ರಾಜ್ಯ ವಿಧಾನಸಭಾ ಚುನಾವಣೆಗೆ ತಯಾರಿ: ನಾಳೆಯಿಂದ ಎರಡು ದಿನ ಕಾಂಗ್ರೆಸ್ ‘ನವಸಂಕಲ್ಪ ಶಿಬಿರ’

Prasthutha|

ಬೆಂಗಳೂರು: ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಕಾಂಗ್ರೆಸ್ ಎರಡು ದಿನಗಳ ನವಸಂಕಲ್ಪ ಶಿಬಿರವನ್ನು ಆಯೋಜಿಸಿದೆ.

- Advertisement -

ಬೆಂಗಳೂರಿನ ಸಾದಹಳ್ಳಿ ಗೇಟ್ ಬಳಿ ಇರುವ ಸ್ವಿಸ್ ಸಿಟಿಯ ಕ್ಲಾರ್ಕ್ಸ್ ಎಕ್ಸಾಟಿಕ ದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ನ ಎರಡು ದಿನಗಳ ನವಸಂಕಲ್ಪ ಶಿಬಿರಕ್ಕೆ ಗುರುವಾರ ಬೆಳಗ್ಗೆ 10 ಗಂಟೆಗೆ ಚಾಲನೆ ದೊರೆಯಲಿದೆ.

ಈ ಶಿಬಿರದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್, ವಿಧಾನಸಭಾ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ರಾಜ್ಯಸಭಾ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಬಿ.ಕೆ ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷರುಗಳು, ಎಐಸಿಸಿ ಪದಾಧಿಕಾರಿಗಳು, ಪಕ್ಷದ ಹಿರಿಯ ನಾಯಕರುಗಳು, ಕೆಪಿಸಿಸಿ ಪದಾಧಿಕಾರಿಗಳು, ಮುಂಚೂಣಿ ಘಟಕದ ಅಧ್ಯಕ್ಷರುಗಳು ಭಾಗವಹಿಸಲಿದ್ದಾರೆ.

- Advertisement -

ಚಿಂತನ ಶಿಬಿರದ ಹಿನ್ನೆಲೆಯಲ್ಲಿ ರಚಿಸಲಾಗಿರುವ ಮಾಜಿ ಸಚಿವ ಕೃಷ್ಣಬೈರೇಗೌಡ ನೇತೃತ್ವದ ಯುವ ಸಮುದಾಯ, ಮಹಿಳೆಯರು, ಶಿಕ್ಷಣ ಹಾಗೂ ಉದ್ಯೋಗ ಸಮಿತಿಯ ಪದಾಧಿಕಾರಿಗಳ ಜತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನಲ್ಲಿ ಬುಧವಾರ ಸಭೆ ನಡೆಸಿದರು.

ವಿಧಾನ ಪರಿಷತ್ ವಿರೋಧ ಪಕ್ಷದ ಉಪನಾಯಕ ಗೋವಿಂದರಾಜು, ಮುಖ್ಯ ಸಚೇತಕ ಪ್ರಕಾಶ್ ರಾಥೋಡ್, ಮಾಜಿ ಸಚಿವ, ಶಾಸಕ ಪ್ರಿಯಾಂಕ್ ಖರ್ಗೆ, ಶಾಸಕರಾದ ರಿಜ್ವಾನ್ ಅರ್ಶದ್, ಶರತ್ ಬಚ್ಚೇಗೌಡ, ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಮತ್ತಿತರರು ಭಾಗವಹಿಸಿದ್ದರು.

Join Whatsapp