ಪ್ರಿಯಾ ರಮಣಿ-ಎಂ.ಜೆ ಅಕ್ಬರ್ ಮಾನನಷ್ಟ ಮೊಕದ್ದಮೆ: ನವೆಂಬರ್ 10ರಂದು ಅಂತಿಮ ವಿಚಾರಣೆ ಪುನರಾರಂಭ

Prasthutha|

ನವದೆಹಲಿ: ಪತ್ರಕರ್ತ ಪ್ರಿಯಾ ರಮಣಿ ವಿರುದ್ಧ ಲೇಖಕ-ರಾಜಕಾರಣಿ ಎಂ.ಜೆ.ಅಕ್ಬರ್ ಸಲ್ಲಿಸಿದ್ದ ಕ್ರಿಮಿನಲ್ ಮಾನಹಾನಿ ಪ್ರಕರಣದ ಅಂತಿಮ ವಾದಗಳನ್ನು ದೆಹಲಿಯ ನ್ಯಾಯಾಲಯ ನವೆಂಬರ್ 10ರಂದು ಪುನರಾರಂಭಿಸಲಿದೆ ಎಂಬುದಾಗಿ ಪಿಟಿಐ ಸೋಮವಾರ ವರದಿ ಮಾಡಿದೆ. ರಮಣಿ 2018 ರ ಅಕ್ಟೋಬರ್‌ನಲ್ಲಿ ಅಕ್ಬರ್‌‌ರವರ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು.

ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ವಿಶಾಲ್ ಪಹುಜಾ ಅವರು ಎರಡೂ ಪಕ್ಷಗಳು ತಮ್ಮ ಮುಂದೆ ಹಾಜರಾದ ನಂತರ ವಿಚಾರಣೆಯ ದಿನಾಂಕವನ್ನು ನಿಗದಿಪಡಿಸಿದ್ದಾರೆ ಎಂದು ಅಕ್ಬರ್ ಪರ ವಕೀಲ ಸಂದೀಪ್ ಕಪೂರ್ ಹೇಳಿದ್ದಾರೆ.

- Advertisement -

ಮಾನಹಾನಿ ಪ್ರಕರಣವು ಕೊನೆಯ ಹಂತದಲ್ಲಿದೆ, ಆದರೆ ಸುಪ್ರೀಂ ಕೋರ್ಟ್‌ನ 2018 ರ ತೀರ್ಪಿನಿಂದಾಗಿ ನ್ಯಾಯಾಲಯವು ವಿಚಾರಣೆಯನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಪಹುಜಾ ಅಕ್ಟೋಬರ್ 13 ರಂದು ಹೇಳಿದ್ದರು. ಈ ಪ್ರಕರಣದ ವಿಚಾರಣೆಗಳು ಅಕ್ಟೋಬರ್ 2018 ರಿಂದ ನಡೆಯುತ್ತಿವೆ.

2017 ರಲ್ಲಿ ವೋಗ್ ಇಂಡಿಯಾದಲ್ಲಿ ಲೇಖನವೊಂದರಲ್ಲಿ ಲೈಂಗಿಕ ಕಿರುಕುಳದ ಘಟನೆಯ ಬಗ್ಗೆ ರಮಣಿ ಮೊದಲ ಬಾರಿಗೆ ಆರೋಪ ಮಾಡಿದ್ದರು. ಅಕ್ಟೋಬರ್ 2018 ರಲ್ಲಿ #MeToo ಚಳವಳಿಯ ಸಂದರ್ಭದಲ್ಲಿ ಸರಣಿ ಟ್ವೀಟ್‌ಗಳಲ್ಲಿ ಅಕ್ಬರ್‌ ತನಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿದರು. ಇದಾದ ನಂತರ, ಸುಮಾರು 20 ಮಹಿಳೆಯರು ಅಕ್ಬರ್ ಅವರ ಪತ್ರಿಕೋದ್ಯಮ ವೃತ್ತಿಜೀವನದಲ್ಲಿ ಹಲವಾರು ವರ್ಷಗಳಿಂದ ಲೈಂಗಿಕ ದುರುಪಯೋಗದ ಆರೋಪ ಮಾಡಿದ್ದರು.

ಪಟಿಯಾಲ ಹೌಸ್ ಕೋರ್ಟ್ ಮಾನನಷ್ಟ ಪ್ರಕರಣದಲ್ಲಿ 2019ರ ಜನವರಿಯಲ್ಲಿ ರಮಣಿಗೆ ಸಮನ್ಸ್ ಜಾರಿಗೊಳಿಸಿತ್ತು. ತದನಂತರ ಫೆಬ್ರವರಿ 2019 ರಲ್ಲಿ ಆಕೆಗೆ 10,000 ರೂ.ಗಳ ವೈಯಕ್ತಿಕ ಬಾಂಡ್ ಮೇಲೆ ಜಾಮೀನು ನೀಡಲಾಗಿತ್ತು.

- Advertisement -