯೂ ಹಾಗಿದೆಯೆಂದಲ್ಲ. ವಿಚಾರವಂತರೂ, ಸೌಹಾರ್ದಯುತರೂ, ಜಾತ್ಯತೀತರೂ ಇದ್ದಾರೆ. ಆದರೆ ಅವರ ಶಕ್ತಿ ಕ್ಷೀಣವಾಗುತ್ತಾ ಸಾಗುತ್ತಿದೆ. ಹಾಗೆ ದಮನಕ್ಕೊಳಗಾದ ಸಮುದಾಯದ ಪರವಾಗಿ ಧ್ವನಿಯೆತ್ತಿರುವವರನ್ನು, ಪ್ರತಿರೋಧಿಸಿದವರನ್ನೂ ಕೋಮುವಾದಿಗಳೆಂದು ಕರೆಯುವುದರಲ್ಲಿ ಕೆಲವು ವಿಚಾರವಂತರೆನಿಕೊಂಡವರೂ ಸೇರಿಕೊಂಡಿರುವುದು ಕಳವಳಕಾರಿಯೆನಿಸುತ್ತಿದೆ. ಸಮಾಜದ ಅಂಕುಡೊಂಕುಗಳನ್ನು, ಅನಿಷ್ಟಗಳನ್ನು ತಿದ್ದಬೇಕಾದ ಮಾಧ್ಯಮಗಳೆಲ್ಲವೂ ಫ್ಯಾಶಿಸ್ಟರ ಧ್ವಜವಾಹಕವಾಗಿರುವುದು ದೇಶದ ಪರಂಪರೆಯನ್ನು ನುಚ್ಚುನೂರು ಮಾಡುತ್ತಿರುವುದು ಆತಂಕಕ್ಕೆ ಎಡೆಮಾಡಿದೆ.

ಜಾತ್ಯತೀತ ಎಂದರೆ ಅದು ತೋರಿಕೆಗೆ ಮಾತ್ರ. ಜಾತ್ಯತೀತತೆಯನ್ನು ಸೋಗಿನಂತೆ ಬಳಸಿಕೊಂಡು ಕೋಮುವಾದದ ಕಹಲ ಪ್ರಿಯತೆಯ ಹಾದಿಯಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪೈಪೋಟಿಯಿಂದ ಸಾಗುತ್ತಿರುವ ರಾಜಕೀಯ ದೇಶದಲ್ಲಿ ಟ್ರೆಂಡ್ ಆಗಿರುವಾಗ ಸೌಹಾರ್ದ ಪರಂಪರೆ ಎಂಬ ಮಾತು ಅರ್ಥ ಕಳೆದುಕೊಳ್ಳುತ್ತಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!