Home ಟಾಪ್ ಸುದ್ದಿಗಳು ಪ್ರಧಾನಿ ಮೋದಿಯಿಂದ ರೌಡಿ ಶೀಟರ್ ಫೈಟರ್ ರವಿ ಭೇಟಿ| ವ್ಯಾಪಕ ಆಕ್ರೋಶ

ಪ್ರಧಾನಿ ಮೋದಿಯಿಂದ ರೌಡಿ ಶೀಟರ್ ಫೈಟರ್ ರವಿ ಭೇಟಿ| ವ್ಯಾಪಕ ಆಕ್ರೋಶ

ಬೆಂಗಳೂರು: ಮಂಡ್ಯದಲ್ಲಿ ಆಯೋಜಿಸಿದ್ದ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆಗೆಂದು ಮೈಸೂರಿಗೆ ಬಂದಿಳಿದಿದ್ದ ನರೇಂದ್ರ ಮೋದಿ ಅವರನ್ನು ಬರಮಾಡಿಕೊಂಡ ಬಿಜೆಪಿ ನಾಯಕರ ನಿಯೋಗದಲ್ಲಿದ್ದ ರೌಡಿ ಶೀಟರ್ ಫೈಟರ್‌ ರವಿ ಎದುರು ಮೋದಿಯವರು ಕೈ ಮುಗಿದು ನಿಂತಿರುವ ಫೋಟೋ ವೈರಲಾಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್‌, ಪ್ರಧಾನಿ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ.

ಜಗತ್ತಿನಲ್ಲಿಯೇ ಬಿಜೆಪಿಯಂತಹ ನಿರ್ಲಜ್ಜ ರಾಜಕೀಯ ಪಕ್ಷ ಬೇರೆ ಇರಲು ಸಾಧ್ಯವೇ ಇಲ್ಲ. ಫೈಟರ್ ರವಿ ಎಂಬ ರೌಡಿ ಶೀಟರ್ ಎದುರು ಕೈಮುಗಿದು ನಿಂತ ನರೇಂದ್ರ ಮೋದಿ ಅವರಿಂದ ಪ್ರಧಾನಿ ಹುದ್ದೆಗೆ ಕಳಂಕ ಅಂಟಿದೆ ಎಂದು ಆರೋಪಿಸಿದೆ. ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದ ಬಿಜೆಪಿ ರೌಡಿಯನ್ನು ಪ್ರಧಾನಿ ಎದುರು ನಿಲ್ಲಿಸಿದ್ದು ನಾಚಿಕೆಗೇಡು ಎಂದು ಆಕ್ರೋಶ ವ್ಯಕ್ತಪಡಿಸಿದೆ.

ನಾಗಮಂಗಲ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿ

ಕಳೆದೆರಡು ವರ್ಷಗಳಿಂದ ಮಂಡ್ಯದ ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಮಲ್ಲಿಕಾರ್ಜುನ್‌ ಅಲಿಯಾಸ್‌ ಫೈಟರ್‌ ರವಿ ಎಂಬುವವರು 2022ರ ನವೆಂಬರ್‌ 28ರಂದು ಸಚಿವ ಅಶ್ವತ್ಥ ನಾರಾಯಣ, ನಾರಾಯಣಗೌಡ, ಗೋಪಾಲಯ್ಯ ಅವರ ಸಮ್ಮುಖದಲ್ಲಿ ಮಂಡ್ಯದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು.

ಸರ್ಕಾರಿ ಶಾಲೆಗಳಿಗೆ ಶುದ್ಧ ಕುಡಿಯುವ ನೀರು ಸೇರಿದಂತೆ ಹಲವು ಸೌಲಭ್ಯ ಒದಗಿಸಿರುವ ಫೈಟರ್‌ ರವಿ ನಾಗಮಂಗಲ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿ.

ಇತ್ತೀಚೆಗೆ ನಾಗಮಂಗಲ ತಲುಪಿದ್ದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ್ದ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ’ಮಂಡ್ಯ ಜಿಲ್ಲೆಯಲ್ಲಿ ಈ ಬಾರಿ ನಾಲ್ಕು ಕ್ಷೇತ್ರಗಳಲ್ಲಿ ಕಮಲ ಅರಳಲಿದೆ. ನಾಗಮಂಗಲ ತಾಲ್ಲೂಕಿನಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಮಲ್ಲಿಕಾರ್ಜುನ್ ಫೈಟರ್ ರವಿ ಅವರ ಗೆಲುವು ನಿಶ್ಚಿತ’ ಎಂದಿದ್ದರು.

Join Whatsapp
Exit mobile version