ಮಂಗಳೂರು: ಪಠ್ಯ ಪುಸ್ತಕ ಪರಿಷ್ಕರಣೆಯ ವೇಳೆ ನಾಡಿನ ಖ್ಯಾತ ಸಾಹಿತಿಗಳು ಹಾಗೂ ಸಮಾಜ ಸುಧಾಕರ ಪಠ್ಯವನ್ನು ಕೈಬಿಟ್ಟು ನಾಡಿನ ಜನರ ಆಕ್ರೋಶಕ್ಕೆ ತುತ್ತಾಗಿರುವ ರೋಹಿತ್ ಚಕ್ರತೀರ್ಥಗೆ ಮಂಗಳೂರಿನಲ್ಲಿ ಏರ್ಪಡಿಸಿರುವ ಪೌರ ಸನ್ಮಾನ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಲು ಪ್ರಗತಿಪರ ಸಂಘಟನೆ ನಿರ್ಧರಿಸಿದೆ.
ನಾಡಿನ ಹಿರಿಯ ಚೇತನರನ್ನು ನಿಂದಿಸಿರುವ ರೋಹಿತ್ ಚಕ್ರತೀರ್ಥನಿಗೆ ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆಯ ಸೇವಾಂಜಲಿ ಟ್ರಸ್ಟ್ ಸಹಯೋಗದಲ್ಲಿ ನಾಗರಿಕ ಸನ್ಮಾನ ಏರ್ಪಡಿಸಿರುವುದು ಹಾಗೂ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ವಿವಿ ಕುಲಪತಿ ಯಡಪಡಿತ್ತಾಯ ವಹಿಸಿರುವುದು ಖಂಡನೀಯ ಎಂದು ದೇಶಪ್ರೇಮಿ ಸಂಘಟನೆಗಳ ಒಕ್ಕೂಟ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಈ ಸನ್ಮಾನ ಕಾರ್ಯಕ್ರಮವನ್ನು ರದ್ದುಪಡಿಸಬೇಕು ಒತ್ತಾಯಿಸಿದ್ದು, ಜೂ.25ರಂದು ಸಮಾನ ಮನಸ್ಕ ಸಂಘಟನೆಗಳು ನಾಗರಿಕರ ಸಹಯೋಗದೊಂದಿಗೆ ಬೃಹತ್ ಮೆರವಣಿಗೆಯಲ್ಲಿ ತೆರಳಿ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಲು ನಗರದ ವಿಕಾಸ ಕಚೇರಿಯಲ್ಲಿ ಶುಕ್ರವಾರ ನಡೆದ ’ದೇಶಪ್ರೇಮಿ ಸಂಘಟನೆಗಳ ಒಕ್ಕೂಟ’ದ ತುರ್ತು ಸಭೆ ನಿರ್ಧರಿಸಿದೆ. ಜೂ.25ರ ಸಂಜೆ 4.30ಕ್ಕೆ ಸಿಟಿ ಸೆಂಟರ್ ಮಾಲ್ ಸಮೀಪ ಸಮಾನ ಮನಸ್ಕ ಸಂಘಟನೆಗಳು, ನಾಗರಿಕರು ಒಟ್ಟು ಸೇರಿ ಅಲ್ಲಿಂದ ಕಾರ್ಯಕ್ರಮ ನಡೆಯುವ ಡೊಂಗರಕೇರಿ ಕೆನರಾ ಹೈಸ್ಕೂಲ್ ಗೆ ಮೆರವಣಿಗೆಯಲ್ಲಿ ತೆರಳಲು ಡಿವೈಎಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಸಭೆಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.
ಮಂಗಳೂರು ವಿವಿ ಮಾಜಿ ಸಿಂಡಿಕೇಟ್ ಸದಸ್ಯ ಎ.ಜಿ ಹೆಗ್ಡೆ, ದಲಿತ ನಾಯಕ ಎಂ. ದೇವದಾಸ್, ಮಾಜಿ ಉಪ ಮೇಯರ್ ಮುಹಮ್ಮದ್ ಕುಂಜತ್ತಬೈಲ್, ಸಿಪಿಎಂ ಮುಖಂಡ ಯಾದವ ಶೆಟ್ಟಿ, ಕಾಂಗ್ರೆಸ್ ಮುಖಂಡ ಪ್ರಕಾಶ್ ಸಾಲ್ಯಾನ್, ಸಿಐಟಿಯು ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್, ಸಾಮರಸ್ಯ ಮಂಗಳೂರಿನ ಮಂಜುಳಾ ನಾಯಕ್, ಸಮರ್ಥ್ ಭಟ್, ಕಾರ್ಪೊರೇಟರ್ ಲತೀಫ್ ಕಂದಕ್, ಡಿವೈಎಫ್ ಐ ಮುಖಂಡರಾದ ಬಿಕೆ ಇಮ್ತಿಯಾಝ್, ಸಂತೋಷ್ ಬಜಾಲ್ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.