ಮಂಗಳೂರು : ಕೋವಿಡ್ ಸೋಂಕಿಗೆ ತುತ್ತಾಗಿ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಪ್ರೊಬೆಷನರಿ ಪಿಎಸ್ಐ ಓರ್ವರು ಮೃತಪಟ್ಟಿದ್ದಾರೆ. ಮೂಲತಃ ಕೋಲಾರ ನಿವಾಸಿ, ಏಳು ತಿಂಗಳ ಗರ್ಭಿಣಿ ಶ್ಯಾಮಿಲಿ(24) ಮೃತಪಟ್ಟಿದ್ದಾರೆ. ಇದೇ ವರುಷದ ಆರಂಭದಲ್ಲಿ ದ.ಕ. ಜಿಲ್ಲಾ ಎಸ್ಪಿ ಕಚೇರಿಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಅವರು, ಇತ್ತೀಚೆಗಷ್ಟೇ ಹೆರಿಗೆ ಕಾರಣಕ್ಕಾಗಿ ತನ್ನ ಕೋಲಾರದ ಮನೆಗೆ ವಾಪಾಸ್ ಆಗಿದ್ದರು.
ಆದರೆ, ಮೇ 2 ರಂದು ಕೊರೊನಾ ಸೋಂಕು ಲಕ್ಷಣಗಳಿಂದ ಕೋಲಾರದ ಖಾಸಗಿ ಆಸ್ಪತ್ರೆ ದಾಖಲಾಗಿದ್ದ ಅವರು, ಇಂದು ಮುಂಜಾವ 4.30 ರ ವೇಳೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಶ್ಯಾಮಿಲಿ ನಿಧನಕ್ಕೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.
ಶ್ಯಾಮಿಲಿ ಅವರು ಗರ್ಭಿಣಿ ಆದ ಕಾರಣ, ಕೊರೊನಾ ಲಸಿಕೆಯನ್ನೂ ಪಡೆದಿರಲಿಲ್ಲ ಎನ್ನಲಾಗಿದೆ.