ಬೆಳಗಾವಿ: ಕಾಂಗ್ರೆಸ್ ಕಾಲದಲ್ಲಿ ಕರೆಂಟ್ ಕೊಡುತ್ತಿರಲಿಲ್ಲ, ಇದರಿಂದ ಜನಸಂಖ್ಯೆ ಜಾಸ್ತಿ ಆಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ವಿವಾದಾತ್ಮಕ ಹೇಳಿಕೆ ನೀಡಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಬೆಳಗಾವಿ ಜಿಲ್ಲೆಯ ಸವದತ್ತಿ ಮತಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಜೋಷಿ, ಕಾಂಗ್ರೆಸ್ ಸುಳ್ಳು ಹೇಳುವ ಪಕ್ಷವಾಗಿದೆ, ಸುಳ್ಳು ಹೇಳುವುದೇ ಅವರ ಚಾಳಿ, ಕಾಂಗ್ರೆಸ್ ಕಾಲದಲ್ಲಿ ವಿದ್ಯುತ್ ಸರಿಯಾಗಿ ಕೊಡುತ್ತಿರಲಿಲ್ಲ. ಕರೆಂಟ್ ಕೊಡದ ಕಾರಣ ಜನಸಂಖ್ಯೆ ಕೂಡ ಹೆಚ್ಚಾಗಿದೆ ಎಂದು ಹೇಳಿದ್ದರು.
ಕರ್ನಾಟಕದಲ್ಲಿ ಹೇಗೆ ವಿದ್ಯುತ್ ಉಚಿತ ನೀಡುತ್ತಾರೆ ಎಂದು ಪ್ರಶ್ನಿಸಿದ ಅವರು, ನರೇಂದ್ರ ಮೋದಿ ಬಂದ ಮೇಲೆ ಹಳ್ಳಿಗಳಲ್ಲಿ 24ಗಂಟೆ ಕಾಲ ವಿದ್ಯುತ್ ಪೂರೈಕೆ ಆಗುತ್ತಿದೆ. ಕಾಂಗ್ರೆಸ್ ಕಾಲದಲ್ಲಿ ಕರೆಂಟ್ ಕೊಡುತ್ತಿರಲಿಲ್ಲ ಇದರಿಂದ ಜನಸಂಖ್ಯೆ ಜಾಸ್ತಿ ಆಗಿದೆ ಎಂದು ಲೇವಡಿ ಮಾಡಿದರು.
ಇದಕ್ಕೆ ಕರ್ನಾಟಕ ಕಾಂಗ್ರೆಸ್ ತಿರುಗೇಟು ನೀಡಿದ್ದು, ಕಾಂಗ್ರೆಸ್’ನವರು ಕರೆಂಟ್ ಕಡಿಮೆ ಕೊಡುತ್ತಿದ್ದರಿಂದ ಜನಸಂಖ್ಯೆ ಜಾಸ್ತಿಯಾಯ್ತು ಎಂದು ಪ್ರಹ್ಲಾದ್ ಜೋಷಿ ಹೇಳಿದ್ದಾರೆ. ಜೋಷಿಯವರೇ, ತಾವು ಹುಟ್ಟಿದ್ದು 2014ರ ಮುಂಚೆಯೇ ಅಲ್ಲವೇ? ಹಾಗಾದರೆ ಬಿಜೆಪಿಗರ ಜನನವೂ ಪ್ರಮಾದ ಎಂದು ಪರಿಗಣಿಸೋಣವೇ?
ಕೊನೆಯ ಪ್ರಶ್ನೆ, ತಮಗೆ ಎಷ್ಟು ಮಕ್ಕಳಿದ್ದಾರೇ ? ಎಂದು ಪ್ರಶ್ನಿಸಿದೆ.
ಜೋಷಿ ಹೇಳಿಕೆಗೆ ಹಲವು ನೆಟ್ಟಿಗರು ಕೂಡ ಟೀಕಾಪ್ರಹಾರ ಮಾಡಿದ್ದಾರೆ.