Home ಟಾಪ್ ಸುದ್ದಿಗಳು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಪ್ರತಿನಿಧಿ ಸಭೆ: ಶಿವಮೊಗ್ಗ ಘಟನೆ ಬಗ್ಗೆ ನ್ಯಾಯಾಂಗ ತನಿಖೆಗೆ...

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಪ್ರತಿನಿಧಿ ಸಭೆ: ಶಿವಮೊಗ್ಗ ಘಟನೆ ಬಗ್ಗೆ ನ್ಯಾಯಾಂಗ ತನಿಖೆಗೆ ಒತ್ತಾಯ

ಮಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಪ್ರತಿನಿಧಿ ಸಭೆಯು ಫೆಬ್ರವರಿ 25-26ರಂದು ರಾಜ್ಯಾಧ್ಯಕ್ಷ ಯಾಸಿರ್ ಹಸನ್‌ರವರ ಅಧ್ಯಕ್ಷತೆಯಲ್ಲಿ ದ.ಕ.ಜಿಲ್ಲೆಯ ಮಿತ್ತೂರಿನ ಫ್ರೀಡಂ ಕಮ್ಯುನಿಟಿ ಹಾಲ್‌ನಲ್ಲಿ ಜರಗಿತು.
ಸಭೆಯಲ್ಲಿ ಈ ಕೆಳಗಿನ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.

  1. ಶಿವಮೊಗ್ಗ ಹಿಂಸಾಚಾರ:
    ಹಾಲಿ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಗ್ರ ತನಿಖೆಯಾಗಲಿ: ಶಿವಮೊಗ್ಗದಲ್ಲಿ ನಡೆದ ಬಜರಂಗ ದಳ ಕಾರ್ಯಕರ್ತನ ಹತ್ಯೆಗೆ ಸಂಬಂಧಿಸಿ ಪೊಲೀಸ್ ತನಿಖೆ ಪ್ರಗತಿಯಲ್ಲಿರುವಾಗಲೇ ಬಿಜೆಪಿ-ಸಂಘಪರಿವಾರವು ಗಲಭೆಯನ್ನು ಬಹಿರಂಗವಾಗಿ ಪ್ರಚೋದಿಸಿತು. ಇದರ ನಂತರ ಸಂಘಪರಿವಾರದ ದುಷ್ಕರ್ಮಿಗಳು ವ್ಯವಸ್ಥಿತವಾಗಿ ಮುಸ್ಲಿಮರ ಮನೆ, ಅಂಗಡಿ, ಪ್ರಾರ್ಥನಾಲಯಗಳ ಮೇಲೆ ಕಲ್ಲು ತೂರಾಟ ನಡೆಸಿ ಆಸ್ತಿಪಾಸ್ತಿಗೆ ವ್ಯಾಪಕ ಹಾನಿ ಉಂಟು ಮಾಡಿದ್ದಲ್ಲದೇ, ಸೊತ್ತನ್ನು ಲೂಟಿ ಮಾಡಿದ್ದಾರೆ. ಪೊಲೀಸರ ಸಮ್ಮುಖದಲ್ಲಿಯೇ ಗಲಭೆಕೋರರು ದುಷ್ಕೃತ್ಯದಲ್ಲಿ ತೊಡಗಿದ್ದು, ಆತಂಕಕಾರಿಯಾಗಿದೆ. ಸಂಘಪರಿವಾರದ ದುಷ್ಕರ್ಮಿಗಳು ಗಲಭೆಯಲ್ಲಿ ತೊಡಗಿರುವುದಕ್ಕೆ ಬಹಳಷ್ಟು ವಿಡಿಯೋ ಸಾಕ್ಷ್ಯಾಧಾರಗಳಿದ್ದರೂ, ಇನ್ನು ಕೂಡ ಗಲಭೆಕೋರರ ಬಂಧನವಾಗದಿರುವುದು ಪೊಲೀಸರ ನಿಷ್ಕ್ರಿಯತೆಯನ್ನು ಎತ್ತಿ ತೋರಿಸುತ್ತದೆ. ಪೊಲೀಸ್ ಇಲಾಖೆ ಗಲಭೆಕೋರರನ್ನು ಕೂಡಲೇ ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು. ಅದೇ ರೀತಿ ಗಲಭೆಯಲ್ಲಿ ಸಂತ್ರಸ್ತರಾದ ಕುಟುಂಬಗಳಿಗೆ ಪರಿಹಾರವನ್ನು ಕಲ್ಪಿಸಬೇಕು. ಈ ಹಿಂಸಾಚಾರದಲ್ಲಿ ಬಿಜೆಪಿ ಸರಕಾರದ ಸಚಿವರು ಮತ್ತು ನಾಯಕರ ಪ್ರಚೋದನೆ ಎದ್ದು ಕಾಣುತ್ತಿದ್ದು ಈ ಒಟ್ಟು ಘಟನೆಯ ಕುರಿತು ಹೈಕೋರ್ಟ್ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಸಬೇಕೆಂದು ಪಾಪ್ಯುಲರ್ ಫ್ರಂಟ್ ಒತ್ತಾಯಿಸುತ್ತದೆ.

