Home ಟಾಪ್ ಸುದ್ದಿಗಳು ಬುಡಕಟ್ಟು ಜನರ ವಿಕಾಸಕ್ಕೆ ದಾರಿ ತೋರಿಸಿ, ಅವರು ಮುನ್ನಡೆಯುತ್ತಾರೆ: ದ್ರೌಪದಿ ಮುರ್ಮ

ಬುಡಕಟ್ಟು ಜನರ ವಿಕಾಸಕ್ಕೆ ದಾರಿ ತೋರಿಸಿ, ಅವರು ಮುನ್ನಡೆಯುತ್ತಾರೆ: ದ್ರೌಪದಿ ಮುರ್ಮ

ಬೆಂಗಳೂರು: ನೈಜ ದುರ್ಬಲ ಬುಡಕಟ್ಟು ಜನರ ಸರ್ವಾಂಗೀಣ ವಿಕಾಸಕ್ಕಾಗಿ ವಸತಿ, ಶಿಕ್ಷಣ, ಆರ್ಥಿಕ ಚಟುವಟಿಕೆಗಳು, ಆರೋಗ್ಯ ಸೌಕರ್ಯಗಳ ಕನಿಷ್ಠ ಮೂಲ ಸೌಕರ್ಯಗಳನ್ನು ಕಲ್ಪಿಸಿ, ಸುಧಾರಣೆಯ ದಾರಿ ತೋರಿಸಿದರೆ ಸಾಕು ಅವರು ಮುನ್ನಡೆಯಬಲ್ಲರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೈಜ ದುರ್ಬಲ ಬುಡಕಟ್ಟುಗಳ ಕಲ್ಯಾಣಕ್ಕಾಗಿ ಆಂದೋಲನದ ಮಾದರಿಯಲ್ಲಿ ಈ ಕಾರ್ಯನಿರ್ವಹಿಸಬೇಕು ಎಂದು ರಾಷ್ಟಪತಿ ದ್ರೌಪದಿ ಮುರ್ಮು ಸಲಹೆ ನೀಡಿದ್ದಾರೆ.

ರಾಜಭವನದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಸೋಮವಾರ ಸಂಜೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಆಯೋಜಿಸಿದ್ದ ರಾಜ್ಯದ ವಿವಿಧ ಜಿಲ್ಲೆಗಳ ನೈಜ ಬುಡಕಟ್ಟು ಸಮುದಾಯಗಳ ಸದಸ್ಯರೊಂದಿಗೆ ಸಂವಾದ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಕರ್ನಾಟಕದಲ್ಲಿ 2011ರ ಜನಗಣತಿಯ ಪ್ರಕಾರ ಸುಮಾರು 43 ಲಕ್ಷ ಪರಿಶಿಷ್ಟ ವರ್ಗದ ಜನಸಂಖ್ಯೆಯಿದೆ. ಇದರಲ್ಲಿ ನೈಜ ದುರ್ಬಲ ಬುಡಕಟ್ಟುಗಳೆಂದು ಗುರುತಿಸಲಾಗಿರುವ ಜೇನುಕುರುಬರು ಹಾಗೂ ಕೊರಗ ಸಮುದಾಯಗಳ ಜನಸಂಖ್ಯೆ ಸುಮಾರು 50 ಸಾವಿರದಷ್ಟಿದೆ. ರಾಜ್ಯದ ನೈಜ ದುರ್ಬಲ ಬುಡಕಟ್ಟು ಸಮುದಾಯಗಳಲ್ಲಿಯೂ ಡಾಕ್ಟರೇಟ್ ಪದವಿ ಪಡೆದ ಮಹಿಳೆ, ಶುಶ್ರೂಷಕಿ (ಸ್ಟಾಫ್ ನರ್ಸ್), ಅಂಗನವಾಡಿ ಕಾರ್ಯಕರ್ತೆ, ಪಿಹೆಚ್‍ಡಿ ವ್ಯಾಸಂಗ ಮಾಡುತ್ತಿರುವ ಖಾಸಗಿ ಮಹಿಳಾ ನೌಕರರು ಇರುವುದು ಕಂಡು ಬಹಳ ಸಂತಸವಾಗಿದೆ ಎಂದಿದ್ದಾರೆ.

