Home ಟಾಪ್ ಸುದ್ದಿಗಳು ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ಪ್ರಜ್ಞಾನಂದ

ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ಪ್ರಜ್ಞಾನಂದ

ಹೊಸದಿಲ್ಲಿ: ಚೆಸ್ ವಿಶ್ವಕಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ಗ್ರ್ಯಾಂಡ್ ಮಾಸ್ಟರ್ ಆರ್​. ಪ್ರಜ್ಞಾನಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ದೆಹಲಿಯ ಲೋಕ ಕಲ್ಯಾಣ್ ಮಾರ್ಗ್​ನಲ್ಲಿರುವ ಪ್ರಧಾನ ಮಂತ್ರಿಯ ನಿವಾಸಕ್ಕೆ ಕುಟುಂಬ ಸಮೇತ ಆಗಮಿಸಿದ ಪ್ರಜ್ಞಾನಂದ, ಮೋದಿ ಅವರೊಂದಿಗೆ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಜ್ಞಾನಂದ, ಸನ್ಮಾನ್ಯ ಪ್ರಧಾನಮಂತ್ರಿಗಳನ್ನು ಅವರ ನಿವಾಸದಲ್ಲಿ ಭೇಟಿಯಾಗಿರುವುದು ದೊಡ್ಡ ಗೌರವ. ನನಗೆ ಮತ್ತು ನನ್ನ ಪೋಷಕರಿಗೆ ಅವರು ನೀಡಿದ ಪ್ರೋತ್ಸಾಹದ ಎಲ್ಲಾ ಮಾತುಗಳಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.

ಈ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ಇವತ್ತು ಲೋಕ ಕಲ್ಯಾಣ್ ಮಾರ್ಗ್​ನಲ್ಲಿರುವ ತಮ್ಮ ನಿವಾಸಕ್ಕೆ ವಿಶೇಷ ಅತಿಥಿಗಳು ಆಗಮಿಸಿದ್ದರು. ನಿಮ್ಮ ಕುಟುಂಬದ ಜೊತೆ ನಿಮ್ಮನ್ನು ಭೇಟಿಯಾಗಿದ್ದು ಸಂತೋಷವಾಯಿತು. ನಿಮ್ಮ ಉತ್ಸಾಹ ಮತ್ತು ಪರಿಶ್ರಮವನ್ನು ನೀವು ನಿರೂಪಿಸಿದ್ದೀರಿ. ಭಾರತದ ಯುವಕರು ಯಾವುದೇ ಡೊಮೇನ್ ಅನ್ನು ಹೇಗೆ ಜಯಿಸಬಹುದು ಎಂಬುದಕ್ಕೆ ನೀವು ಉದಾಹರಣೆಯಾಗಿದ್ದೀರಿ. ನಿಮ್ಮ ಬಗ್ಗೆ ಹೆಮ್ಮೆಯಿದೆ ಪ್ರಜ್ಞಾನಂದ ಎಂದು ಟ್ವೀಟ್ ಮಾಡಿದ್ದಾರೆ.

ಅಝರ್​ಬೈಜಾನ್​ನಲ್ಲಿ ಆಗಸ್ಟ್ 24 ರಂದು, 18 ವರ್ಷ ವಯಸ್ಸಿನ ಪ್ರಜ್ಞಾನಂದ ಅವರು ಚೆಸ್ ವಿಶ್ವ ಕಪ್ ಫೈನಲ್‌ನಲ್ಲಿ ಪ್ರಸ್ತುತ ವಿಶ್ವದ ನಂಬರ್ ಒನ್ ಮ್ಯಾಗ್ನಸ್ ಕಾರ್ಲ್‌ಸೆನ್‌ ವಿರುದ್ಧ ಟೈಬ್ರೇಕರ್‌ನಲ್ಲಿ ಸೋತಿದ್ದರು. ಈ ಸೋಲಿನ ಬೆನ್ನಲ್ಲೇ ಟ್ವೀಟ್ ಮಾಡುವ ಮೂಲಕ ಪ್ರಧಾನಿ ಯುವ ಚೆಸ್ ತಾರೆಯನ್ನು ಹುರಿದುಂಬಿಸಿದ್ದರು.

FIDE ವಿಶ್ವಕಪ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಿ ಪ್ರಜ್ಞಾನಂದನ ಬಗ್ಗೆ ನಾವೆಲ್ಲರೂ ಹೆಮ್ಮೆಪಡುತ್ತೇವೆ! ಅವರು ತಮ್ಮ ಅಸಾಧಾರಣ ಕೌಶಲ್ಯಗಳನ್ನು ಪ್ರದರ್ಶಿಸಿ ಫೈನಲ್‌ನಲ್ಲಿ ಮ್ಯಾಗ್ನಸ್ ಕಾರ್ಲ್‌ಸೆನ್‌ ಅವರಿಗೆ ಕಠಿಣ ಪೈಪೋಟಿ ನೀಡಿದರು. ಇದೇನು ಸಣ್ಣ ಸಾಧನೆಯಲ್ಲ. ಪ್ರಜ್ಞಾನಂದ ಅವರ ಮುಂಬರುವ ಪಂದ್ಯಾವಳಿಗಳಿಗೆ ಶುಭ ಹಾರೈಸುತ್ತೇನೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದರು. ಇದೀಗ ಯುವ ಚೆಸ್ ತಾರೆಯನ್ನು ಪ್ರಧಾನಿ ನಿವಾಸಕ್ಕೆ ಕರೆಸಿ ಮೋದಿ ಕುಶಲೋಪರಿ ನಡೆಸಿದ್ದಾರೆ.

Join Whatsapp
Exit mobile version