2. ಈಶ್ವರಪ್ಪರವರನ್ನು ಸಚಿವ ಸಂಪುಟದಿಂದ ವಜಾಗೊಳಿಸಲು ಆಗ್ರಹ:
ಕರ್ನಾಟಕ ರಾಜ್ಯ ಸರಕಾರದಲ್ಲಿ ಸಚಿವರಾಗಿರುವ ಕೆ.ಎಸ್.ಈಶ್ವರಪ್ಪ ಇತ್ತಿಚೆಗೆ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ರಾಷ್ಟ್ರ ರಾಜಧಾನಿ ಕೆಂಪುಕೋಟೆಯಲ್ಲಿ ಕೇಸರಿ ಧ್ವಜ ಹಾರಿಸುತ್ತೇವೆ ಎಂಬ ದೇಶದ್ರೋಹಿ ಹೇಳಿಕೆಯನ್ನು ನೀಡಿದ್ದಾರೆ. ಅದರೊಂದಿಗೆ ಮುಸ್ಲಿಮ್ ವಿರೋಧಿ ದ್ವೇಷದ ಹೇಳಿಕೆ ನೀಡುವ ಮೂಲಕ ಶಿವಮೊಗ್ಗದಲ್ಲಿ ನಡೆದ ಹಿಂಸಾಚಾರಗಳಿಗೆ ಈಶ್ವರಪ್ಪನವರು ನೇರ ಕಾರಣರಾಗಿದ್ದಾರೆ. ಮಾತ್ರವಲ್ಲದೆ, ಶಿವಮೊಗ್ಗದಲ್ಲಿ ನಡೆದ ಘಟನೆಯ ವೇಳೆ 144 ಸೆಕ್ಷನ್ ಉಲ್ಲಂಘಿಸಿ ಈಶ್ವರಪ್ಪರವರ ನೇತೃತ್ವದಲ್ಲಿ ಶವಯಾತ್ರೆ ನಡೆಸಲಾಗಿದ್ದು, ಈ ಶವಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರನ್ನು ಸೇರಿಸಿಕೊಂಡು ಸಾರ್ವಜನಿಕ ಸೊತ್ತು ಹಾಗೂ ಪ್ರಾರ್ಥನಾ ಕೇಂದ್ರಗಳಿಗೆ ಹಾನಿಯನ್ನುಂಟು ಮಾಡಲಾಗಿದೆ. ಈ ಕಾರಣದಿಂದಾಗಿ ರಾಜ್ಯದ ಸಚಿವ ಸಂಪುಟದಲ್ಲಿ ಮುಂದುವರಿಯುವ ಯಾವುದೇ ನೈತಿಕತೆಯನ್ನು ಈಶ್ವರಪ್ಪರವರು ಉಳಿಸಿಕೊಂಡಿರುವುದಿಲ್ಲ. ಆದ್ದರಿಂದ ತಕ್ಷಣ ಅವರನ್ನು ಸಚಿವ ಸಂಪುಟ ದಿಂದ ವಜಾಗೊಳಿಸಬೇಕೆಂದು ಪಾಪ್ಯುಲರ್ ಫ್ರಂಟ್ ಒತ್ತಾಯಿಸುತ್ತದೆ.

3. ರಾಜ್ಯ ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಹೆಚ್ಚಿನ ಅನುದಾನಕ್ಕೆ ಒತ್ತಾಯ:
ಕೊರೋನ, ಲಾಕ್‌ಡೌನ್ ಸನ್ನಿವೇಶದಿಂದಾಗಿ ಜನರ ವ್ಯಾಪಾರ, ಉದ್ಯೋಗ ನಷ್ಟದಲ್ಲಿದೆ. ಇದೇ ವೇಳೆ ಸಾವಿರಾರು ಸಂಖ್ಯೆಯ ಜನರು ನಿರುದ್ಯೋಗಿಗಳಾಗಿದ್ದಾರೆ ಎಂಬ ವಾಸ್ತವವನ್ನು ಸರಕಾರ ಸಲ್ಲಿಸಿರುವ ಅಂಕಿಅಂಶಗಳ ಬಹಿರಂಗಪಡಿಸಿವೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯು ಜನಜೀವನವನ್ನು ಮತ್ತಷ್ಟು ಬಾಧಿಸಿದೆ. ಜನಸಾಮಾನ್ಯರ ಸಂಕಷ್ಟವನ್ನು ನಿವಾರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾರ್ಚ್ 4ರಂದು ಮಂಡಿಸಲಿರುವ ರಾಜ್ಯ ಬಜೆಟ್ ಜನಪರವಾಗಿರಬೇಕು. ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಅಲ್ಪಸಂಖ್ಯಾತರು, ಹಿಂದುಳಿದವರು ಹಾಗೂ ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಮೀಸಲಿಡಬೇಕು. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ನಿರಂತರವಾಗಿ ಅನುದಾನ ಕಡಿತಗೊಳಿಸುತ್ತಾ ಬರಲಾಗುತ್ತಿದ್ದು, ಇದು ಅಲ್ಪಸಂಖ್ಯಾತರು ವಿಶೇಷವಾಗಿ ಮುಸ್ಲಿಮರ ಅಭಿವೃದ್ಧಿಗೆ ಹಿನ್ನಡೆ ಉಂಟುಮಾಡಿದೆ. ಈ ನಿಟ್ಟಿನಲ್ಲಿ ಸರಕಾರವು ಈ ಬಾರಿಯ ಬಜೆಟ್‌ನಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಗೆ ಕನಿಷ್ಠ 10 ಸಾವಿರ ಕೋಟಿ ರೂ. ಅನುದಾನ ಮೀಸಲಿಡಬೇಕೆಂದು ಸಭೆ ಒತ್ತಾಯಿಸುತ್ತದೆ.

