Home ಟಾಪ್ ಸುದ್ದಿಗಳು ಶಿಕ್ಷಣ ಇಲಾಖೆಯ ವಿವಿಧ ಕ್ರಮ ಖಂಡಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದಿಂದ ಪ್ರತಿಭಟನೆ

ಶಿಕ್ಷಣ ಇಲಾಖೆಯ ವಿವಿಧ ಕ್ರಮ ಖಂಡಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದಿಂದ ಪ್ರತಿಭಟನೆ

ಬೆಂಗಳೂರು : ಶುಲ್ಕ ಕಡಿತ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ವಿವಿಧ ಕ್ರಮ ಖಂಡಿಸಿ ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕ, ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯ ಸದಸ್ಯರು ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘಟನೆಗಳಾದ ಕ್ಯಾಮ್ಸ್, ಕುಸ್ಮಾ, ಮಿಕ್ಸಾ, ಎಂಎಎಸ್, ಎಬಿಇ, ಎಸ್ ಇಸಿ ಮೊದಲಾದವುಗಳ ಮುಂದಾಳತ್ವದಲ್ಲಿ ಪ್ರತಿಭಟನೆ ನಡೆಸಿದರು.

ರಾಜ್ಯ ಸರಕಾರ ಶುಲ್ಕ ಕಡಿತ ನಿರ್ಧಾರವನ್ನು ಪುನರ್ ಪರಿಶೀಲನೆ ಮಾಡಬೇಕು. ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆ ಹಾಗೂ ಅಲ್ಲಿನ ಶಿಕ್ಷಕರ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಸರ್ಕಾರಿ ಶಾಲೆಗಳಿಗಿಂತ ಉತ್ಕೃಷ್ಟ ಶಿಕ್ಷಣವನ್ನು ಖಾಸಗಿ ಶಾಲೆಗಳು ನೀಡುತ್ತಿವೆ. ಕೊರೊನಾದಿಂದ ಖಾಸಗಿ ಶಾಲೆಗಳಿಗೆ ಶೇ.60ರಿಂದ ಶೇ.70ರಷ್ಟು ಆರ್ಥಿಕ ಸಂಕಷ್ಟ ಎದುರಾಗಿದೆ ಎಂದು ಪ್ರತಿಭಟನಕಾರರು ತಿಳಿಸಿದ್ದಾರೆ.

ಈ ನಡುವೆಯೂ ಪಾಲಕ, ಪೋಷಕರನ್ನು ವಿಶ್ವಾಸಕ್ಕೆ ತೆಗೆದಯಕೊಂಡು ಹೋಗುತ್ತಿದ್ದೇವೆ. ಆದರೂ ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಸಮರ ಸಾರುತ್ತಿದೆ. ಶೇ.30ರಷ್ಟು ಶುಲ್ಕ ವಿನಾಯ್ತಿ ಮಾಡಿದ್ದಾರೆ. ಶಿಕ್ಷಕರಿಗೆ ಶಿಕ್ಷಕೇತರರಿಗೆ ವೇತನ ನೀಡಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಶುಲ್ಕ ವಿನಾಯ್ತಿಯನ್ನು ಪುನರ್ ಪರಿಶೀಲಿಸಬೇಕು ಎಂದು ಆಗ್ರಹಿಸಿದರು.

ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ರಮೇಶ್ ಗೌಡ, ಮಾಜಿ ಸಂಸದ ಶಿವರಾಮೇಗೌಡ, ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಇದ್ದರು. ಪ್ರತಿಭಟನೆಗೂ ಮೊದಲು ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪ್ರತಿಭಟನೆಯಿಂದ ಶೇಷಾದ್ರಿ ರಸ್ತೆ, ಗಾಂಧಿನಗರ, ಕೆ.ಆರ್. ವೃತ್ತ, ಮೆಜೆಸ್ಟಿಕ್ ಸುತ್ತಮುತ್ತಲು ಟ್ರಾಫಿಕ್ ಜಾಮ್ ಆಗಿದ್ದರಿಂದ, ಪ್ರಯಾಣಿಕರು ಪರದಾಡುವಂತಾಯಿತು.  

Join Whatsapp
Exit mobile version