ಫ್ರಾನ್ಸ್ : ಗಾಝಾ ಸಂಘರ್ಷದಲ್ಲಿ ಮಕ್ಕಳು, ಮಹಿಳೆಯರ ಸಾಮೂಹಿಕ ಹತ್ಯೆಗಳಾಗುತ್ತಿದ್ದರೆ ಅದಕ್ಕೆ ಮರುಗಿದ ಅಲ್ಜೀರಿಯದ ಅಂತಾರಾಷ್ಟ್ರೀಯ ಫುಟ್ಬಾಲ್ ತಾರೆ ಯೂಸುಫ್ ಅಟಾಲ್ ಸಾಮಾಜಿಕ ಜಾಲತಾಣಗಳಲ್ಲಿ ಧಾರ್ಮಿಕ ಪೋಸ್ಟ್ ಒಂದನ್ನು ಪ್ರಕಟಿಸಿದ್ದರು. ಅದು ದ್ವೇಷವನ್ನು ಪ್ರಚೋದಿಸುವ ಪೋಸ್ಟ್ ಎಂದು ಅವರಿಗೆ ಎಂಟು ತಿಂಗಳುಗಳ ಜೈಲು ಶಿಕ್ಷೆಯನ್ನು ನ್ಯಾಯಾಲಯ ಘೋಷಿಸಿದೆ.
27 ವರ್ಷ ವಯಸ್ಸಿನ ಯೂಸುಫ್ ಅವರು ಫ್ರಾನ್ಸ್ ನ ನೈಸೆ ತಂಡದಲ್ಲಿ ಲೀಗ್ 1ರ ಆಟಗಾರರಾಗಿದ್ದಾರೆ. ಯಹೂದಿಗಳಿಗೆ ಕರಾಳ ದಿನವನ್ನು ಕಾಣಿಸುವಂತೆ ಕರೆ ನೀಡುವ ವೀಡಿಯೊ ಒಂದನ್ನು ಶೇರ್ ಮಾಡಿದ್ದಕ್ಕಾಗಿ ಅವರಿಗೆ 45 ಸಾವಿರ ಯುರೋ (49 ಸಾವಿರ ಡಾಲರ್) ದಂಡವನ್ನು ಕೂಡಾ ವಿಧಿಸಲಾಗಿದೆ.
ತನ್ನ ದೋಷಿತ್ವದ ಕುರಿತಾಗಿ ನ್ಯಾಯಾಲಯ ನೀಡಿದ ತೀರ್ಪಿನ ವಿವರಗಳನ್ನು ಸ್ವತಹ ಯೂಸುಫ್ ಅವರೇ ಪ್ರಾದೇಶಿಕ ದಿನಪತ್ರಿಕೆಗಳಾದ ನೈಸ್ ಮಾಟಿನ್ ಹಾಗೂ ರಾಷ್ಟ್ರೀಯ ದಿನಪತ್ರಿಕೆ ಲಾ ಮೊಂಡೆಯಲ್ಲಿ ಹಣವನ್ನು ಪಾವತಿಸಿ ಪ್ರಕಟಿಸಬೇಕೆಂದು ನ್ಯಾಯಾಲಯ ಯೂಸುಫ್ ಗೆ ಸೂಚಿಸಿದೆ.
ಗಾಝಾ ಮೇಲೆ ಇಸ್ರೇಲ್ ದಾಳಿಗೆ ಸಂಬಂಧಿಸಿ ಮೊಹಮ್ಮದ್ ಅಲ್ ಹಸನಾತ್ ಎಂಬ ಧಾರ್ಮಿಕ ಬೋಧಕರ ವೀಡಿಯೊವನ್ನು ಅಟಾಲ್ ಅವರು ತನ್ನ 30.20 ಲಕ್ಷ ಫಾಲೋವರ್ಗಳಿರುವ ಇನ್ ಸ್ಟಾಗ್ರಾಂ ಖಾತೆಯಲ್ಲಿ ಐದು ದಿನಗಳ ಕಾಲ ಪ್ರಸಾರ ಮಾಡಿದ್ದರು.
ಗಾಝಾದಲ್ಲಿ ಇಸ್ರೇಲ್ ದಾಳಿಯಿದ ಸಾವನ್ನಪ್ಪಿದ ನೂರಾರು ಫ್ಯಾಲೆಸ್ತೀನಿ ಮಕ್ಕಳ ಬಗ್ಗೆ ಮಾತನಾಡಿದ ಅಲ್ ಹಸನಾತ್, ದೇವರು ಯಹೂದಿಗಳಿಗೆ ಕರಾಳ ದಿನವನ್ನು ಕಳುಹಿಸಿಕೊಡುವಂತೆ ಹಾಗೂ ಇಸ್ರೇಲ್ ವಿರುದ್ಧ ಪ್ರತಿದಾಳಿ ನಡೆಸಲು ಮಾರ್ಗದರ್ಶನ ನೀಡುವಂತೆ ಪ್ರಾರ್ಥಿಸುವುದಾಗಿ ಹೇಳಿದ್ದರು.
ಈ ವೀಡಿಯೋ ವಿವಾದವನ್ನು ಸೃಷ್ಟಿಸುವುದರಿಂದ ಅದನ್ನು ತೆಗೆಯಲು ನೈಸ್ ತಂಡವು ಯೂಸುಫ್ ಗೆ ಎಚ್ಚರಿಕೆ ನೀಡಿದ ಬಳಿಕ ಯೂಸೆಫ್ ಈ ಬಗ್ಗೆ ಕ್ಷಮೆ ಯಾಚಿಸಿದ್ದರು.
ನ್ಯಾಯಾಲಯದ ವಿಚಾರಣೆಯ ಸಂದರ್ಭದಲ್ಲಿಯೂ ಅಟಾಲ್ ಕ್ಷಮೆ ಯಾಚಿಸಿದ್ದು, ತಾನು ಜನತೆಗೆ ಶಾಂತಿಯ ಸಂದೇಶವನ್ನು ಕಳುಹಿಸಲು ಬಯಸಿದ್ದೆ ಹಾಗೂ 35 ಸೆಕೆಂಡ್ ಗಳ ವಿವಾದಿತ ವೀಡಿಯೋವನ್ನು ಪೋಸ್ಟ್ ಮಾಡಿದಾಗ ಅದನ್ನು ಪೂರ್ತಿಯಾಗಿ ವೀಕ್ಷಿಸಿರಲಿಲ್ಲವೆಂದು ಹೇಳಿದ್ದರು.
ಮುಂದಿನ ನೋಟಿಸ್ ನೀಡುವವರೆಗೆ ಅಟಾಲ್ ಅವರನ್ನು ತಂಡದಿಂದ ಅಮಾನತುಗೊಳಿಸಲಾಗುವುದೆಂದು ನೈಸ್ ಫುಟ್ಬಾಲ್ ತಂಡ ಘೋಷಿಸಿದೆ.