Home ಟಾಪ್ ಸುದ್ದಿಗಳು ಮಕ್ಕಳ ಶೂ, ಸಾಕ್ಸ್ ವಿಚಾರದಲ್ಲಿ ಸಿಎಂಗೆ ಪ್ರಿಯಾಂಕ್ ಖರ್ಗೆ ತಿರುಗೇಟು

ಮಕ್ಕಳ ಶೂ, ಸಾಕ್ಸ್ ವಿಚಾರದಲ್ಲಿ ಸಿಎಂಗೆ ಪ್ರಿಯಾಂಕ್ ಖರ್ಗೆ ತಿರುಗೇಟು

ಬೆಂಗಳೂರು: ‘ಮಾನ್ಯ ಮುಖ್ಯಮಂತ್ರಿಗಳು ಮಾನವೀಯತೆಯನ್ನು ಮರೆತಿದ್ದಾರೆ. ಕೋವಿಡ್ ಸಮಯದಲ್ಲಿ ಬಿಜೆಪಿ ಮಾಡಿದ್ದೇನು? ಬಡ ಕಾರ್ಮಿಕರು ತಮ್ಮ ಊರಿಗೆ ಹೋಗಬೇಕಾದರೆ, ಸರ್ಕಾರ ದುಪ್ಪಟ್ಟು ಟಿಕೆಟ್ ದರ ನಿಗದಿ ಮಾಡಿತ್ತು. ಆಗ ನಾವೆಲ್ಲರೂ ಹೋಗಿ ಹಣ ಸಂಗ್ರಹಿಸಿ ಕೆಎಸ್ಆರ್ ಟಿಸಿ ಹಾಗೂ ಬಿಎಂಟಿಸಿಗೆ ನೀಡಲು ಹೋದಾಗ ಅವರಿಗೆ ಮಾನವೀಯತೆ ಮೆರೆಯಬೇಕು ಎಂದು ಜ್ಞಾನೋದಯವಾಗಿ ನಂತರ ಉಚಿತ ಬಸ್ ಪ್ರಯಾಣ ವ್ಯವಸ್ಥೆ ಕಲ್ಪಿಸಿದರು ಎಂದು ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನು ಶಾಲ ಮಕ್ಕಳಿಗೆ ಸರ್ಕಾರದ ವತಿಯಿಂದ ನೀಡಲಾಗುವ ಪಠ್ಯಪುಸ್ತಕ, ಶೂ ಹಾಗೂ ಸಾಕ್ಸ್ ಗಳನ್ನು ನೀಡಲಾಗುತ್ತಿದ್ದು, ಈ ವರ್ಷ ಇದುವರೆಗೂ ಯಾಕೆ ನೀಡಿಲ್ಲ? ಇದು ಹೊಸ ಯೋಜನೆಯೇ? ಪಠ್ಯದಲ್ಲಿ ಇತಿಹಾಸ ತಿರುಚಿ, ಮಹನೀಯರಿಗೆ ಅಪಮಾನ ಮಾಡಲು 150 ಕೋಟಿ ಖರ್ಚು ಮಾಡಲು ತಯಾರಿದ್ದೀರಿ. ಆದರೆ ಮಕ್ಕಳಿಗೆ ಶೂ ಹಾಗೂ ಸಾಕ್ಸ್ ನೀಡಲು ಸರ್ಕಾರದ ಬಳಿ 130 ಕೋಟಿ ಹಣ ಇಲ್ಲವೇ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಬಿಜೆಪಿ ಸರ್ಕಾರಕ್ಕೆ ಚಕ್ರತೀರ್ಥನ ಮೇಲೆ ಇರುವ ಪ್ರೀತಿ, ನಮ್ಮ ಶಾಲಾ ಮಕ್ಕಳ ಮೇಲೆ ಏಕಿಲ್ಲ? ಪ್ರತಿ ವರ್ಷ ಮಕ್ಕಳು ಪ್ರತಿಭಟನೆ ಮಾಡಿ ಸಮವಸ್ತ್ರ ಪಡೆಯಬೇಕಾ? ಪ್ರತಿ ಬಾರಿ ವಿರೋಧ ಪಕ್ಷಗಳು ಭಿಕ್ಷೆ ಬೇಡಿ ಹಣ ನೀಡಬೇಕಾ? ಸರ್ಕಾರಕ್ಕೆ 130 ಕೋಟಿ ನೀಡುವ ಯೋಗ್ಯತೆ ಇಲ್ಲವೇ? ಎಂದು ಪ್ರಶ್ನಿಸಿದರು.

