Home ಕರಾವಳಿ ಶಿರವಸ್ತ್ರ ನಿಷೇಧದ ಹಿಂದೆ ಮುಸ್ಲಿಮ್ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ಹೊರಗಿಡುವ ಷಡ್ಯಂತರ: ಕರಾವಳಿ ಮಹಿಳಾ ಹಕ್ಕುಗಳ...

ಶಿರವಸ್ತ್ರ ನಿಷೇಧದ ಹಿಂದೆ ಮುಸ್ಲಿಮ್ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ಹೊರಗಿಡುವ ಷಡ್ಯಂತರ: ಕರಾವಳಿ ಮಹಿಳಾ ಹಕ್ಕುಗಳ ವೇದಿಕೆ

►ಮಧ್ಯಂತರ ಆದೇಶಕ್ಕೆ ಕರಾವಳಿ ಮಹಿಳಾ ವೇದಿಕೆ ಆಕ್ಷೇಪ

ಮಂಗಳೂರು: ಹಿಜಾಬ್ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶಕ್ಕೆ ಕರಾವಳಿ ಮಹಿಳಾ ಹಕ್ಕುಗಳ ವೇದಿಕೆ ಆಕ್ಷೇಪ  ವ್ಯಕ್ತಪಡಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯಾಧ್ಯಕ್ಷೆ ಶಾಹಿದಾ ತಸ್ನೀಂ, ಹೈಕೋರ್ಟ್ ಮಧ್ಯಂತರ ಆದೇಶವನ್ನು ಸರ್ಕಾರ ದುರುಪಯೋಗ ಮಾಡಿದೆ.  ಕೆಲ ಶಾಲಾ ಕಾಲೇಜುಗಳ ಅಧ್ಯಾಪಕರು ಹಾಗೂ ಶಿಕ್ಷಕರು  ಸಾರ್ವಜನಿಕ ಸ್ಥಳಗಳಲ್ಲೇ ಮುಸ್ಲಿಂ ವಿದ್ಯಾರ್ಥಿನಿಯರ ಹಿಜಾಬ್ ಬಿಚ್ಚಿಸಿ ದೌರ್ಜನ್ಯವೆಸಗಿದ್ದಾರೆ. ಪತ್ರಕರ್ತನೊಬ್ಬ ವಿದ್ಯಾರ್ಥಿನಿಯನ್ನು ಬೆನ್ನಟ್ಟಿಕೊಂಡು ಹೋಗಿ ವಿಡಿಯೋ ಮಾಡಿದ್ದು ಖಂಡನೀಯ ಎಂದರು.

ವಿದ್ಯಾರ್ಥಿನಿಯರ ಮೇಲೆ ದಬ್ಬಾಳಿಕೆ ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಹಿಜಾಬ್ ಪ್ರಕರಣ ಮಹಿಳೆಯರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವ ಹುನ್ನಾರ ಎಂದು ಅವರು ಆರೋಪಿಸಿದರು.

ಹೈಕೋರ್ಟ್ನ ಮಧ್ಯಂತರ ಅದೇಶವನ್ನು ದುರ್ಬಳಕೆ ಮಾಡಿಕೊಂಡು ಮುಸ್ಲಿಮ್ ವಿದ್ಯಾರ್ಥಿನಿಯರನ್ನು ಮಾನಸಿಕವಾಗಿ ಹಿಂಸಿಸುತ್ತಿರುವ ಶಾಲಾ ಶಿಕ್ಷಕರು ಶಾಲಾ ಆಡಳಿತ ಮಂಡಳಿಯ ವರ್ತನೆ ಖಂಡನೀಯ. ಹಿಜಾಬ್ ನಿಷೇಧವನ್ನು ಪ್ರಶ್ನಿಸಿದ ಅರ್ಜಿಗಳು ಈಗಾಗಲೇ ಹೈಕೋರ್ಟ್ ನಲ್ಲಿ ವಿಚಾರಣೆಯಲ್ಲಿವೆ. ಈ ನಡುವೆ ಹೈಕೋರ್ಟ್ ಮಧ್ಯಂತರ ಆದೇಶವನ್ನು ನೀಡಿದೆಯಾದರೂ , ಅದು ಪದವಿ ಪೂರ್ವ ಕಾಲೇಜುಗಳಿಗೆ ಸಂಬಂಧಿಸಿದ್ದಾಗಿದೆ ಎಂದು ಸ್ಪಷ್ಟಪಡಿಸಿದೆ. ಆದರೆ ರಾಜ್ಯದ ಹಲವು ಕಡೆ ಪ್ರೌಢ ಶಾಲಾ ಶಿಕ್ಷಕಿಯರು ಮತ್ತು ಆಡಳಿತ ಮಂಡಳಿಯವರು ಇದೇ ಆದೇಶವನ್ನು ಹಿಡಿದುಕೊಂಡು ಪ್ರೌಢ ಶಾಲಾ ಮುಸ್ಲಿಮ್ ವಿದ್ಯಾರ್ಥಿನಿಯರನ್ನು ಮತ್ತು ಶಿಕ್ಷಕಿಯರಿಗೆ ಸಾರ್ವಜನಿಕ ಪ್ರದೇಶದಲ್ಲಿ ಹಿಜಾಬ್ ಮತ್ತು ಬುರ್ಖಾ ಕಳಚಲು ಒತ್ತಾಯಪಡಿಸುತ್ತಿದ್ದಾರೆ.  ಕಾಲೇಜು ಗೇಟ್ ನಲ್ಲಿ ತಡೆದು ಅವರೊಂದಿಗೆ ಅಮಾನವೀಯವಾಗಿ ವರ್ತಿಸಲಾಗುತ್ತಿದೆ  ಎಂದು ಅವರು ಆರೋಪಿಸಿದರು.