ಭಾರತ ದೇಶದಲ್ಲಿ ನೈಜ ದುರ್ಬಲ ಬುಡಕಟ್ಟು ಸಮುದಾಯಗಳ ಜನಸಂಖ್ಯೆ ಸುಮಾರು 28 ಲಕ್ಷದಷ್ಟಿದೆ. 75 ವಿವಿಧ ಬುಡಕಟ್ಟುಗಳನ್ನು ನೈಜ ದುರ್ಬಲ ಬುಡಕಟ್ಟುಗಳೆಂದು ಪಟ್ಟಿ ಮಾಡಲಾಗಿದೆ. ಹಿಂದುಳಿದ ಅರಣ್ಯವಾಸಿ ಸಮುದಾಯಗಳನ್ನು ಗುರುತಿಸಿ ವಸತಿ, ಕೃಷಿಭೂಮಿ ಕಲ್ಪಿಸಿ ಮುಖ್ಯವಾಹಿನಿಗೆ ತರುವುದು ಸ್ಥಳೀಯ ಸರ್ಕಾರಗಳ ಜವಾಬ್ದಾರಿಯಾಗಿದೆ. ಶಾಲೆ, ರಸ್ತೆ, ಆರೋಗ್ಯದ ಸಮಸ್ಯೆಗಳು ಕರ್ನಾಟಕದಲ್ಲಿ ಮಾತ್ರವಲ್ಲ, ದೇಶದೆಲ್ಲೆಡೆ ಸಾಮಾನ್ಯವಾಗಿವೆ. ಅರಣ್ಯವಾಸಿ ಬುಡಕಟ್ಟುಗಳಲ್ಲಿನ ಕ್ಷಯರೋಗ ಹಾಗೂ ಇತರೆ ಆರೋಗ್ಯ ಸಮಸ್ಯೆಗಳನ್ನು ಸಂಪೂರ್ಣವಾಗಿ ಹೋಗಲಾಡಿಸಲು ಮಧ್ಯಪ್ರದೇಶ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಕಾರ್ಯಕ್ರಮವನ್ನು ಪ್ರಸ್ತಾಪಿಸಿದ ರಾಷ್ಟ್ರಪತಿಯವರು ದುರ್ಬಲ ಬುಡಕಟ್ಟುಗಳ ಜನಸಂಖ್ಯೆ ಋಣಾತ್ಮಕವಾಗುತ್ತಿರುವುದನ್ನು ತಡೆಯಲು ಇಂತಹ ಯೋಜನೆಗಳನ್ನು ಹಾಕಿಕೊಳ್ಳಬೇಕು ಎಂದು ಹೇಳಿದ್ದಾರೆ.

ನೈಜ ದುರ್ಬಲ ಬುಡಕಟ್ಟುಗಳ ವಿಕಾಸಕ್ಕಾಗಿ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಪಿವಿಟಿಜಿ ಅಭಿವೃದ್ಧಿ ಮಿಷನ್ ಅಡಿ 15 ಸಾವಿರ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ರಾಜ್ಯದಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಹಣ ಬಂದಿರುತ್ತದೆ ಮನೆ, ಶಾಲೆ, ರಸ್ತೆ, ವಿದ್ಯುತ್ ದೀಪ, ನೀರು ಮೊದಲಾದ ಸೌಕರ್ಯಗಳನ್ನು ಒದಗಿಸಲು ಸರ್ಕಾರಗಳು ಆಂದೋಲನದ ರೀತಿ ಕಾರ್ಯೋನ್ಮುಖವಾಗಬೇಕು. ಸರ್ಕಾರ ಬುಡಕಟ್ಟು ಜನರಿಗಾಗಿ ಒಂದು ಹೆಜ್ಜೆ ಮುಂದೆ ಇರಿಸಿ ದಾರಿ ತೋರಿದರೆ ಅವರು ನಿಧಾನವಾಗಿ ನಡೆಯಲು ಕಲಿತು ಹಂತ ಹಂತವಾಗಿ ಓಡಲು ಕಲಿಯುತ್ತಾರೆ. ಬುಡಕಟ್ಟು ಜನರು ತಮ್ಮ ಆತ್ಮಗೌರವ ಕಾಪಾಡಿಕೊಳ್ಳಲು ಸಮಸ್ಯೆಗಳನ್ನು ಸಮರ್ಥವಾಗಿ ಅಭಿವ್ಯಕ್ತಿಗೊಳಿಸುವುದನ್ನು ರೂಢಿಸಿಕೊಳ್ಳಬೇಕು ಎಂದಿದ್ದಾರೆ.

