Home ಟಾಪ್ ಸುದ್ದಿಗಳು ಹೆರಿಗೆ ನೋವಿಂದ ನರಳುತ್ತಿದ್ದ ಗರ್ಭಿಣಿಯನ್ನು ಹೆಗಲ ಮೇಲೆ ಹೊತ್ತು 20 ಕಿ.ಮೀ. ನಡೆದ ಗ್ರಾಮಸ್ಥರು

ಹೆರಿಗೆ ನೋವಿಂದ ನರಳುತ್ತಿದ್ದ ಗರ್ಭಿಣಿಯನ್ನು ಹೆಗಲ ಮೇಲೆ ಹೊತ್ತು 20 ಕಿ.ಮೀ. ನಡೆದ ಗ್ರಾಮಸ್ಥರು

 ಹೈದರಾಬಾದ್: ಕುಗ್ರಾಮವೊಂದರ ಬುಡಕಟ್ಟು ಸಮುದಾಯದ ತುಂಬು ಗರ್ಭಿಣಿಯೊಬ್ಬರನ್ನು ಡೋಲಿಯಲ್ಲಿ ಮಲಗಿಸಿಕೊಂಡು, 20 ಕಿ.ಮೀ. ಹೆಗಲ ಮೇಲೆ ಹೊತ್ತೊಯ್ದಿರುವ ಹೃದಯ ವಿದ್ರಾವಕ ಘಟನೆಯೊಂದು ತೆಲಂಗಾಣದ ಭದ್ರಾದ್ರಿ-ಕೊಥಗುಡೆಂ ಜಿಲ್ಲೆಯಲ್ಲಿ ನಡೆದಿದೆ.

ಆ ಊರಿಗೆ ರಸ್ತೆ ವ್ಯವಸ್ಥೆ ಇಲ್ಲದ ಕಾರಣ ಹೆರಿಗೆಗೆ ಆಸ್ಪತ್ರೆಗೆ ಹೋಗಲು ಪರದಾಡುತ್ತಿದ್ದ ಗರ್ಭಿಣಿಯನ್ನು ಆ ಊರಿನ ಗ್ರಾಮಸ್ಥರು ಡೋಲಿಯಲ್ಲಿ ಮಲಗಿಸಿಕೊಂಡು, ಬೆಟ್ಟವನ್ನು ಹತ್ತಿ ಕಾಡಿನಲ್ಲಿ ನಡೆದುಕೊಂಡು ಆಸ್ಪತ್ರೆ ತಲುಪಿಸಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮೂಲ ಸೌಕರ್ಯಗಳಿಲ್ಲದ ಹಳ್ಳಿಯಲ್ಲಿ ವೈದ್ಯಕೀಯ ಸೌಲಭ್ಯದ ಕೊರತೆಯಿಂದಾಗಿ ಈ ರೀತಿ ಜನರು ದಿನವೂ ಪರದಾಡುವಂತಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ಘಟನೆಯ ವಿಡಿಯೋದಲ್ಲಿ ಗ್ರಾಮಸ್ಥರು ತಮ್ಮ ಹೆಗಲ ಮೇಲೆ ‘ಡೋಲಿ’ ಯಲ್ಲಿ ಗರ್ಭಿಣಿ ಮಹಿಳೆಯನ್ನು ಹೊತ್ತು ಹೋಗಿದ್ದಾರೆ. ಸುರಿಯುತ್ತಿರುವ ಮಳೆಯಲ್ಲೇ ಆಕೆಯನ್ನು ಹೆಗಲಲ್ಲಿ ಎತ್ತಿಕೊಂಡು ಹೋಗುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಗ್ರಾಮಸ್ಥರು ತಮ್ಮ ಗ್ರಾಮದಿಂದ ಸುಮಾರು 20 ಕಿಮೀ ದೂರದಲ್ಲಿರುವ ಸತ್ಯನಾರಾಯಣಪುರಂ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಡೋಲಿಯಲ್ಲಿ ಆ ಮಹಿಳೆಯನ್ನು ಹೊತ್ತುಕೊಂಡು ಮಳೆನೀರು ತುಂಬಿದ ಪ್ರದೇಶಗಳಲ್ಲಿ ಸಂಚರಿಸುವುದನ್ನು ಸಹ ಕಾಣಬಹುದು.

ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ತೆಲಂಗಾಣ ಜಿಲ್ಲೆಯ ಬೋಧನಿಲ್ಲಿ ಗ್ರಾಮ ಪಂಚಾಯತ್‌ನ ಕೊರ್ಕಟ್‌ಪಾಡು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, 22 ವರ್ಷದ ಮರಕ್ಕಮ್ ಕೋಸಿ ಎಂಬ ಗರ್ಭಿಣಿ ಹೆರಿಗೆ ನೋವಿನಿಂದ ನರಳುತ್ತಿದ್ದರು. ಆಗ ಆಕೆಯ ನೆರವಿಗೆ ಬಂದ ಗ್ರಾಮಸ್ಥರು ಎರಡು ಬಿದಿರಿನ ತುಂಡಿಗೆ ಬಟ್ಟೆಯನ್ನು ಕಟ್ಟಿ ಡೋಲಿ ಮಾಡಿಕೊಂಡು, ಅದರಲ್ಲಿ ಆಕೆಯನ್ನು ಮಲಗಿಸಿಕೊಂಡು ಆಸ್ಪತ್ರೆಗೆ ನಡೆದುಕೊಂಡು ಹೋಗಿದ್ದಾರೆ.

ಆ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ಕೆಲವೇ ಗಂಟೆಗಳಲ್ಲಿ ಆಕೆಗೆ ಹೆರಿಗೆಯಾಗಿದೆ. ರಕ್ತದೊತ್ತಡ ಹೆಚ್ಚಾಗಿದ್ದರಿಂದ ಸಿಸೇರಿಯನ್ ಮೂಲಕ ಆಕೆಗೆ ಹೆರಿಗೆ ಮಾಡಿಸಲಾಗಿದ್ದು, 2.6 ಕೆಜಿ ತೂಕದ ಆರೋಗ್ಯವಂತ ಗಂಡು ಮಗುವಿಗೆ ಆಕೆ ಜನ್ಮ ನೀಡಿದ್ದಾರೆ.

Join Whatsapp
Exit mobile version