ಗರೀಬ್ ನವಾಝ್ ಮಸ್ಜಿದ್ ಪುನರ್ ನಿರ್ಮಾಣ ಮತ್ತು ಧ್ವಂಸದ ಹಿಂದಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ‌ ಪಾಪ್ಯುಲರ್ ಫ್ರಂಟ್ ಆಗ್ರಹ

Prasthutha|

ಉತ್ತರ ಪ್ರದೇಶದ ಬಾರಬಂಕಿ ಜಿಲ್ಲಾಡಳಿತವು ಗರೀಬ್ ನವಾಝ್ ಮಸ್ಜಿದನ್ನು ಧ್ವಂಸಗೊಳಿಸಿರುವುದನ್ನು ಪಾಪ್ಯುಲರ್ ಫ್ರಂಟ್ ಆಫ್‌ ಇಂಡಿಯಾದ ಚೇರ್ಮೆನ್ ಒ.ಎಂ.ಎ.ಸಲಾಂ ಖಂಡಿಸಿದ್ದಾರೆ.

- Advertisement -

ಈ ಕುರಿತು ಹೇಳಿಕೆ ನೀಡಿರುವ ಅವರು ಮುಸ್ಲಿಮರ‌ ಶತಮಾನಗಳ ಹಿಂದಿನ ಆರಾಧನಾಲಯವನ್ನು ಉತ್ತರ ಪ್ರದೇಶದ ಜಿಲ್ಲಾಡಳಿತವು ಸಂಶಯಾಸ್ಪದ ಜಮೀನಿನ ಆಧಾರದಲ್ಲಿ ನೆಲಸಮಗೊಳಿಸಿದ್ದು, ಇದು ಮುಸ್ಲಿಮರಲ್ಲಿ ಭೀತಿಯ ವಾತಾವರಣವನ್ನು ಸೃಷ್ಟಿಸಿದೆ ಎಂದು ತಿಳಿಸಿದ್ದಾರೆ.

ರಾಮ್ ಸ್ನೇಹಿ ಘಾಟ್ ನಲ್ಲಿರುವ ಗರೀಬ್ ನವಾಝ್ ಮಸ್ಜಿದ್ ಉತ್ತರ ಪ್ರದೇಶ ಸುನ್ನಿ ವಕ್ಫ್‌ ಬೋರ್ಡ್ ನಲ್ಲಿ ನೋಂದಾವಣೆಗೊಂಡಿದೆ ಮತ್ತು ಶತಮಾನಕ್ಕೂ ಅಧಿಕ ಸಮಯದಿಂದ ಮುಸ್ಲಿಮರು ಅದನ್ನು ಬಳಕೆ ಮಾಡುತ್ತಾ ಬಂದಿದ್ದಾರೆ ಎಂಬುದಕ್ಕೆ ಎಲ್ಲಾ ದಾಖಲೆಗಳೂ ಇವೆ. ಆದಾಗ್ಯೂ, ಸ್ಥಳೀಯ ಆಡಳಿತವು ಇದೊಂದು ಅಕ್ರಮ ಕಟ್ಟಡ ಎಂದು ಸರಳವಾಗಿ ಹೇಳುತ್ತಿದೆ. ಮಾತ್ರವಲ್ಲ, ಯಾವುದೇ‌ ಒಕ್ಕಲೆಬ್ಬಿಸುವಿಕೆ ಅಥವಾ ಧ್ವಂಸಗೊಳಿಸುವುದರಿಂದ ಅದಕ್ಕೆ ರಕ್ಷಣೆ ನೀಡಬೇಕೆಂಬ ಹೈಕೋರ್ಟ್ ಆದೇಶವಿರುವ ವಾಸ್ತವದ ಹೊರತಾಗಿಯೂ ಅದನ್ನು ನೆಲಸಮಗೊಳಿಸಲಾಗಿದೆ ಎಂದು ಒ.ಎಂ.ಎ ಸಲಾಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಮಸ್ಜಿದ್‌ ಧ್ವಂಸ ಮತ್ತು ಹೈಕೋರ್ಟ್ ಆದೇಶದ ಉಲ್ಲಂಘನೆಯನ್ನು ಪಾಪ್ಯುಲರ್ ಫ್ರಂಟ್ ಖಂಡಿಸುತ್ತದೆ. ಇದು ಯೋಗಿಯ ಆಡಳಿತದಡಿ ನಿರ್ಭೀತಿ ಹೊಂದಿರುವ ಮತ್ತು ಕಾನೂನಿನ ಹಾಗೂ ಜನರ ಹಕ್ಕುಗಳ ಕುರಿತು ಗೌರವ ಹೊಂದಿರದ ಹಿಂದುತ್ವ ಗೂಂಡಾಗಳಂತೆಯೇ ಜಿಲ್ಲಾಡಳಿತವು ನಡೆಸಿದ ಗಂಭೀರ ಉಲ್ಲಂಘನೆಯಾಗಿದೆ. ಹಿಂದುತ್ವ ಶಕ್ತಿಗಳು ಬಾಬರಿ ಮಸ್ಜಿದ್ ವಿರುದ್ಧ ಪ್ರಾರಂಭಿಸಿದ ತಮ್ಮ ಅಭಿಯಾನವನ್ನು ಇದೇ ರೀತಿ ಕೆಳ ನ್ಯಾಯಾಲಯ ಮತ್ತು ಸ್ಥಳೀಯಾಡಳಿಯದಲ್ಲಿ ಕೈಚಳಕ ತೋರಿಸುವ ಮೂಲಕವೇ ಪ್ರಾರಂಭಿಸಿದ್ದವು ಎಂಬುದು ಇಲ್ಲಿ ಸ್ಮರಣಾರ್ಹ. ಮುಸ್ಲಿಮ್ ಸಮುದಾಯ ಮತ್ತು ನಾಗರಿಕ ಸಮಾಜವು ಇಂತಹ ಪ್ರಯತ್ನಗಳನ್ನು ಪ್ರತಿರೋಧಿಸಲು ಮುಂದೆ‌ ಬಾರದೇ ಇದ್ದಲ್ಲಿ ಈ ದೇಶವು ಈ ರೀತಿಯ ಮತ್ತಷ್ಟು ದಾಳಿಗಳಿಗೆ ಸಾಕ್ಷಿಯಾಗುತ್ತಲೇ ಇರಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಮಸ್ಜಿದನ್ನು ಶೀಘ್ರದಲ್ಲಿ ಪುನರ್ ನಿರ್ಮಿಸಬೇಕು ಮತ್ತು ಧ್ವಂಸದ ಹೊಣೆಗಾರರಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪಾಪ್ಯುಲರ್ ಫ್ರಂಟ್ ಆಗ್ರಹಿಸುತ್ತದೆ. ಮಸ್ಜಿದ್ ಪುನರ್ ನಿರ್ಮಾಣಕ್ಕಾಗಿ ಮತ್ತು ತಪ್ಪಿತಸ್ಥ ಅಧಿಕಾರಿಗಳನ್ನು ನ್ಯಾಯದ ಕಟಕಟೆಗೆ ತರುವ ನಿಟ್ಟಿನಲ್ಲಿ ಪಾಪ್ಯುಲರ್ ಫ್ರಂಟ್ ಕಾನೂನು ಹೋರಾಟಕ್ಕೆ ಎಲ್ಲಾ ನೆರವು ಕಲ್ಪಿಸಲಿದೆ‌ ಎಂದು ಒ.ಎಂ.ಎ ಸಲಾಂ ಹೇಳಿದ್ದಾರೆ.

Join Whatsapp