ಬುಡಕಟ್ಟು ಜನ ಶಿಕ್ಷಣಕ್ಕೆ ಒತ್ತು ನೀಡಲಿ, ಎಸ್‍ಎಸ್‍ಎಲ್‍ಸಿ ಓದಿದವರನ್ನು ಗುರುತಿಸಿ ಅವರಲ್ಲಿ ಇರುವ ಕರಕುಶಲ ಕಲೆ, ಜೀವನ ಕೌಶಲ್ಯಗಳನ್ನು ಪ್ರೋತ್ಸಾಹಿಸಿ ಅವರ ಉತ್ಪನ್ನಗಳಿಗೆ ಮೌಲ್ಯವರ್ಧನೆ ಕಲ್ಪಿಸಿದರೆ ಅವರು ಸಮಾಜದ ಮುಖ್ಯವಾಹಿನಿಯೊಂದಿಗೆ ಸಾಗಬಲ್ಲರು. ರಾಜ್ಯದಲ್ಲಿ ಕೇವಲ 50 ಸಾವಿರದಷ್ಟು ನೈಜ ದುರ್ಬಲ ಬುಡಕಟ್ಟು ಸಮುದಾಯವಿರುವದರಿಂದ ಸರ್ಕಾರಕ್ಕೆ ಇದು ಕಷ್ಟದ ಕಾರ್ಯವಲ್ಲ ಎಂದು ಹೇಳಿದ್ದಾರೆ.

ರಾಜ್ಯದ ಸಮಾಜ ಕಲ್ಯಾಣ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳ ಆಶ್ರಮ ಶಾಲೆಗಳಲ್ಲಿ ನೈಜ ದುರ್ಬಲರಿಗಾಗಿ ವಿಶೇಷ ಸ್ಥಾನ, ಗಮನ ನೀಡಿ ಶಿಕ್ಷಣಕ್ಕೆ ಪ್ರೋತ್ಸಾಹಿಸಬೇಕು. ತಾವು ಚಿಕ್ಕವರಿದ್ದಾಗ ತಮ್ಮ ತಂದೆಗೆ ಇಂತಹ ಯಾವ ಸೌಕರ್ಯಗಳು ಇಲ್ಲದಿದ್ದರೂ ತಮಗೆ ಶಿಕ್ಷಣ ಕೊಡಿಸಿದ್ದನ್ನು ರಾಷ್ಟ್ರಪತಿಯವರು ಹೆಮ್ಮೆಯಿಂದ ಸ್ಮರಿಸಿದ್ದಾರೆ. ನೈಜ ದುರ್ಬಲ ಬುಡಕಟ್ಟುಗಳ ಜನ ತಮ್ಮೊಳಗಿನ ಸಾಮಥ್ರ್ಯ ಒರೆಗೆ ಹಚ್ಚಿಕೊಳ್ಳಬೇಕು. ನೆರೆಹೊರೆಯವರನ್ನು ನೋಡಿ ಶಿಕ್ಷಿತರಾಗಿ ಮುಂದೆ ಬರಬೇಕು ಎಂದು ಸ್ಫೂರ್ತಿದಾಯಕ ಮಾತುಗಳನ್ನಾಡಿದರು.