ಇನ್ನು ಮುಖ್ಯಮಂತ್ರಿಗಳು ಶೂ ಹಾಗೂ ಸಾಕ್ಸ್ ವಿತರಣೆಗೆ 132 ಕೋಟಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಇದು ಮಕ್ಕಳ ವಿಚಾರವಾಗಿದ್ದು ಸರ್ಕಾರ ಇದರಲ್ಲಿ 40% ಕಮಿಷನ್ ಒಡೆಯದೇ ಇದ್ದರೆ ಒಳ್ಳೆಯದು. ಕಳೆದ 3 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡಿಲ್ಲ. ಕಳೆದ ವರ್ಷ 2 ಸಮವಸ್ತ್ರ ನೀಡಬೇಕಿದ್ದ ಸರ್ಕಾರ ಕೇವಲ 1 ಸಮವಸ್ತ್ರ ನೀಡಿತ್ತು ಎಂದು ತಿಳಿಸಿದರು.

ಸಚಿವ ನಾಗೇಶ್ ಅವರು ಜವಾಬ್ದಾರಿಯುತ ಶಿಕ್ಷಣ ಸಚಿವರಾಗಿದ್ದು, ನೀವು ಮಧ್ಯಾಹ್ನ ಬಿಸಿಯೂಟ ಪ್ರಾರಂಭ ಮಾಡಿದ್ದು ಯಾಕೆ ಎಂಬ ಉದ್ದೇಶವನ್ನು ತಿಳಿಯಬೇಕು. ಮಕ್ಕಳು ಶಾಲೆಯನ್ನು ಸೇರಲಿ ಎಂದು ಈ ಯೋಜನೆ ಜಾರಿಗೆ ತರಲಾಯಿತು. ಸ್ವಲ್ಪ ಇತಿಹಾಸವನ್ನು ಓದಿ ಎಂದು ಲೇವಡಿ ಮಾಡಿದರು.

ನಿಮ್ಮ ಸಮೀಕ್ಷೆಗಳು ಎಲ್ಲಿವೆ? ನೀವು ಹೈಕೋರ್ಟ್ ಗೆ ಸಲ್ಲಿಸಿರುವ ಸಮೀಕ್ಷೆ ವರದಿ ಪ್ರಕಾರ ಅಂಗನವಾಡಿ ಮಕ್ಕಳಿಂದ ಪ್ರೌಢ ಶಾಲೆವರೆಗೂ ರಾಜ್ಯದಲ್ಲಿ 10 ಲಕ್ಷ ಮಕ್ಕಳು ಶಾಲೆಯಿಂದ ಹೊರಗಿದ್ದಾರೆ. ಅವರನ್ನು ಶಾಲೆಗೆ ವಾಪಸ್ ಕರೆತರುವ ಯೋಗ್ಯತೆ ನಿಮಗೆ ಇಲ್ಲ. ಮಕ್ಕಳು ಶಿಕ್ಷಣಕ್ಕೆ ಬರುತ್ತಾರೆಯೇ ಹೊರತು ಶೂ ಸಾಕ್ಸ್ ಗಳಿಗೆ ಅಲ್ಲ ಎನ್ನುತ್ತೀರಿ. ನಿಮಗೆ ಬಡತನ ಎಂದರೆ ಗೊತ್ತಿದೆಯಾ? ಶಿವಮೊಗ್ಗದಲ್ಲಿನ ಶಾಲಾ ಮಕ್ಕಳಿಗೆ ಎಷ್ಟು ಶೂ ಸಾಕ್ಸ್ ಬೇಕಾಗಿದೆ ಎಂದು ಹೋಗಿ ಕೇಳಿ. ಮಕ್ಕಳು ನಾಲ್ಕೈದು ಕಿ.ಮೀ ನಡೆದುಕೊಂಡು ಶಾಲೆಗೆ ಬರಬೇಕಿದೆ. ಈ ಮಧ್ಯೆ ನಿಮ್ಮ ಸೈಕಲ್ ಯೋಜನೆ ಎಲ್ಲಿ ಹೋಯಿತು? ಎಂದು ಪ್ರಶ್ನಿಸಿದರು.

ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನಾದರೂ ನೀಡುತ್ತಿದ್ದೀರಾ? ಇಲ್ಲ. ಬಸವಣ್ಣನವರ ಬಗ್ಗೆ ಏನು ಹೇಳಿದ್ದೀರಿ, ನಾರಾಯಣಗುರುಗಳ ಪರಿಚಯ ಇಲ್ಲ, ಅಂಬೇಡ್ಕರ್, ಶಂಕರಾಚಾರ್ಯ ಕುರಿತು ಏನು ಹೇಳುತ್ತಿದ್ದೀರಾಲ್ಲ ಅದು ಗುಣಮಟ್ಟದ ಶಿಕ್ಷಣವೇ? ಜವಾಬ್ದಾರಿಯುತ ಸ್ಥಾನದಲ್ಲಿರುವ ತಾವು ಉದಾರವಾಗಿ ಆಲೋಚಿಸಿ. ಶಿಕ್ಷಣ ಇಲಾಖೆ ಹಾಗೂ ನಿಗಮಗಳ ಯೋಜನೆ ಸಾಮಾಜಿಕ ಸೇವೆ ಯೋಜನೆಗಳು. ಲಾಭ ಮಾಡಿಕೊಳ್ಳುವ ಯೋಜನೆಗಳಲ್ಲ. ನೀವು ಇದರಲ್ಲೂ ಕಮಿಷನ್ ಕಾಯುತ್ತಾ ಕೂರಬೇಡಿ. ಸಮವಸ್ತ್ರ, ಗುಣಮಟ್ಟದ ಶಿಕ್ಷಣ, ಶೂ ಸಾಕ್ಸ್ ಸೇರಿದಂತೆ ಅವರಿಗೆ ಏನೆಲ್ಲಾ ನೀಡಬೇಕೋ ಅದನ್ನು ತಲುಪಿಸಿ ಎಂದು ಆಗ್ರಹಿಸಿದ್ದಾರೆ.

ರಾಯಚೂರು, ಗುಲ್ಬರ್ಗಾ ಭಾಗದ ಮಕ್ಕಳಲ್ಲಿ ಅಪೌಷ್ಠಿಕತೆ ಹೆಚ್ಚುತ್ತಿದೆ. ಆ ಬಗ್ಗೆ ನಿಮ್ಮಲ್ಲಿ ಯಾವ ಯೋಜನೆ ಇದೆ? ಎಂದು ಪ್ರಶ್ನಿಸಿದ್ದಾರೆ.

ಪಿಎಸ್ ಐ ನೇಮಕಾತಿ ಅಕ್ರಮ ವಿಚಾರ:

ಪಿಎಸ್ಐ ನೇಮಕಾತಿ ಅಕ್ರಮದ ಕುರಿತು ಕಾಂಗ್ರೆಸ್ ಬಳಿ ಯಾವ ಸಾಕ್ಷ್ಟಾಧಾರಗಳಿವೆ ಎಂದು ಬಿಜೆಪಿ ಕೇಳಿರುವ ಬಗ್ಗೆ ಮಾಧ್ಯಮಗಳು ಪ್ರಶ್ನೆ ಮಾಡಿದಾಗ, ‘ಈ ಪ್ರಕರಣದ ತನಿಖೆಯನ್ನು ನಡೆಸಲು ಈ ಸರ್ಕಾರ ಅಸಮರ್ಥವಾಗಿದೆ ಎಂದು ಒಪ್ಪಿಕೊಳ್ಳಲಿ. ಅವರಿಗೆ ತನಿಖೆ ಮಾಡಲು ಸಾಧ್ಯವಾಗದಿದ್ದರೆ ತನಿಖೆಯ ಅಧಿಕಾರವನ್ನು ನಮ್ಮ ಕೈಗೆ ತನಿಖೆ ನೀಡಲಿ, ನಾವು ಮಾಡಿ ತೋರಿಸುತ್ತೇವೆ ಎಂದು ತಿಳಿಸಿದರು.

