ಲಖನೌ: ತನ್ನ ಮನೆ ತೆರವುಗೊಳಿಸಿದ ಸಂಬಂಧ ಪ್ರಯಾಗ್‌ರಾಜ್ ಹಿಂಸಾಚಾರ ಪ್ರಕರಣದ ಆರೋಪಿ ಸಾಮಾಜಿಕ ಹೋರಾಟಗಾರ ಜಾವೇದ್ ಮುಹಮ್ಮದ್ ಅವರ ಪತ್ನಿ ಪ್ರಯಾಗ್‌ರಾಜ್ ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ಸಲ್ಲಿಸಿರುವ ಅರ್ಜಿಯನ್ನು ಅಲಾಹಾಬಾದ್ ಹೈಕೋರ್ಟ್ ಇಂದು ಆಲಿಸಲಿದೆ [ಪರ್ವೀನ್ ಫಾತಿಮಾ ಮತ್ತು ಉತ್ತರಪ್ರದೇಶ ಸರ್ಕಾರ ನಡುವಣ ಪ್ರಕರಣ].
ನ್ಯಾಯಮೂರ್ತಿಗಳಾದ ಸುನೀತಾ ಅಗರ್ವಾಲ್ ಮತ್ತು ವಿಕ್ರಮ್ ಡಿ ಚೌಹಾಣ್ ಅವರಿದ್ದ ಪೀಠ ಸೋಮವಾರ ಪ್ರಕರಣವನ್ನು ಮರುದಿನಕ್ಕೆ ಮುಂದೂಡಿತ್ತು.
ಮನೆ ಕೆಡವುವ ಮೊದಲು ತನಗೆ ಯಾವುದೇ ನೋಟಿಸ್ ನೀಡಿಲ್ಲ. ಬದಲಿಗೆ ಗಂಡನ ಹೆಸರಿನಲ್ಲಿ ನೋಟಿಸ್ ಬಂದಿದೆ. ಉತ್ತರ ಪ್ರದೇಶ ನಗರ ಯೋಜನೆ ಮತ್ತು ಅಭಿವೃದ್ಧಿ ಕಾಯಿದೆ ಉಲ್ಲಂಘಿಸಿ ತೆರವು ಕಾರ್ಯಾಚರಣೆ ನಡೆದಿದ್ದು ಸಂವಿಧಾನದ 21 ಮತ್ತು 300 ಎ ವಿಧಿಯಡಿ ಒದಗಿಸಲಾದ ಹಕ್ಕುಗಳಿಂದ ತಾನು ವಂಚಿತಳಾಗಿದ್ದೇನೆ ಎಂದು ಪರ್ವೀನಾ ವಾದಿಸಿದ್ದಾರೆ.
ತನ್ನನ್ನು ಮತ್ತು ಪತಿಯನ್ನು ಬಂಧಿಸಿ ವಶಕ್ಕೆ ಪಡೆದಿದ್ದರಿಂದ ಮನೆಗೆ ಬೀಗ ಹಾಕಿದ್ದ ವೇಳೆ ಜೂನ್ 11 ರಂದು ರಾತ್ರಿ ಸ್ಥಳೀಯ ಅಧಿಕಾರಿಗಳು ಮನೆಯ ಮುಂಭಾಗದ ಗೋಡೆಗೆ ನೋಟಿಸ್ ಅಂಟಿಸಿದ್ದಾರೆ. ತಮ್ಮ ಪತಿ ಮನೆಯ ಮಾಲೀಕರಲ್ಲ. ಹೀಗಾಗಿ ಅವರ ಹೆಸರಿನಲ್ಲಿ ಅಧಿಕಾರಿಗಳು ಮನೆ ತೆರವುಗೊಳಿಸುವ ನೋಟಿಸ್ ನೀಡಲಾಗದು ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಮುಹಮ್ಮದ್ ಅವರಿಗೆ ಮೇ 10ರಂದು ನೋಟಿಸ್ ನೀಡಿರುವುದಾಗಿ ಜೂನ್ 10ರಂದು ನೀಡಲಾದ ನೋಟಿಸ್‌ನಲ್ಲಿ ತಿಳಿಸಲಾಗಿದೆ. ಮೇ 10ರಂದು ನೀಡಲಾಗಿದೆ ಎನ್ನಲಾದ ನೋಟಿಸ್‌ನಲ್ಲಿ ಮೇ 24ರಂದು ವಿಚಾರಣೆಯನ್ನು ನಿಗದಿಪಡಿಸಿರುವುದಾಗಿ ತಿಳಿಸಲಾಗಿತ್ತು ಎನ್ನಲಾಗಿದೆ. ಮೇ 24ರಂದು ಯಾರೂ ಬರದ ಕಾರಣ ಮೇ 25ರಂದು ಮನೆಯನ್ನು ಜೂ. 9ರೊಳಗೆ ಮನೆಯ ಮಾಲೀಕ ಮೊಹಮದ್ ಅವರೇ ಕೆಡವುತ್ತಾರೆ ಎಂದು ಭಾವಿಸಿ ಸಕ್ಷಮ ಪ್ರಾಧಿಕಾರವು ಆದೇಶ ಹೊರಡಿಸಿದೆ. ಈ ಆದೇಶವನ್ನು ಮನೆಗೆ ಅಂಟಿಸಲಾಗಿದೆ ಎನ್ನಲಾಗಿದೆ. ಆದರೆ ಈ ಯಾವುದೇ ನೋಟಿಸ್, ಆದೇಶಗಳನ್ನು ಮನೆಯ ಮಾಲೀಕಳಾದ ತನಗಾಗಲಿ, ತನ್ನ ಪತಿಗಾಗಲಿ ನೀಡಿಲ್ಲ ಎಂದು ಫಾತಿಮಾ ಅಲ್ಲಗಳೆದಿದ್ದಾರೆ.
