ಕಲ್ಮತ್ ಮಸ್ಜಿದ್ ವಿಚಾರದಲ್ಲಿ ಕೋಮು ಭಾವನೆ ಕೆರಳಿಸಿ ಲಾಭ ಪಡೆಯುತ್ತಿರುವ ಸಂಘಪರಿವಾರ : ಪಾಪ್ಯುಲರ್ ಫ್ರಂಟ್

Prasthutha|

ಉಡುಪಿ ಜಿಲ್ಲೆಯ ಕೊಡವೂರಿನ ಕಲ್ಮತ್ ಮಸ್ಜಿದ್ ವಿಚಾರದಲ್ಲಿ ಕೋಮು ಭಾವನೆ ಕೆರಳಿಸಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿರುವ ಬಿಜೆಪಿ ಹಾಗೂ ಸಂಘಪರಿವಾರದ ನಡೆ ಖಂಡನೀಯ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಉಡುಪಿ ಜಿಲ್ಲಾಧ್ಯಕ್ಷ ನಝೀರ್ ಅಹ್ಮದ್ ಹೇಳಿದ್ದಾರೆ.

- Advertisement -

200 ವರ್ಷಕ್ಕೂ ಅಧಿಕ ಇತಿಹಾಸವಿರುವ ಹಾಗೂ ಸಮರ್ಪಕ ದಾಖಲೆ ಹೊಂದಿರುವ ಮಸ್ಜಿದ್ ಅನ್ನು ಅಕ್ರಮ ಕಟ್ಟಡವೆಂದು ಬಿಂಬಿಸಲಾಗುತ್ತಿದೆ. ಆದರೆ ಈ ಮಸ್ಜಿದ್, ಕಾನೂನುಬದ್ಧವಾಗಿ 1993ರಲ್ಲೇ 67 ಸೆಂಟ್ಸ್ ಜಾಗವನ್ನು ವಕ್ಫ್ ಅಧೀನ ಪಡೆದು ನೋಂದಣಿಗೊಂಡಿರುತ್ತದೆ. ಈ ಮಸೀದಿಯ ಸ್ಥಳಕ್ಕೆ ಸಂಬಂಧಿಸಿ ಜಿಲ್ಲಾಧಿಕಾರಿಗಳ ಪರಿಶೀಲನೆಯ ಬಳಿಕ ಮಾರ್ಚ್ 2020ರಲ್ಲಿ ಗೆಝೆಟ್ ನೋಟಿಫಿಕೇಶ್ ಕೂಡ ಹೊರಡಿಸಲಾಗಿದೆ. ದಾಖಲೆಯ ಪ್ರಕಾರ ಮಸೀದಿ ಹೆಸರಿನಲ್ಲಿ ಆರ್.ಟಿ.ಸಿ ಕೂಡ ಆಗಿರುತ್ತದೆ.

- Advertisement -

ಎಲ್ಲಕ್ಕಿಂತ ಮಿಗಿಲಾಗಿ ಈ ಮಸ್ಜಿದ್ ಗೆ 1908ರಿಂದಲೇ ಸರಕಾರದ ಖಜಾನೆಯಿಂದ ಅನುದಾನ ಬರುತ್ತಿದ್ದು, ಅದು ಈಗಲೂ ಮುಂದುವರಿದಿದೆ. ಈ ಎಲ್ಲಾ ವಾಸ್ತವಾಂಶಗಳು ತಿಳಿದಿದ್ದರೂ ಸಂಘಪರಿವಾರವು ಕಟ್ಟುಕಥೆ ಕಟ್ಟಿ ಜನರಲ್ಲಿ ಗೊಂದಲ ಮೂಡಿಸಿ ಸಾಮರಸ್ಯ ಕೆಡಿಸುವ ಪ್ರಯತ್ನ ನಡೆಸುತ್ತಿದೆ. ಮುಂಜಾಗ್ರತೆಗಾಗಿ ಮಸ್ಜಿದ್ ಜಾಗದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯನ್ನೂ ಪೊಲೀಸರ ಸಮ್ಮುಖದಲ್ಲಿ ಕಿತ್ತುಹಾಕಲಾಗಿದೆ. ಮಸ್ಜಿದ್ ಜಾಗದಲ್ಲಿರುವ ಅತಿಕ್ರಮಣವನ್ನು ತೆರವುಗೊಳಿಸುವ ಬಗ್ಗೆ ಜಿಲ್ಲಾಧಿಕಾರಿಯಿಂದ ಆದೇಶ ಹೊರಡಿಸಲಾಗಿದ್ದರೂ ಅದರ ಬಗ್ಗೆ ಕ್ರಮಕೈಗೊಳ್ಳಲಾಗಿಲ್ಲ. ಮಸ್ಜಿದ್ ಗೆ ಹೋಗುವ ದಾರಿಯಲ್ಲಿರುವ ಗೇಟಿಗೆ ಬಲವಂತವಾಗಿ ಬೀಗ ಜಡಿದು ಅಡಚಣೆ ಉಂಟುಮಾಡಲಾಗಿತ್ತು. ಆದರೆ ಇದೀಗ ಅದರ ಸಮೀಪಲ್ಲೇ ಇದ್ದ ಕಾಲುದಾರಿಗೂ ಗೇಟು ಅಳವಡಿಸಿ ಬೀಗ ಜಡಿದು ಮಸ್ಜಿದ್ ಗೆ ಹೋಗಲು ನಿರ್ಬಂಧಿಸಲಾಗುತ್ತಿದೆ.

ಮಸ್ಜಿದ್ ಗೆ ಸೂಕ್ತ ದಾಖಲೆಗಳಿದ್ದರೂ, ಅತಿಕ್ರಮಣ ತೆರವಿಗೆ ಆದೇಶವಿದ್ದರೂ ಆಡಳಿತ ವ್ಯವಸ್ಥೆ ಸಂಘಪರಿವಾರದ ದುಷ್ಕೃತ್ಯಗಳಿಗೆ ಕಡಿವಾಣ ಹಾಕುತ್ತಿಲ್ಲ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಬಿಜೆಪಿ-ಸಂಘಪರಿವಾರದ ಒತ್ತಡಕ್ಕೆ ಮಣಿಯದೆ ಮಸ್ಜಿದ್ ವಿಚಾರದಲ್ಲಿ ಕಾನೂನಾತ್ಮಕವಾಗಿ ಕ್ರಮಕೈಗೊಳ್ಳಬೇಕು ಮತ್ತು ಈ ಪ್ರದೇಶದಲ್ಲಿ ಶಾಂತಿ ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಸಂಘಪರಿವಾರದ ಎಲ್ಲಾ ಷಡ್ಯಂತ್ರಗಳನ್ನು ವಿಫಲಗೊಳಿಸಬೇಕೆಂದು ನಝೀರ್ ಅಹ್ಮದ್ ಒತ್ತಾಯಿಸಿದ್ದಾರೆ.

Join Whatsapp