Home ಟಾಪ್ ಸುದ್ದಿಗಳು ಬಿಎಡ್ ಪಠ್ಯ ಪುಸ್ತಕದಲ್ಲಿ ಇಸ್ಲಾಮ್ ಮತ್ತು ಪ್ರವಾದಿ ಅವಹೇಳನಗೈದ ಆರೋಪಿ ಪ್ರೊ. ರಾಮಚಂದ್ರಯ್ಯ ಬಂಧನ

ಬಿಎಡ್ ಪಠ್ಯ ಪುಸ್ತಕದಲ್ಲಿ ಇಸ್ಲಾಮ್ ಮತ್ತು ಪ್ರವಾದಿ ಅವಹೇಳನಗೈದ ಆರೋಪಿ ಪ್ರೊ. ರಾಮಚಂದ್ರಯ್ಯ ಬಂಧನ

ತುಮಕೂರು ; ಇಸ್ಲಾಮ್, ಮುಸ್ಲಿಮರು ಮತ್ತು ಪ್ರವಾದಿ ಬಗ್ಗೆ ತನ್ನ ಕೃತಿಯಲ್ಲಿ ಅವಹೇಳನಕಾರಿಯಾಗಿ ಬರೆದಿದ್ದ ಲೇಖಕ, ಪ್ರೊಫೆಸರ್ ರಾಮಚಂದ್ರಯ್ಯ ಅವರನ್ನು ತುಮಕೂರು ನಗರ ನ್ಯೂ ಎಕ್ಸ್ ಟೆನ್ಶನ್ ಪೊಲೀಸರು ಬಂಧಿಸಿದ್ದಾರೆ.


ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಉಪಾಧ್ಯಕ್ಷ ಹಾಗೂ ವಕೀಲ ರೋಷನ್ ನವಾಜ್ ಅವರು ಈ ಬಗ್ಗೆ ಇದೇ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಮಾತ್ರವಲ್ಲ ರಾಜ್ಯದ 25ಕ್ಕೂ ಹೆಚ್ಚು ಪೊಲೀಸ್ ಠಾಣೆಯಲ್ಲಿ ರಾಮಚಂದ್ರಯ್ಯ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಆರೋಪಿಯ ವಿರುದ್ಧ 153 (ಎ), 295 (ಎ) ಮತ್ತಿತರ ಜಾಮೀನುರಹಿತ ಸೆಕ್ಷನ್ ಗಳಡಿ ಎಫ್ ಐಆರ್ ದಾಖಲಾಗಿತ್ತು. ಆರೋಪಿ ರಾಮಚಂದ್ರಯ್ಯ ಅವರನ್ನು ನಿನ್ನೆಯೇ ಪೊಲೀಸರು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಧೀಶರು ರಾಮಚಂದ್ರಯ್ಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.


ಈ ವಿವಾದಿತ ಪುಸ್ತಕವನ್ನು ಪ್ರಕಟಿಸಿರುವ ಹಾಲಟ್ಟಿ ಲೋಕೇಶ್ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.
ಬಿ.ಆರ್. ರಾಮಚಂದ್ರಯ್ಯ ಅವರು ಬರೆದು, ವಿಸ್ಮಯ ಪ್ರಕಾಶನ ಹೊರತಂದ “ಮೌಲ್ಯ ದರ್ಶನ ದಿ ಎಸ್ಸೆನ್ಸ್ ಆಫ್ ವ್ಯಾಲ್ಯೂ ಎಜುಕೇಷನ್” ಎಂಬ ಕೃತಿಯಲ್ಲಿ ಇಸ್ಲಾಮ್ ಮತ್ತು ಮುಸ್ಲಿಮರನ್ನು ಅವಹೇಳನಕಾರಿಯಾಗಿ ಚಿತ್ರಿಸಿದ್ದು, ಈ ಕೃತಿಯನ್ನು ಎಲ್ಲಾ ವಿಶ್ವವಿದ್ಯಾಲಯಗಳು ಬಿಎಡ್ ಮೂರನೇ ಸೆಮಿಸ್ಟರ್ ಗೆ ಪಠ್ಯಪುಸ್ತಕವಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ಈ ಬಗ್ಗೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸೇರಿದಂತೆ ಹಲವು ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ನಿನ್ನೆ ತುಮಕೂರು ವಿಶ್ವವಿದ್ಯಾಲಯದ ಮುಂಭಾಗ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ರಾಮಚಂದ್ರಯ್ಯ ಅವರ ಕೃತಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು.

Join Whatsapp
Exit mobile version