ಸರ್ಕಾರ ಯಾರ ಬಳಿ ಇದೆ? ತನಿಖೆ ಮಾಡಲು ಯಾರ ಬಳಿ ಅಸ್ತ್ರಗಳಿವೆ? ಗೃಹ ಸಚಿವರು ಮಾತೆತ್ತಿದರೆ ಈ ಪ್ರಕರಣದಲ್ಲಿ ಕಾಂಗ್ರೆಸಿಗರು ಇದ್ದಾರೆ ಎನ್ನುತ್ತಾರೆ. ಈ ಪ್ರಕರಣದಲ್ಲಿ ಬಿಜೆಪಿಯವರಿಲ್ಲ, ಕಾಂಗ್ರೆಸಿಗರಿದ್ದಾರೆ ಎಂದಾದರೆ ಯಾಕೆ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡುತ್ತಿಲ್ಲ? ಇನ್ನು ಮುಖ್ಯಮಂತ್ರಿಗಳು ಕಳೆದ ಕಾಂಗ್ರೆಸ್ ಸರ್ಕಾರದ ಅಕ್ರಮಗಳನ್ನು ತೆಗೆಯುವುದಾಗಿ ಹೇಳಿದ್ದಾರೆ. ನೀವು ಕೇವಲ 5 ವರ್ಷ ಮಾತ್ರವಲ್ಲ, ಕಳೆದ 50 ವರ್ಷಗಳ ಪ್ರಕರಣವನ್ನು ತೆಗೆಯಿರಿ ಎಂದು ಸೂಚಿಸಿದರು.

ಈ ಹಗರಣದಲ್ಲಿ ನಿಮ್ಮ ಪಾಲು ಇಲ್ಲದಿದ್ದರೆ ನ್ಯಾಯಾಂಗ ತನಿಖೆ ನೀಡಲು ಭಯವೇಕೆ? ನಿಮ್ಮ ಹೆಸರು ಅಥವಾ ಬೇರೆಯವರ ಹೆಸರು ಬರುತ್ತದೆ ಎಂಬ ಭಯವಿದೆಯೇ? ಪತ್ರಿಕೆಗಳಲ್ಲಿ ನಿಮ್ಮ ಹೆಸರು ಬರಬೇಕು ಎಂದು ಏನುಬೇಕೋ ಅದನ್ನು ಮಾತನಾಡುವುದಲ್ಲ. ನೀವು ನಿಜವಾಗಿಯೂ ತಪ್ಪಿತಸ್ಥರಲ್ಲದಿದ್ದರೆ, ನ್ಯಾಯಾಂಗ ತನಿಖೆ ನೀಡಿ. ಅದರ ಹೊರತಾಗಿ ಬೇರೆ ಮಾತು ಬೇಡ ಎಂದರು.

ನಮ್ಮ ಮೇಲ್ಮನೆ ಸದಸ್ಯರು ರವಿ ಅವರು ಈ ವಿಚಾರವಾಗಿ ಸದನದಲ್ಲಿ ಪ್ರಶ್ನೆ ಕೇಳಿದಾಗ, ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಅಭ್ಯರ್ಥಿಗಳು ದೂರು ನೀಡಿದ್ದು, ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ನಾವು ಉನ್ನತ ಅಧಿಕಾರಿಗಳ ತಂಡ ರಚಿಸಿ, ಆರೋಪ ಕುರಿತ ತನಿಖೆ ಮಾಡಿದ ನಂತರ ಅವರಿಗೆ ಕ್ಲೀನ್ ಚಿಟ್ ನೀಡಲಾಗಿದೆ ಎಂದು ಗೃಹ ಸಚಿವರು ಉತ್ತರಿಸಿದ್ದಾರೆ. ಗೃಹ ಮಂತ್ರಿಗಳು ಹೇಳಿರುವ ಉನ್ನತ ಅಧಿಕಾರಿಗಳ ತಂಡ ಯಾವುದು? ಈ ಹಗರಣದಲ್ಲಿ ಅಖ್ರಮ ಆಗಿಲ್ಲ ಎಂದು ಕ್ಲೀನ್ ಚಿಟ್ ಕೊಟ್ಟವರು ಯಾರು? ಸದನದಲ್ಲಿ ಈ ಸಮಿತಿಯ ವರದಿ ಇದೆ ಎಂದು ಹೇಳಿದ್ದಾರಲ್ಲ, ಆ ವರದಿ ಎಲ್ಲಿದೆ ಎಂದು ನಾನು ಕೇಳಿದ್ದೇನೆ. ನನ್ನ ಈ ಪ್ರಶ್ನೆಗೆ ಮುಖ್ಯಮಂತ್ರಿಗಳ ಬಳಿ ಉತ್ತರವಿಲ್ಲ. ಅವರು ಇಷ್ಟೋಂದು ಹಗರಣಗಳ ನಡೆದಿದ್ದು, ಯಾವುದಕ್ಕೆ ಉತ್ತರ ನೀಡಬೇಕು ಎಂದು ತೋಚದೇ ಹತಾಶರಾಗಿದ್ದಾರೆ.’ ಎಂದು ಅವರು ತಿಳಿಸಿದರು.

Join Whatsapp
Exit mobile version