ಮಂಗಳೂರು : ನಗರದ ಬಿಜೈ ರಸ್ತೆಯ ಗೋಡೆಯೊಂದರಲ್ಲಿ ‘ಲಷ್ಕರ್ ಜಿಂದಾಬಾದ್’ ಎಂದು ಬರೆದಿರುವ ಘಟನೆ ಬೆಳಕಿಗೆ ಬಂದಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಸಹಜವಾಗಿ ಮುಸ್ಲಿಮರ ತಲೆಗೆ ಕಟ್ಟುವ ಇಂತಹ ಘಟನೆಗಳ ಹಿಂದೆ, ಈ ಹಿಂದೆಯೂ ಅಂತಿಮವಾಗಿ ಬೇರೆಯದ್ದೇ ಕತೆಗಳು ಹೊರಬಿದ್ದಿದ್ದವು. ಹೀಗಾಗಿ, ಈ ದುಷ್ಕೃತ್ಯದ ಹಿಂದೆ ಕೋಮುವಾದಿಗಳ ಕೈವಾಡವಿರುವ ಬಗ್ಗೆ ವ್ಯಾಪಕ ಶಂಕೆ ವ್ಯಕ್ತವಾಗುತ್ತಿದೆ.
ಈ ಹಿಂದೆಯೂ ಹಲವು ಪ್ರಕರಣಗಳನ್ನು ಮುಸ್ಲಿಮರ ತಲೆಗೆ ಕಟ್ಟಿದ್ದು, ಕೊನೆಗೆ ಅದರ ಹಿಂದೆ ಸಂಘ ಪರಿವಾರದ ಕಾರ್ಯಕರ್ತರಿದ್ದುದು ಬಹಿರಂಗವಾಗಿರುವ ಹಿನ್ನೆಲೆಯಲ್ಲಿ, ಈ ಘಟನೆಯ ಹಿಂದೆಯೂ ಇಂತಹುದೇ ಶಕ್ತಿಗಳ ಷಡ್ಯಂತ್ರ ನಡೆದಿದೆಯೇ? ಎಂಬ ಸಂದೇಹ ವ್ಯಕ್ತವಾಗಿದೆ.
ಕದ್ರಿ ಪೊಲೀಸ್ ಠಾಣೆಗೆ ಸಮೀಪವೇ ಇರುವ ಬಿಜೈ ರಸ್ತೆಯ ಆವರಣ ಗೋಡೆಯೊಂದರ ಮೇಲೆ ಈ ವಿವಾದಾತ್ಮಕ ಬರಹ ಬರೆಯಲಾಗಿದೆ. “ಲಷ್ಕರ್ ಝಿಂದಾಬಾದ್’’ ಎಂದು ಬರೆಯಲಾಗಿರುವ ಜೊತೆಗೆ, ಸಂಘ ಪರಿವಾರದ ಸದಸ್ಯರಿಗೆ ಎಚ್ಚರಿಕೆಯನ್ನು ನೀಡಿದ ರೀತಿಯಲ್ಲಿ ಬರಹ ಕಂಡುಬಂದಿದೆ.
ಇದು ಕಳೆದ ರಾತ್ರಿ ಬರೆಯಲಾದ ಗೋಡೆ ಬರಹ ಎನ್ನಲಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು, ಬರಹವನ್ನು ಅಳಿಸಿ ತನಿಖೆ ನಡೆಸುತ್ತಿದ್ದಾರೆ.
ಈ ಬರಹದ ಹಿಂದೆ ಸಂಘ ಪರಿವಾರದ ಕೈವಾಡವಿರುವ ಬಗ್ಗೆ ಹಲವರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಹಿಂದೆಯೂ ಇಂತಹ ದುಷ್ಕೃತ್ಯಗಳನ್ನು ನಡೆಸಿ, ಅದನ್ನು ಮುಸ್ಲಿಮರ ತಲೆಗೆ ಕಟ್ಟಲು ನೋಡಲಾಗಿತ್ತು. ಆದರೆ, ಕೊನೆಗೆ ಅದನ್ನು ನಡೆಸಿದವರು ಸಂಘಪರಿವಾರದವರೇ ಎಂಬುದು ಸಾಬೀತಾಗಿತ್ತು.
ಕೆಲವು ವರ್ಷಗಳ ಹಿಂದೆ ಸಿಂಧಗಿಯಲ್ಲಿ ಪಾಕಿಸ್ತಾನ ಧ್ವಜ ಹಾರಿಸಿ ಅದನ್ನು ಮುಸ್ಲಿಮರ ತಲೆಗೆ ಕಟ್ಟಲಾಗಿತ್ತು. ಘಟನೆ ನಡೆದ ಬೆನ್ನಿಗೆ ಸಂಘಪರಿವಾರದ ಸಂಘಟನೆಗಳು ಸಿಂಧಗಿ ಬಂದ್ ಗೆ ಕರೆನೀಡಿದ್ದವು. ಆದರೆ, ಬಳಿಕ ಅದು ಶ್ರೀರಾಮ ಸೇನೆಯ ಕಾರ್ಯಕರ್ತರು ಎಸಗಿದ ದುಷ್ಕೃತ್ಯ ಎಂಬುದು ಬಯಲಿಗೆ ಬಂದಿತ್ತು. ಅದೇ ವೇಳೆ, ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪತ್ರಿಕಾಗೋಷ್ಠಿ ನಡೆಸಿ ಪಾಕ್ ಧ್ವಜವನ್ನು ಹಾರಿಸಿದವರು ಆರೆಸ್ಸೆಸ್ ಕಾರ್ಯಕರ್ತರು ಎಂದು ಹೇಳಿದ್ದರು. ಒಟ್ಟಿನಲ್ಲಿ ಪೊಲೀಸರು ಗಲಭೆಯ ಹಿಂದೆ ಹಿಂದುತ್ವ ಸಂಘಟನೆಗಳು ಭಾಗಿಯಾಗಿರುವುದನ್ನು ಬೆಳಕಿಗೆ ತಂದಿದ್ದರು.
ಇನ್ನೊಂದು ಘಟನೆಯಲ್ಲಿ ಶೃಂಗೇರಿಯಲ್ಲಿ ಶಂಕರಾಚಾರ್ಯರ ಪ್ರತಿಮೆ ಮೇಲೆ ಮುಸ್ಲಿಮರ ಧಾರ್ಮಿಕ ಧ್ವಜವನ್ನು ಹಾರಿಸಲಾಗಿತ್ತು. ಎಸ್ ಡಿಪಿಐ ಧ್ವಜ ಹಾಸಲಾಗಿದೆ ಎಂದು ಮುಖ್ಯವಾಹಿನಿ ಮಾಧ್ಯಮಗಳು ಸೇರಿದಂತೆ, ಹಲವರು ಪುಕಾರು ಎಬ್ಬಿಸಿದ್ದರು. ಬಿಜೆಪಿ ನಾಯಕರಾದ ಸಿಟಿ ರವಿ, ಶೋಭಾ ಕರಂದ್ಲಾಜೆ ಮುಂತಾದವರು ಇದು ಎಸ್.ಡಿ.ಪಿ.ಐ ಕೃತ್ಯವೆಂದು ಆರೋಪಿಸುವ ಮೂಲಕ ಅಶಾಂತಿ ಹರಡಲು ಪ್ರಯತ್ನಿಸಿದ್ದರು. ಆದರೆ ಮಾನಸಿಕ ಅಸ್ವಸ್ಥನೆನ್ನಲಾದ ವ್ಯಕ್ತಿ ಧ್ವಜವನ್ನು ಅಲ್ಲಿ ಹಾಕಿರುವುದು ತನಿಖೆಯಿಂದ ಬೆಳಕಿಗೆ ಬಂದಿತ್ತು.
ಹಿಂದುತ್ವವಾದಿ ಸಂಘಟನೆಗಳ ಸದಸ್ಯರು ಇಂತಹ ದುಷ್ಕೃತ್ಯಗಳನ್ನು ಎಸಗಿ ಅದನ್ನು ಮುಸ್ಲಿಮರ ತಲೆಗೆ ಕಟ್ಟಿ, ಸಮಾಜದಲ್ಲಿ ಮುಸ್ಲಿಂ ದ್ವೇಷ ಮತ್ತು ಅಶಾಂತಿಯನ್ನು ಹುಟ್ಟುಹಾಕಿರುವ ಘಟನೆಗಳು ಈ ಹಿಂದೆಯೂ ಹಲವು ಬಾರಿ ನಡೆದಿದೆ. ಹೀಗಾಗಿ, ಈ ಘಟನೆಯ ಹಿಂದೆ ಹಿಂದುತ್ವ ಕೋಮುವಾದಿ ಸಂಘಟನೆಗಳ ಕೈವಾಡವಿದೆಯೇ? ಎಂಬುದನ್ನು ಪೊಲೀಸರು ಪರಿಶೀಲಿಸಬೇಕಾಗಿದೆ.
ಇಂತಹ ಕೃತ್ಯವನ್ನು ಎಸಗಿರುವವರು ವಿದ್ಯಾವಂತರೇ ಆಗಿರುವ ಸಾಧ್ಯತೆಯಿದ್ದು, ಇಂಗ್ಲಿಷ್ ನಲ್ಲಿ ಸ್ಪಷ್ಟವಾಗಿ ಬರೆದಿರುವುದನ್ನು ಗಮನಿಸಬಹುದಾಗಿದೆ ಮತ್ತು ಇದನ್ನು ಆಯಿಲ್ ಪೈಂಟ್ ನಲ್ಲಿ ಬರೆದಿರುವ ಹಾಗಿದೆ. ಹೀಗಾಗಿ ಜನ ಸಾಮಾನ್ಯರು, ಇಂತಹ ದುಷ್ಕೃತ್ಯಕ್ಕೆ ಕೈಹಾಕಲು ಸಾಧ್ಯವಿಲ್ಲ. ಇದೊಂದು ಸಂಘಟಿತ ಕುಕೃತ್ಯದಂತಿದ್ದು, ಮಂಗಳೂರಿನಲ್ಲಿ ಮತ್ತೆ ಗಲಭೆ ರೂಪಿಸುವ ಸಂಚಿನಂತಿದೆ. ಇದರ ಹಿಂದಿನ ಕೈಗಳನ್ನು ಪತ್ತೆಹಚ್ಚಲು ಪೊಲೀಸರು ಎಲ್ಲಾ ದೃಷ್ಟಿಕೋನಗಳಿಂದಲೂ ತನಿಖೆ ನಡೆಸುವ ಅಗತ್ಯವಿದೆ.