ನವದೆಹಲಿ: ದೇಶದಲ್ಲಿರುವ ಸೈನಿಕ ಶಾಲೆಗಳನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರಕಾರದ ನಡೆ ವಿರೋಧಿಸಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಎರಡು ಪುಟಗಳ ಪತ್ರ ಬರೆದಿದ್ದಾರೆ
ಈ ಯೋಜನೆ ಸರಿಯಲ್ಲ. ಇದನ್ನು ಸಂಪೂರ್ಣವಾಗಿ ಹಿಂಪಡೆಯಬೇಕು ಮತ್ತು ಈ ನಿಟ್ಟಿನಲ್ಲಿ ಮಾಡಿಕೊಳ್ಳಲಾಗಿರುವ ಒಪ್ಪಂದಗಳನ್ನು ಕೂಡಲೇ ರದ್ದುಪಡಿಸಬೇಕು ಎಂದು ಖರ್ಗೆ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಪಕ್ಷ ರಾಜಕೀಯದಿಂದ ಸಶಸ್ತ್ರ ಪಡೆಗಳನ್ನು ಭಾರತೀಯ ಪ್ರಜಾಪ್ರಭುತ್ವವು ಪ್ರಜ್ಞಾಪೂರ್ವಕವಾಗಿ ದೂರ ಇರಿಸಿದೆ. ಆದರೆ, ಕೇಂದ್ರ ಸರ್ಕಾರವು ಈ ಸಂಪ್ರದಾಯವನ್ನು ಉಲ್ಲಂಘಿಸಿದೆ ಎಂದಿದ್ದಾರೆ.
ಒಂದಾದ ನಂತರ ಒಂದು ಸಂಸ್ಥೆಯ ಶಕ್ತಿಗುಂದಿಸಿದ ಬಳಿಕ, ಸಶಸ್ತ್ರ ಪಡೆಗಳ ಮೇಲೆ ತನ್ನ ಸಿದ್ಧಾಂತವನ್ನು ಹೇರಲು ಆರ್‌ಎಸ್‌ಎಸ್ ಈ ಯೋಜನೆ ಹಾಕಿಕೊಂಡಿದೆ. ಈ ರೀತಿಯ ಸಂಸ್ಥೆಗಳ ಮೇಲೆ ಸಿದ್ಧಾಂತ ಹೇರಿದರೆ ಅದು ಎಲ್ಲರ ಒಳಗೊಳ್ಳುವಿಕೆಯನ್ನು ಹಾಳುಗೆಡವುತ್ತದೆ. ಅಲ್ಲದೇ, ಧಾರ್ಮಿಕ, ಕಾರ್ಪೊರೇಟ್, ಕುಟುಂಬ, ಸಾಮಾಜಿಕ ಮತ್ತು ಸಾಂಸ್ಕೃತಿಕ ನಡವಳಿಕೆಗಳನ್ನು ಸೈನಿಕ ಶಾಲೆಗಳ ಮೇಲೆ ಹೇರುವ ಮೂಲಕ ಆ ಶಾಲೆಗಳ ‘ರಾಷ್ಟ್ರೀಯ ಮಾನ್ಯತೆ’ಗೂ ಧಕ್ಕೆಯಾಗುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷರು ವಿವರಿಸಿದ್ದಾರೆ.