ಹಾವೇರಿ: ಗ್ರಾಮ ಪಂಚಾಯಿತಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತದಿಂದ ಬೇಸತ್ತು ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ಅರೇಮಲ್ಲಾಪುರದ ಗ್ರಾಮ ಪಂಚಾಯಿತಿ ಸದಸ್ಯ ಪ್ರಣವಾನಂದ ಸ್ವಾಮೀಜಿ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅರೇಮಲ್ಲಾಪುರ ಗ್ರಾಮ ಪಂಚಾಯಿತಿಯಲ್ಲಿ ಜನರ ಸಮಸ್ಯೆಗೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ವಿದ್ಯುತ್ ಅನುಮತಿ, ನೀರಿನ ಅನುಮತಿ, ಖಾತೆಯ ಬದಲಾವಣೆ ಸೇರಿದಂತೆ ಎಲ್ಲ ಸರ್ಕಾರಿ ಸೇವೆಗಳಿಗೆ ಬಡ ಜನರಿಂದ ಲಂಚ ಪಡೆಯುತ್ತಿದ್ದಾರೆ. ಅಂಗವಿಕಲರಿಗೆ, ನಿರ್ಗತಿಕರಿಗೆ, ವಿಧವೆಯರಿಗೆ ಹಾಗೂ ಕುಷ್ಟರೋಗಿಗಳಿಗೆ ಮಾನವೀಯ ದೃಷ್ಟಿಯಿಂದ ಸೇವೆ ನೀಡುತ್ತಿಲ್ಲ’ ಎಂದು ಆರೋಪಿಸಿದರು.
ಉದ್ಯೋಗ ಖಾತ್ರಿ ಸೇರಿದಂತೆ ಹಲವು ಯೋಜನೆಗಳಲ್ಲಿ ಹಣ ದುರುಪಯೋಗವಾಗುತ್ತಿದೆ. ಸರ್ಕಾರದ ಹಣವನ್ನು ಲೂಟಿ ಮಾಡಲಿಕ್ಕಾಗಿಯೇ ಪಿಡಿಒ ಹುದ್ದೆ ಸೃಷ್ಟಿಯಾಗಿದೆ ಎನಿಸುತ್ತಿದೆ. ಪಂಚಾಯಿತಿಯಲ್ಲಿ ನಡೆಯುವ ಅವ್ಯವಹಾರದ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಹೇಳಿದರು.