ಬೆಂಗಳೂರು: ಕರಾವಳಿಯಲ್ಲಿ ಬಿಜೆಪಿ ಕಾರ್ಯಕರ್ತನ ಚಿತೆ ಉರಿಯುವಾಗ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಿನಿಮಾ ನೋಡಿ ಮಜಾ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.
ಜೋಶಿ ಅವರು ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ” ಚಿತ್ರವನ್ನು ವೀಕ್ಷಿಸುವ ಚಿತ್ರವನ್ನು ಕೆಪಿಸಿಸಿ ಟ್ವೀಟ್ ಮಾಡಿದೆ.
ಪಾವಗಡದಲ್ಲಿ ಬಸ್ ಅಪಘಾತವಾದಾಗ ಸಿಎಂ ಚಾರ್ಲಿ ನೋಡಲು ಹೋಗಿದ್ದರು. ಹುಬ್ಬಳ್ಳಿಯಲ್ಲಿ ಮಳೆ ಅವಾಂತರವಾದಾಗ ಶಾಸಕ ಜಗದೀಶ್ ಶೆಟ್ಟರ್ ಸಿನೆಮಾ ಪ್ರಚಾರಕ್ಕೆ ತೆರಳಿದ್ದರು. ಅವರದೇ ಪಕ್ಷದ ಕಾರ್ಯಕರ್ತನ ಚಿತೆ ಉರಿಯುತ್ತಿರುವಾಗ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಿನೆಮಾ ನೋಡಿಕೊಂಡು ಮೋಜು ಮಾಡುತ್ತಿದ್ದಾರೆ. ಬಿಜೆಪಿಗೆ ಜನತೆ ಮುಖ್ಯವಲ್ಲ ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮೂಲಕ ಕುಟುಕಿದೆ.
ಮತ್ತೊಂದು ಟ್ವೀಟ್ ನಲ್ಲಿ, ಪ್ರವೀಣ್ ಹತ್ಯೆ ಪ್ರಕರಣದಲ್ಲಿ ಪ್ರಾಥಮಿಕ ತನಿಖೆಯನ್ನೂ ನಡೆಸದೆ ಎನ್ ಐಎಗೆ ವಹಿಸಿದ್ದು, ಇವರದ್ದೇ ಸರ್ಕಾರದ ಗೃಹ ಇಲಾಖೆಯ ಮೇಲೆ ನಂಬಿಕೆ ಕಳೆದುಕೊಂಡಿರುವುದಕ್ಕೆ ನಿದರ್ಶನ. ಶೇ.40 ಕಮಿಷನ್ ಪಡೆಯುವ ಸರ್ಕಾರಕ್ಕೆ ಕನಿಷ್ಠ ಶೇ.40 ತನಿಖೆಯನ್ನೂ ಮಾಡಲಾಗದ ಅಸಾಮರ್ಥ್ಯ ಇರುವುದು ನಾಚಿಕೆಗೇಡು ಎಂದು ಕಾಂಗ್ರೆಸ್ ಟೀಕಿಸಿದೆ.