4. ಉಕ್ರೇನ್‌ನಲ್ಲಿ ಸಂಕಷ್ಟದಲ್ಲಿರುವ ಕನ್ನಡಿಗರಿಗೆ ಅಗತ್ಯ ನೆರವು ಕಲ್ಪಿಸಿ:
ಉಕ್ರೇನ್ ಮೇಲೆ ನಡೆಯುತ್ತಿರುವ ರಷ್ಯಾದ ದಾಳಿ ಸಾಮ್ರಾಜ್ಯಶಾಹಿತ್ವದ ಮುಂದುವರಿದ ಭಾಗವಾಗಿದ್ದು, ಅಮಾಯಕ ಜನರ ಸಾವು ನೋವಿಗೆ ಕಾರಣವಾಗುವ, ಪ್ರಕೃತಿಯ ಮೇಲೆ ಗಂಭೀರ ದುಷ್ಪರಿಣಾಮ ಬೀರುವ ಇಂತಹ ದಾಳಿಗಳು ಖಂಡನಾರ್ಹವಾಗಿವೆ. ಉಕ್ರೇನ್‌ನಲ್ಲಿ ಸಿಲುಕಿಕೊಂಡಿರುವ ಭಾರತೀಯರ ರಕ್ಷಣೆಗೆ ಒಕ್ಕೂಟ ಸರ್ಕಾರ ತಕ್ಷಣ ಕ್ರಮಕೈಗೊಳ್ಳಬೇಕು ಮತ್ತು ರಾಜ್ಯ ಸರಕಾರವು ತಕ್ಷಣ ನೋಡಲ್ ಅಧಿಕಾರಿಗಳನ್ನು ನೇಮಿಸಿ ಯುದ್ಧಪೀಡಿತ ಭೂಮಿಯಲ್ಲಿ ಸಿಲುಕಿ ಸಂಕಷ್ಟ ಎದುರಿಸುತ್ತಿರುವ ಕನ್ನಡಿಗರನ್ನು ರಾಜ್ಯಕ್ಕೆ ಕರೆ ತರಲು ಕೂಡಲೇ ಕಾರ್ಯಪ್ರವೃತ್ತವಾಗಬೇಕು. ಅದೇ ರೀತಿ ಆರ್ಥಿಕ ಸಂಕಷ್ಟ ಎದುರಿಸುತ್ತಾ ರಕ್ಷಣೆಗಾಗಿ ಮೊರೆ ಇಡುತ್ತಿರುವ ವಿದ್ಯಾರ್ಥಿಗಳು ಸಹಿತ ಎಲ್ಲಾ ಕನ್ನಡಿಗರಿಗೆ ಉಚಿತ ಪ್ರಯಾಣದ ವ್ಯವಸ್ಥೆ ಕಲ್ಪಿಸಬೇಕೆಂದು ಪಾಪ್ಯುಲರ್ ಫ್ರಂಟ್ ರಾಜ್ಯ ಪ್ರತಿನಿಧಿ ಸಭೆ ಒತ್ತಾಯಿಸಿದೆ ಎಂದು ಪ್ರಕಟನೆ ತಿಳಿಸಿದೆ.

ಸಂಘಟನೆಯು ರಾಜ್ಯದಲ್ಲಿ ನಡೆಸಿದ ಕಾರ್ಯಚಟುವಟಿಕೆಗಳ ಮಾಹಿತಿಯನ್ನೊಳಗೊಂಡ ‘ಫ್ರಂಟ್ ನ್ಯೂಸ್’ ಬುಲೆಟಿನ್ ಅನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.

Join Whatsapp
Exit mobile version