 ಶಿರವಸ್ತ್ರ ಧರಿಸಿ ಶಾಲೆಗೆ ಬಂದ ಮಡಿಕೇರಿ ನೆಲ್ಯಹುದಿಕೇರಿಯ ಕರ್ನಾಟಕ ಪಬ್ಲಿಕ್ ಶಾಲೆಯ 32 ವಿದ್ಯಾರ್ಥಿನಿಯರನ್ನು ಆಡಳಿತ ಮಂಡಳಿ ಮನೆಗೆ ವಾಪಸ್ ಕಳುಹಿಸಿದೆ. ಶಿವಮೊಗ್ಗದ ಶಾಲೆಯೊಂದರಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಯರಿಗೆ ಎಸ್ಸೆಸ್ಸೆಲ್ಸಿ ಪೂರ್ವ ತಯಾರಿ ಪರೀಕ್ಷೆಗೆ ಅವಕಾಶ ನಿರಾಕರಿಸಲಾಗಿದ. ಶಿಕಾರಿಪುರದ 90 ಮಂದಿ ವಿದ್ಯಾರ್ಥಿನಿಯರನ್ನು ವಾಪಸ್ ಕಳುಹಿಸಲಾಗಿದೆ. ಮಂಡ್ಯದ ಶಾಲೆಯೊಂದರಲ್ಲಿ ಶಾಲಾ ಶಿಕ್ಷಕಿಯ ಬುರ್ಕಾವನ್ನು ಗೇಟ್ ಹೊರಗಡೆಯೇ ಸಾರ್ವಜನಿಕವಾಗಿಯೇ ಕಳಚುವಂತೆ ಮಾಡಲಾಗಿದೆ. ರಾಜ್ಯದ ವಿವಿಧ ಕಡೆಗಳಲ್ಲಿ ಇಂತಹ ಹಲವಾರು ಘಟನೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಭೀತಿ , ಅಭದ್ರತೆಯ ಕಾರಣದಿಂದಾಗಿ ಹೆಣ್ಮಕ್ಕಳು ತಮ್ಮ ಶಿಕ್ಷಣವನ್ನೇ ಮೊಟಕುಗೊಳಿಸಬಹುದಾದ ಆತಂಕವಿದೆ. ಮಕ್ಕಳ ಶಿಕ್ಷಣದ ಮೂಲಭೂತ ಹಕ್ಕಿಗೆ ತಡೆ ಉಂಟು ಮಾಡುವ ಈ ರೀತಿಯ ಹೊಣೆಗೇಡಿತನದ ಕೃತ್ಯಗಳು ಯಾವುದೇ ಕಾರಣಕ್ಕೂ ಸ್ವೀಕಾರ್ಹವಲ್ಲ , ರಾಜ್ಯದಲ್ಲಿ ಸಂಭವಿಸುತ್ತಿರುವ ಇಂತಹ ಅನಾಗರಿಕ ಕೃತ್ಯಗಳಿಂದ ಇಡೀ ರಾಜ್ಯವೇ ದೇಶದ ಮುಂದೆ ತಲೆತಗ್ಗಿಸಿ ನಿಲ್ಲಬೇಕಾಗಿ ಬಂದಿದೆ ಎಂದು ಅವರು ಹೇಳಿದರು.

