Home ಟಾಪ್ ಸುದ್ದಿಗಳು ಅರ್ಚಕರ ಹತ್ಯೆ ಆರೋಪಿ ಸೆರೆ | ‘ಇಸ್ಲಾಮಿಕ್ ಜಿಹಾದ್’ ಎಂದಿದ್ದ ಮುತಾಲಿಕ್ ಗೆ ಮುಖಭಂಗ

ಅರ್ಚಕರ ಹತ್ಯೆ ಆರೋಪಿ ಸೆರೆ | ‘ಇಸ್ಲಾಮಿಕ್ ಜಿಹಾದ್’ ಎಂದಿದ್ದ ಮುತಾಲಿಕ್ ಗೆ ಮುಖಭಂಗ

ಮಂಡ್ಯ : ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ನಗರದ ಶ್ರೀ ಅರ್ಕೇಶ್ವರ ದೇವಾಲಯದಲ್ಲಿ ಮೂವರು ಅರ್ಚಕರನ್ನು ಹತ್ಯೆ ಮಾಡಿ, ಹುಂಡಿಯ ಹಣದ ದರೋಡೆ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆಂಧ್ರ ಪ್ರದೇಶದ ವಿಜಿ, ತೊಪ್ಪನಹಳ್ಳಿ ಗ್ರಾಮದ ಮಂಜ, ಅರೆಕಲ್ ದೊಡ್ಡಿ ಗ್ರಾಮದ ಗಾಂಧಿ ಎಂಬವರು ಬಂಧಿತ ಆರೋಪಿಗಳು. ದೇವಸ್ಥಾನದ ಅರ್ಜಕರ ಹತ್ಯೆ ಮಾಡಿ, ದರೋಡೆ ಮಾಡಿದ ಈ ಪ್ರಕರಣವನ್ನೂ ರಾಜಕೀಯಗೊಳಿಸಿ, “ಇದರ ಹಿಂದೆ ಇಸ್ಲಾಮಿಕ್ ಜಿಹಾದ್ ಕೆಲಸ ಮಾಡಿರಬಹುದು’’ ಎಂದಿದ್ದ ಶ್ರೀರಾಮ್ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗೆ ಇದರಿಂದ ಭಾರಿ ಮುಖಭಂಗವಾಗಿದೆ.

ಬಂಧನದ ವೇಳೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಯ ಮೇಲೆ ಆರೋಪಿಗಳು ಕಲ್ಲು ಮತ್ತು ಚಾಕುಗಳಿಂದ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಮದ್ದೂರು ತಾಲೂಕಿನ ಸಾದೊಳಲು ಗೇಟ್ ಬಳಿ ಆರೋಪಿಗಳ ಪತ್ತೆಗೆ ರಚನೆ ಮಾಡಿದ್ದ ಗ್ರಾಮಾಂತರ ಪೊಲೀಸ್ ಠಾಣಾ ವೃತ್ತ ನಿರೀಕ್ಷಕ ಎನ್.ವಿ. ಮಹೇಶ್ ಹಾಗೂ ಪೂರ್ವ ಪೊಲೀಸ್ ಠಾಣೆಯ ಪಿಎಸ್ ಐ ಶರತ್ ಕುಮಾರ್ ಅವರ ತಂಡ ಆರೋಪಿಗಳನ್ನು ಬಂಧಿಸಿದೆ.
ಕಾರ್ಯಾಚರಣೆ ವೇಳೆ ಪಿಎಸ್ ಐ ಶರತ್ ಕುಮಾರ್ ಹಾಗೂ ಸಿಬ್ಬಂದಿಗಳಾದ ಅನಿಲ್ ಕುಮಾರ್, ಕೃಷ್ಣ ಕುಮಾರ್ ಅವರು ಗಾಯಗೊಂಡಿದ್ದು, ಮದ್ದೂರು ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು, ಜಿಲ್ಲಾಸ್ಪತ್ರೆಗೆ ವರ್ಗಾಯಿಸಲಾಗಿದೆ. ಆರೋಪಿಗಳನ್ನು ಬಂಧಿಸಲು ನಡೆಸಿದ ಕಾರ್ಯಾಚರಣೆ ವೇಳೆ ಪೊಲೀಸರು, ಗುಂಡಿನ ದಾಳಿ ನಡೆಸಿದ್ದು, ಮೂವರು ಬಂಧಿತರಿಗೂ ಗುಂಡಿನ ಏಟು ತಗುಲಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ದೇವಸ್ಥಾನ ಆವರಣದಲ್ಲೇ ಮೂವರು ಅರ್ಚಕರ ಹತ್ಯೆ ನಡೆದಿದ್ದು, ವ್ಯಾಪಕ ಆಘಾತ ವ್ಯಕ್ತವಾಗಿತ್ತು. ಆದರೆ, ವಿಷಯವನ್ನು ರಾಜಕೀಯಗೊಳಿಸಿದ್ದ ಪ್ರಮೋದ್ ಮುತಾಲಿಕ್, “ಹುಂಡಿ ಹಣಕ್ಕಾಗಿ ಹತ್ಯೆ ನಡೆದಿದೆ ಎಂದರೆ ನನಗೆ ಅನುಮಾನವಾಗುತ್ತಿದೆ. ಇದರ ಹಿಂದೆ ಇಸ್ಲಾಮಿಕ್ ಜಿಹಾದ್ ಕೆಲಸ ಮಾಡಿದರೂ ಮಾಡಿರಬಹುದು. ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು’’ ಎಂದಿದ್ದು ವರದಿಯಾಗಿತ್ತು.

Join Whatsapp
Exit mobile version