ಕೃಷ್ಣಮಠವನ್ನು ಸ್ವಾಧೀನಕ್ಕೆ ಪಡೆಯಲು ಸಿದ್ದರಾಮಯ್ಯ ಸರ್ಕಾರ ಮುಂದಾಗಿತ್ತು: ಪ್ರಮೋದ್ ಮಧ್ವರಾಜ್ ಆರೋಪ

Prasthutha|

ಉಡುಪಿ : ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಉಡುಪಿ ಶ್ರೀ ಕೃಷ್ಣ ಮಠವನ್ನು ಧಾರ್ಮಿಕ ದತ್ತಿ ಇಲಾಖೆಗೆ ಸೇರಿಸುವ ಹುನ್ನಾರ ನಡೆಸಿತ್ತು ಕಾಂಗ್ರೆಸ್ ನಾಯಕ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

- Advertisement -

ಕೃಷ್ಣ ಮಠದ ರಾಜಾಂಗಣದಲ್ಲಿ ಅದಮಾರು ಪರ್ಯಾಯ ಸಮಾಪನ ಪ್ರಯುಕ್ತ ನಡೆಯುತ್ತಿರುವ ‘ವಿಶ್ವಾರ್ಪಣಂ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಿಂದಿನ ಸರ್ಕಾರ ಕೃಷ್ಣ ಮಠವನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವ ಯೋಚನೆ ಮಾಡಿತ್ತು. ಈ ಸುದ್ದಿ ತಿಳಿದ ತಕ್ಷಣ ಮುಖ್ಯಮಂತ್ರಿಯವರನ್ನು ಸಂಪರ್ಕಿಸಿ, ‘ಉಡುಪಿ ಕೃಷ್ಣ ಮಠಕ್ಕೆ ಏನಾದರೂ ತೊಂದರೆಯಾದರೆ ಶಾಸಕ ಸ್ಥಾನಕ್ಕೆ ಮೊದಲು ರಾಜೀನಾಮೆ ಕೊಡುವವ ನಾನಾಗಿರುತ್ತೇನೆ’ ಎಂಬುದಾಗಿ ಹೇಳಿ ಈ ಪ್ರಸ್ತಾವನೆಗೆ ಪೂರ್ಣವಿರಾಮ ಹಾಕುವ ಸಣ್ಣ ಸೇವೆ ಮಾಡಿದ್ದೇನೆ. ಈ ಬಗ್ಗೆ ನನಗೆ ತೃಪ್ತಿ ಇದೆ ಎಂದು ಹೇಳಿದರು.

ಅಲ್ಲದೆ ಉಡುಪಿ ಕೃಷ್ಣ -ಮುಖ್ಯಪ್ರಾಣ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ್ದಕ್ಕೆ ಕೆಲವರು ನನ್ನನ್ನು ಶಾಸಕ ಸ್ಥಾನದಿಂದ ಅನೂರ್ಜಿತಗೊಳಿಸುವಂತೆ ಹೈಕೋರ್ಟ್‌ಗೆ ಪಿಐಎಲ್ ಹಾಕಿದ್ದರು. ಇದರಿಂದ ನನಗೇನು ತೊಂದರೆಯಾಗಿಲ್ಲ. ಆದರೆ ಇಂಥ ಮನಸ್ಥಿತಿಯ ಜನರೂ ಜಗತ್ತಿನಲ್ಲಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

- Advertisement -

ಪಲಿಮಾರು ಶ್ರೀಗಳ ಪರ್ಯಾಯದಲ್ಲಿ ಮಧ್ವ ಸರೋವರಕ್ಕೆ ಹಾಗೂ ಸುತ್ತಮುತ್ತಲಿನ ಮಠದ ಬಾವಿಗಳಿಗೆ ಡ್ರೈನೇಜ್ ನೀರು ಬರುತ್ತಿತ್ತು. ಹೀಗಾಗಿ ನಗರಸಭೆಯಿಂದ 45 ಲಕ್ಷ ರೂ. ಅನುದಾನ ಕಲ್ಪಿಸಿ ಒಳಚರಂಡಿ ವ್ಯವಸ್ಥೆ ಸರಿಪಡಿಸಲಾಗಿತ್ತು ಎಂದು ಅವರು ಇದೇ ವೇಳೆ ತಿಳಿಸಿದರು.

ಈ ಸಂದರ್ಭದಲ್ಲಿ ಪರ್ಯಾಯ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ, ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಧರ್ಮಪಾಲನಾಥ ಸ್ವಾಮೀಜಿ ಉಪಸ್ಥಿತರಿದ್ದರು.

Join Whatsapp