Home ಟಾಪ್ ಸುದ್ದಿಗಳು ಕರ್ನಾಟಕ ಚುನಾವಣೆಯು ಅಸಲಿ ಮತ್ತು ನಕಲಿಗಳ ನಡುವಿನ ಹೋರಾಟ: ಪೃಥ್ವಿ ರೆಡ್ಡಿ

ಕರ್ನಾಟಕ ಚುನಾವಣೆಯು ಅಸಲಿ ಮತ್ತು ನಕಲಿಗಳ ನಡುವಿನ ಹೋರಾಟ: ಪೃಥ್ವಿ ರೆಡ್ಡಿ

ಬೆಂಗಳೂರು: ಆಮ್‌ ಆದ್ಮಿ ಪಾರ್ಟಿಯು ದೆಹಲಿ ಹಾಗೂ ಪಂಜಾಬ್‌ ನಲ್ಲಿ ಜಾರಿಗೆ ತಂದಿರುವ ಯೋಜನೆಗಳನ್ನು  ಬೇರೆ ಪಕ್ಷಗಳು  ನಕಲು ಮಾಡಿ ಕರ್ನಾಟಕದಲ್ಲಿ ಆಶ್ವಾಸನೆಗಳನ್ನು ನೀಡುತ್ತಿದ್ದು, ಈ ಚುನಾವಣೆಯು ಅಸಲಿ ಮತ್ತು ನಕಲಿಗಳ ನಡುವಿನ ಹೋರಾಟವಾಗಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿದರು.

ಬೆಂಗಳೂರಿನ ಪ್ರೆಸ್‌ ಕ್ಲಬ್‌ ನವರು ಆಯೋಜಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ   ಮಾತನಾಡಿದ ಪೃಥ್ವಿ ರೆಡ್ಡಿ, “ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕಾರಣಿಗಳು ಮಾಧ್ಯಮಗಳ ಜೊತೆ ಸಂವಾದ ನಡೆಸುವುದು ಒಳ್ಳೆಯ ಬೆಳವಣಿಗೆ. ಆಮ್‌ ಆದ್ಮಿ ಪಾರ್ಟಿಯು ಇಡೀ ದೇಶದ ರಾಜಕೀಯದಲ್ಲಿ ಬದಲಾವಣೆ ತಂದಿದ್ದು, ಕರ್ನಾಟಕದ ಚುನಾವಣೆಯಲ್ಲೂ ಭಾರೀ ಬದಲಾವಣೆಯನ್ನು ನೋಡುತ್ತಿದ್ದೇವೆ. ಹಿಂದಿನ ಚುನಾವಣೆಗಳಲ್ಲಿ ಮತದಾರರು ಕೊನೆ ಹಂತದ ಭಾವನಾತ್ಮಕ ವಿಚಾರಗಳಿಂದ ಕೇವಲ ಜಾತಿ ಹಾಗೂ ಧರ್ಮ ನೋಡಿ ಮತದಾನ ಮಾಡುತ್ತಿದ್ದರು. ಆದರೆ ಈ ಚುನಾವಣೆಯಲ್ಲಿ ʻಮತದಾನದಿಂದ ನಮಗೇನು ಲಾಭವಾಗುತ್ತದೆ?ʼ ಎಂದು ಯೋಚಿಸಲು ಆರಂಭಿಸಿದ್ದಾರೆ. ಈ ಮೂಲಕ ಜನಪರ ಆಡಳಿತವನ್ನು ಜನರು ಬಯಸಲು ಶುರು ಮಾಡಿದ್ದಾರೆ” ಎಂದು ಪೃಥ್ವಿ ರೆಡ್ಡಿ ಹೇಳಿದರು.

“ಕೆಲವು ದಿನಗಳ ಹಿಂದೆ ಪ್ರತಿಷ್ಠಿತ ಸಂಸ್ಥೆಯೊಂದರ   ಪತ್ರಕರ್ತರೊಬ್ಬರನ್ನು ಮಾತನಾಡಿಸಿದೆ. ಅವರು ಸುಮಾರು 25 ವರ್ಷದ ಅನುಭವವಿರುವ ಪತ್ರಕರ್ತರು. ಅವರ ಹೆಂಡತಿ ಹಾಗೂ ಮಕ್ಕಳು ಶಿವಮೊಗ್ಗದಲ್ಲಿದ್ದು, ಅವರು ಮಾತ್ರ ಬೆಂಗಳೂರಿನಲ್ಲಿ ದುಡಿಯುತ್ತಿದ್ದಾರೆ. ಏಕೆ ಹೀಗೆ ಎಂದು ನಾನು ಕೇಳಿದ್ದಕ್ಕೆ, ಬೆಂಗಳೂರಿನ ಶಾಲೆಗಳ ದುಬಾರಿ ಶುಲ್ಕವನ್ನು ಪಾವತಿಸಿ ಇಲ್ಲಿ ಶಿಕ್ಷಣ ಕೊಡಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಅವರಿಗೆ ಶಿವಮೊಗ್ಗದಲ್ಲಿ ಶಿಕ್ಷಣ ಕೊಡಿಸಿ, ನಾನೊಬ್ಬನೇ ಬೆಂಗಳೂರಿನಲ್ಲಿ ಇದ್ದೇನೆ. ಎರಡು ವಾರಕ್ಕೊಮ್ಮೆ ಶಿವಮೊಗ್ಗಕ್ಕೆ ಹೋಗಿ ಮಾತನಾಡಿಸುತ್ತೇನೆ ಎಂದು ಅವರು ಹೇಳಿದರು. ಇಂತಹ ಪರಿಸ್ಥಿತಿ ಹೋಗಬೇಕೆಂದರೆ ಸರ್ಕಾರಿ ಶಿಕ್ಷಣದಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ಆಮ್‌ ಆದ್ಮಿ ಪಾರ್ಟಿ ಅಧಿಕಾರಕ್ಕೆ ಬರಬೇಕು” ಎಂದು ಪೃಥ್ವಿ ರೆಡ್ಡಿ ಹೇಳಿದರು.

“ಆಮ್‌ ಆದ್ಮಿ ಪಾರ್ಟಿಯು ಕೇವಲ ಹತ್ತು ವರ್ಷಗಳಲ್ಲಿ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಪಡೆದುಕೊಂಡಿದೆ. ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಅಧಿಕಾರ ಹೊಂದಿರುವ ಕೇವಲ ಮೂರು ಪಕ್ಷಗಳಲ್ಲಿ ಆಮ್‌ ಆದ್ಮಿ ಪಾರ್ಟಿ ಕೂಡ ಒಂದು. ಜನಸಾಮಾನ್ಯರು ಚುನಾವಣೆಗೆ ಸ್ಪರ್ಧಿಸುವುದಷ್ಟೇ ಅಲ್ಲ, ಗೆಲ್ಲಲು ಕೂಡ ಸಾಧ್ಯವಿದೆ ಎಂಬುದನ್ನು ಆಮ್‌ ಆದ್ಮಿ ಪಾರ್ಟಿ ಸಾಬೀತು ಪಡಿಸಿದೆ. ಪಂಜಾಬ್‌ ಚುನಾವಣೆಯಲ್ಲಿ ಆಮ್‌ ಆದ್ಮಿ ಪಾರ್ಟಿಯು ಜನಸಾಮಾನ್ಯನನ್ನು ಕಣಕ್ಕಿಳಿಸಿ ಅಲ್ಲಿನ ಮುಖ್ಯಮಂತ್ರಿ ಆಗಿದ್ದವರನ್ನೇ ಸೋಲಿಸಿದೆ” ಎಂದು ಪೃಥ್ವಿ ರೆಡ್ಡಿ ಹೇಳಿದರು.

“ಆಮ್‌ ಆದ್ಮಿ ಪಾರ್ಟಿಯಿಂದ 27 ರೈತರು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ವಿಶೇಷವೆಂದರೆ, ನಾಮಕಾವಸ್ತೆ ರೈತರ ಬದಲು ಉಳುಮೆ ಮಾಡುವ ರೈತರಿಗೆ ಆಮ್‌ ಆದ್ಮಿ ಪಾರ್ಟಿಯು ಟಿಕೆಟ್‌ ನೀಡಿದೆ. ಮೀಸಲಾತಿಯಿಲ್ಲದ ಕ್ಷೇತ್ರಗಳಲ್ಲೂ ನಾವು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಟಿಕೆಟ್‌ ನೀಡಿದ್ದೇವೆ. ಮಹಿಳಾ ಸಬಲೀಕರಣವನ್ನು ಎತ್ತಿಹಿಡಿಯುವ ಉದ್ದೇಶದಿಂದ ಒಟ್ಟು 18 ಮಹಿಳೆಯರಿಗೆ ಎಎಪಿ ಟಿಕೆಟ್‌ ನೀಡಿದೆ. ಬೇರೆ ಪಕ್ಷಗಳಿಂದ ಇವುಗಳನ್ನೆಲ್ಲ ನಿರೀಕ್ಷಿಸಲು ಸಾಧ್ಯವೇ?” ಎಂದು ಪೃಥ್ವಿ ರೆಡ್ಡಿ ಪ್ರಶ್ನಿಸಿದರು.