ರಾಜ್ಯದ ವಿವಿಧ ಕಡೆಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿರುವಾಗ ಸರಕಾರ ಮತ್ತು ಶಿಕ್ಷಣ ಇಲಾಖೆ ಯಾವುದೇ ಕ್ರಮ ಕೈಗೊಳ್ಳದಿರುವುದು ಇಂತಹ ಘಟನೆಗಳ ಹಿಂದೆ ಅದರ ಪಾತ್ರವಿರುವುದನ್ನು ಸ್ಪಷ್ಟಪಡಿಸುತ್ತದೆ. ಪ್ರೌಢ ಶಾಲಾ ಮುಸ್ಲಿಮ್ ವಿದ್ಯಾರ್ಥಿನಿಯರಿಗೆ ಮಾನಸಿಕವಾಗಿ ಹಿಂಸಿಸಿದ ಶಿಕ್ಷಕರು ಮತ್ತು ಆಡಳಿತ ಮಂಡಳಿಯ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು . ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿದ ಕಾರಣಕ್ಕೆ ಅವರನ್ನು ಶಿಕ್ಷೆಗೆ ಗುರಿಪಡಿಸಬೇಕು. ಇಂತಹ ಘಟನೆಗಳನ್ನು ತಡೆಯಲು ಸರಕಾರವು ಕೂಡಲೇ ಕಾರ್ಯಪ್ರವೃತ್ತವಾಗಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಹೈಕೋರ್ಟ್ ಆದೇಶವನ್ನು ಅರ್ಥೈಸಿಕೊಂಡು , ಶಿಕ್ಷಣ ಕೇಂದ್ರಗಳಲ್ಲಿ ಯಾವುದೇ ಬಿಕ್ಕಟ್ಟು ತಲೆದೋರದಂತೆ ನೋಡಿಕೊಂಡಿರುವ ದ.ಕ.ಜಿಲ್ಲೆಯ ಶಾಲಾ ಅಭಿವೃದ್ಧಿ ಮಂಡಳಿಗಳು ಮತ್ತು ಶಿಕ್ಷಕರಿಗೆ ಅಭಿನಂದನೆಯನ್ನು ಸಲ್ಲಿಸುತ್ತಿದ್ದೇವೆ  ಎಂದು ಅವರು ಹೇಳಿದರು.

ಯಾರ ಮೇಲೆಯೂ ಸ್ಕಾರ್ಫ್ ಬಲವಂತವಾಗಿ ಹೇರಲು ಸಾಧ್ಯವಿಲ್ಲ. ಆದರೆ ಆಯ್ಕೆಯ ಸ್ವಾತಂತ್ರ್ಯ ಎಂಬ ನಿಟ್ಟಿನಲ್ಲಿ ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸಿ ಬರುವುದನ್ನು ತಡೆಯಲು ಸಾಧ್ಯವಿಲ್ಲ. ಇಂದು ಸ್ಕಾರ್ಫ್ ನಿಷೇಧವನ್ನು ಪ್ರಶ್ನಿಸಿಯೇ ವಿದ್ಯಾರ್ಥಿನಿಯರು ಹೈಕೋರ್ಟ್ ಮೆಟ್ಟಿಲೇರಿರುವುದು, ನಾಳೆ ಪದವಿ ಕಾಲೇಜುಗಳು ಮತ್ತೆ ತೆರೆಯಲಿದ್ದು, ಹೆಣ್ಮಕ್ಕಳ ಆಯ್ಕೆಯ ಯಾವುದೇ ಸ್ವಾತಂತ್ರ್ಯವನ್ನು ತಡೆಹಿಡಿಯುವುದು ಸಂವಿಧಾನಬಾಹಿರವಾಗಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ನ ಮಧ್ಯಂತರ ಆದೇಶದ ಬಗ್ಗೆ ನಮಗೆ ಆಕ್ಷೇಪಣೆ ಇದೆ. ಈ ಕಾರಣದಿಂದ ಹೈಕೋರ್ಟ್ ತನ್ನ ಆದೇಶವನ್ನು ಮರುಪರಿಶೀಲಿಸಿ ವಿದ್ಯಾರ್ಥಿಗಳ ಸಂವಿಧಾನದತ್ತ ಹಕ್ಕನ್ನು ಎತ್ತಿಹಿಡಿಯಬೇಕು ಎಂದು ಶಾಹಿದಾ ತಸ್ನೀಮ್ ಆಗ್ರಹಿಸಿದರು.

ಕರಾವಳಿ ಮಹಿಳ ಹಕ್ಕುಗಳ ವೇದಿಕೆಯ ಸಂಚಾಲಕಿ ಆಶೀಕ ಮಂಗಳೂರು, ನ್ಯಾಷನಲ್ ವಿಮೆನ್ಸ್ ಫ್ರಂಟ್ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷೆ ಝುಲೈಕ ಬಜ್ಪೆ, ಮಂಗಳೂರು ಮಹಾನಗರ ಪಾಲಿಕೆ ಸದಸ್ಯೆ ಶಂಶಾದ್ ಅಬೂಬಕ್ಕರ್, ಬಂಟ್ವಾಳ ಪುರಸಭೆ ಸದಸ್ಯೆ ಝೀನತ್ ಬಂಟ್ವಾಳ, ಸಂವಿಧಾನ ಪರ ಮಹಿಳಾ ಒಕ್ಕೂಟ ವಿಟ್ಲ ಇದರ ಸದಸ್ಯೆ ಮಮ್ತಾಝ್ ವಿಟ್ಲ, ಸಜಿಪಮುನ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶಬೀನಾ ನಂದಾವರ, ಕರಾವಳಿ ಮಹಿಳಾ ಹಕ್ಕುಗಳ ವೇದಿಕೆ ಸದಸ್ಯೆ ಅಫ್ರೀನಾ ಬಂಟ್ವಾಳ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Join Whatsapp
Exit mobile version