ಮೇ 10, 25ರಂದು ಹೊರಡಿಸಲಾಗಿರುವ ನೋಟಿಸ್, ಅಧಿಕಾರಿಗಳೊಂದಿಗೆ ಕೈ ಜೋಡಿಸಿ ಸಂಚಿನಿಂದ ರೂಪಿಸಿರುವಂತಹವಾಗಿವೆ. ಜೂನ್ 10ರ ನೋಟಿಸ್ ಹಿಂದಿನ ದಿನಾಂಕಗಳನ್ನು ಅಕ್ರಮವಾಗಿ ಹಾಕಿ, ಅಧಿಕಾರಿಗಳೊಂದಿಗೆ ಕೈ ಜೋಡಿಸಿ ರೂಪಿಸಲಾಗಿದೆ ಎಂದು ಅರ್ಜಿಯಲ್ಲಿ ಆಪಾದಿಸಲಾಗಿದೆ.
ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರು ಇಸ್ಲಾಂ ಧರ್ಮದ ವಿರುದ್ಧ ಮಾಡಿದ ಟೀಕೆಗಳನ್ನು ವಿರೋಧಿಸಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮೊಹಮ್ಮದ್ ಅವರ ಬಂಧನವಾಗಿತ್ತು. ಪ್ರತಿಭಟನೆಯಲ್ಲಿ ಭಾಗವಹಿಸಿದವರ ಮನೆಗಳನ್ನು ಧ್ವಂಸಗೊಳಿಸುತ್ತಿರುವುದನ್ನು ಪ್ರಶ್ನಿಸಿ ಜಮೀಯತ್ ಉಲಮಾ-ಎ-ಹಿಂದ್‌ಸಲ್ಲಿಸಿದ್ದ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ. ಜೂನ್ 16ರಂದು ಉತ್ತರ ಪ್ರದೇಶ ಸರ್ಕಾರದ ಪ್ರತಿಕ್ರಿಯೆ ಕೇಳಿದ್ದ ನ್ಯಾಯಾಲಯ ಯಾವುದೇ ಮಧ್ಯಂತರ ಪರಿಹಾರ ನೀಡಲು ನಿರಾಕರಿಸಿತ್ತು. ತೆರವು ಕಾರ್ಯಾಚರಣೆಯನ್ನು ಉತ್ತರ ಪ್ರದೇಶ ಸರ್ಕಾರ ಕಳೆದ ವಾರ ನ್ಯಾಯಾಲಯದಲ್ಲಿ ಸಮರ್ಥಿಸಿಕೊಂಡಿತ್ತು. ಜಾವೇದ್ ಮೊಹಮ್ಮದ್ ಅವರ ಮನೆ ತೆರವಿಗೆ ಸಂಬಂಧಿಸಿದಂತೆಯೂ ಪ್ರತಿಕ್ರಿಯೆ ನೀಡಿದ್ದ ಸರ್ಕಾರ ಪ್ರತಿಭಟನೆಗೂ ಬಹಳ ದಿನ ಮೊದಲೇ ನೋಟಿಸ್ ನೀಡಲಾಗಿತ್ತು ಎಂದಿತ್ತು.
(ಕೃಪೆ: ಬಾರ್ ಆ್ಯಂಡ್ ಬೆಂಚ್)