ಬುಡಕಟ್ಟು ಜನರ ಬಳಿಯೇ ಬಂದು ಆಪ್ತವಾಗಿ ಬೆರೆತ ರಾಷ್ಟ್ರಪತಿಗಳು

ಸಂವಾದದ ಪ್ರಾರಂಭದಲ್ಲಿ ಸಭಾಂಗಣದಲ್ಲಿ ನೆರೆದಿದ್ದ ನೈಜ ದುರ್ಬಲ ಬುಡಕಟ್ಟು ಜನರ ಜೀವನ ಮಟ್ಟ ಅರಿಯಲು ಪ್ರಯತ್ನಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಬುಡಕಟ್ಟು ಜನ ಮುಕ್ತವಾಗಿ ಮಾತನಾಡಲು ಹಿಂಜರಿದಾಗ ರಾಷ್ಟ್ರಪತಿಗಳು ಖುದ್ದು ತಾವೇ ಜನರ ಆಸನಗಳ ಬಳಿ ತೆರಳಿ ಒಬ್ಬೊಬ್ಬರನ್ನು ಪ್ರತ್ಯೇಕವಾಗಿ ಆಪ್ತವಾಗಿ ಮಾತನಾಡಿಸಿದರು. ಅವರಿಗೆ ಮನೆ ಇದೆಯೇ, ಸರ್ಕಾರ ಮನೆ ಕಟ್ಟಿಸಿಕೊಟ್ಟಿದೆಯೇ, ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆಯೇ, ಅರಣ್ಯಭೂಮಿಯಲ್ಲಿ ವಾಸವಾಗಿರುವವರು ಯಾರಿದ್ದೀರಿ ಎಂಬ ಪ್ರಶ್ನೆಗಳನ್ನು ಹಾಕಿ ಕೊರಗ ಮತ್ತು ಜೇನುಕುರುಬ ಬುಡಕಟ್ಟು ಜನರಿಂದ ನೇರ ಉತ್ತರ ಪಡೆದರು.

ಸ್ಥಳೀಯ ಭಾಷೆಯಲ್ಲಿಯೇ ಮಾತನಾಡಲು ಪ್ರೋತ್ಸಾಹ

ಜೇನುಕುರುಬ ಸಮುದಾಯದ ಪರವಾಗಿ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಯಡವನಾಡು ಹಾಡಿಯ ಚಂದ್ರು ಹಿಂದಿಯಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಿದ್ದ ವೇಳೆಯಲ್ಲಿ ಮಧ್ಯೆ ಪ್ರವೇಶಿಸಿದ ರಾಷ್ಟ್ರಪತಿಯವರು, ಸ್ಥಳೀಯವಾಗಿ ನಿಮ್ಮ ಭಾಷೆಯಲ್ಲಿಯೇ ಮಾತನಾಡಿ ಎಂದರು.

ಕೊರಗ ಸಮುದಾಯದ ಮೊಟ್ಟಮೊದಲ ಡಾಕ್ಟರೇಟ್ ಪದವೀಧರೆ, ಪ್ರಾಧ್ಯಾಪಕಿ ಉಡುಪಿ ಜಿಲ್ಲೆ ಸಾಲಿಗ್ರಾಮದ ಡಾ.ಸವಿತಾ ಮಾತನಾಡಿ, ಕೊರಗ ಸಮುದಾಯ ಅಪೌಷ್ಟಿಕತೆ, ಆರೋಗ್ಯ ಸಮಸ್ಯೆಗಳಿಂದ ಜನಸಂಖ್ಯೆ ಕ್ಷೀಣಿಸುತ್ತಿದೆ. ಈ ಸಂಶೋಧನೆ ಮತ್ತು ಪರಿಹಾರ ಕಾರ್ಯಗಳು ನಡೆಯಬೇಕು ಎಂದರು.

ಇದೇ ವೇಳೆ, ಬುಡಕಟ್ಟು ಸಮುದಾಯಗಳ ಚಂದ್ರು, ರತ್ನಾ, ಸುಂದರ, ಬಾಬು ಮತ್ತು ಅಯ್ಯಪ್ಪ ಅವರು ರಾಷ್ಟ್ರಪತಿ ಹಾಗೂ ರಾಜ್ಯಪಾಲರನ್ನು ಸನ್ಮಾನಿಸಿ, ನೆನಪಿನ ಕಾಣಿಕೆಗಳನ್ನು ನೀಡಿದರು.

ರಾಷ್ಟ್ರಪತಿ ಭವನದಿಂದ ಬುಡಕಟ್ಟು ಜನರಿಗೆ ಉಡುಗೊರೆ

ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೊರಗ ಹಾಗೂ ಜೇನುಕುರುಬ ಬುಡಕಟ್ಟುಗಳ ಜನರಿಗೆ ರಾಷ್ಟ್ರಪತಿ ಭವನದಿಂದ ತಂದಿದ್ದ ಉಡುಗೊರೆಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ವಿತರಿಸಿದರು. ಅಲ್ಲದೇ ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಯುವಸಬಲೀಕರಣ ಸಚಿವರಾದ ಬಿ.ನಾಗೇಂದ್ರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದಲ್ಲಿ ನೈಜ ಬುಡಕಟ್ಟು ಜನರ ಕಲ್ಯಾಣಕ್ಕಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳನ್ನು ವಿವರಿಸಿದರು.

ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಅವರ ಸಮ್ಮುಖದಲ್ಲಿ ನಡೆದ ಬುಡಕಟ್ಟು ಸಮುದಾಯಗಳೊಂದಿಗಿನ ಸಂವಾದದಲ್ಲಿ ಗುಂಡ್ಲುಪೇಟೆಯ ದೇಶಿಪುರ ಕಾಲೊನಿಯ ಸಿದ್ದಮ್ಮ, ಪುಟ್ಟಮ್ಮ, ಮದ್ದೂರು ಕಾಲೊನಿಯ ಗೋವಿಂದ, ಎಚ್.ಡಿ.ಕೋಟೆಯ ಬಸಮ್ಮ, ರಾಜೇಶ್, ಅಯ್ಯಪ್ಪ, ಭೈರಾ, ಸಿ. ಭಾಸ್ಕರ, ಪುಟ್ಟಬಸವಯ್ಯ, ಹುಣಸೂರಿನ ಜೆ.ಪಿ. ಪಾರ್ವತಿ, ಸುಮಾ, ರಾಜಪ್ಪ, ಸಚಿನ್, ಪಿರಿಯಾಪಟ್ಟಣದ ಜಯಮ್ಮ, ಗೌರಿ, ಲಕ್ಷ್ಮೀ, ಜಾನಕಮ್ಮ, ಬಸವಣ್ಣ, ಬಸಪ್ಪ, ಸರಗೂರಿನ ವಿಜಯ್, ಸೋಮವಾರಪೇಟೆಯ ಜೆ.ಕೆ. ಮುತ್ತಮ್ಮ, ಬಿ.ಕೆ. ಧರ್ಮಪ್ಪ, ಉಡುಪಿ ಜಿಲ್ಲೆಯ ನಳಿನಿ, ಡಾ. ಸಬಿತಾ, ಸುಶೀಲಾ, ಪ್ರಕೃತಿ, ಶಕೀಲಾ, ಸುನಂದಾ, ಕುಡ್ವಾ, ಬಾಬು, ರಮೇಶ್, ಕೊಗ್ಗ, ಅಕ್ಷಯ್, ಕುಮಾರ್, ಸಂಜೀವ ಕೊರಗ, ಕೆ.ಪುತ್ರಯ, ದಕ್ಷಿಣ ಕನ್ನಡ ಜಿಲ್ಲೆಯ ರತ್ನ, ಚಂದ್ರವತಿ, ಶಶಿಕಲಾ, ರಾಧಾ, ಎಂ.ಸುಂದರ್, ಬಾಬು, ಮಥಾಡಿ, ಶ್ಯಾಮ್ ಸೇರಿದಂತೆ ಮೈಸೂರು, ಚಾಮರಾಜನಗರ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಂದ ಆಗಮಿಸಿದ್ದ ಜೇನುಕುರುಬ ಹಾಗೂ ಕೊರಗ ಬುಡಕಟ್ಟು ಸಮುದಾಯಗಳ 50 ಜನ ಭಾಗವಹಿಸಿ ತಮ್ಮ ಸಾಂಸ್ಕೃತಿಕ, ಸಾಮಾಜಿಕ ಅಸ್ಮಿತೆಯ ವಿಶಿಷ್ಟತೆಗಳನ್ನು ಸಾರಿದರು.

ಸಮಾಜ ಕಲ್ಯಾಣ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳ ಸರ್ಕಾರದ ಪ್ರಧಾನ ಕಾರ್ಯದರ್ಶಿ ಪಿ.ಮಣಿವಣ್ಣನ್,ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕ ಪಿ.ಎಸ್.ಕಾಂತರಾಜು ಮತ್ತಿತರ ಗಣ್ಯರು ಇದ್ದರು.

Join Whatsapp
Exit mobile version