“ಜನರ ತೆರಿಗೆ ಹಣವು ಉದ್ಯಮಿಗಳ ಸಾಲ ಮನ್ನಾ ಮಾಡಲು ಬಳಕೆಯಾಗುತ್ತಿರುವುದು ದುರದೃಷ್ಟಕರ. ಕಮಿಷನ್‌ ದಂಧೆಯಿಂದಾಗಿ ಸರ್ಕಾರಗಳಿಗೆ ಯಾವುದಕ್ಕೂ ಹಣ ಸಾಕಾಗುತ್ತಿಲ್ಲ. ಹೀಗಿರುವಾಗ  ಇವರುಗಳು ನೀಡಿರುವ ಗ್ಯಾರಂಟಿ- ಭರವಸೆಗಳು ಎಷ್ಟರಮಟ್ಟಿಗೆ ಈಡೇರುತ್ತವೆ ಎಂಬುದು ಮತದಾರರುಗಳಲ್ಲಿ ಯಕ್ಷಪ್ರಶ್ನೆಯಾಗಿದೆ.

ಅಕ್ರಮಗಳಿಗೆ ಕಡಿವಾಣ ಹಾಕಿ ಪ್ರಾಮಾಣಿಕ ಹಾಗೂ ಪಾರದರ್ಶಕ ಆಡಳಿತವನ್ನು ನೀಡಿದಲ್ಲಿ ಮಾತ್ರ  ದೆಹಲಿ ಹಾಗೂ ಪಂಜಾಬ್‌ ಮಾದರಿಯಲ್ಲಿ ಜನರಿಗೆ ಮೂಲಸೌಕರ್ಯಗಳನ್ನು ಉಚಿತವಾಗಿ ಹಾಗೂ ಉತ್ತಮ ಗುಣಮಟ್ಟದಲ್ಲಿ ನೀಡಲು ಸಾಧ್ಯವಾಗುತ್ತದೆ. ಉಚಿತವೆಂದು ಕರೆಯಲ್ಪಡುವ ಕೊಡುಗೆಗಳು ನಿಜಕ್ಕೂ ಉಚಿತವಲ್ಲ. ಜನರು ತೆರಿಗೆ ರೂಪದಲ್ಲಿ ಇವುಗಳಿಗೆ ಪ್ರಿಪೇಯ್ಡ್‌ ಮಾಡಿರುತ್ತಾರೆ” ಎಂದು ಪೃಥ್ವಿ ರೆಡ್ಡಿ ಹೇಳಿದರು.

“ಕೋವಿಡ್‌ ಸಂದರ್ಭದಲ್ಲಿ ಆಮ್‌ ಆದ್ಮಿ ಪಾರ್ಟಿಯು ರಾಜ್ಯಾದ್ಯಂತ ಜನಸೇವೆ ಮಾಡಿದೆ. ನಮ್ಮ ನೂರಾರು ಕಾರ್ಯಕರ್ತರು ಮಾಸ್ಕ್‌, ಸ್ಯಾನಿಟೈಸರ್‌, ಪಡಿತರ ಕಿಟ್‌ ಮುಂತಾದವುಗಳನ್ನು ವಿತರಿಸಿದ್ದಾರೆ, ಅಸಂಖ್ಯಾತ ಜನರಿಗೆ ಊಟ ಹಾಕಿ ಹಸಿವು ನೀಗಿಸಿದ್ದಾರೆ. ಜನರು ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದ್ದು, ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಸಲಿದ್ದಾರೆ. ಈ ಬಾರಿ ಆಮ್ ಆದ್ಮಿ ಪಕ್ಷದ  ಕುತೂಹಲಕಾರಿ ನಿರ್ಣಾಯಕ ಫಲಿತಾಂಶಗಳು ಹೊರಬೀಳುತ್ತವೆ  ಎಂಬ ವಿಶ್ವಾಸವಿದೆ” ಎಂದು ಪೃಥ್ವಿ ರೆಡ್ಡಿ ಹೇಳಿದರು.  ಕಾರ್ಯಕ್ರಮದಲ್ಲಿ ಪ್ರೆಸ್ ಕ್ಲಬ್ ಅಧ್ಯಕ್ಷ  ಶ್ರೀಧರ್, ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಸೇರಿದಂತೆ ಅನೇಕ ಪದಾಧಿಕಾರಿಗಳು ಭಾಗವಹಿಸಿದ್ದರು.

Join Whatsapp
Exit mobile version