Home ಟಾಪ್ ಸುದ್ದಿಗಳು ಕೇರಳ ರಾಜ್ಯ ನಾಯಕನ ಬಂಧನ: ED ಕ್ರಮಕ್ಕೆ ಪಾಪ್ಯುಲರ್ ಫ್ರಂಟ್ ಆಕ್ರೋಶ

ಕೇರಳ ರಾಜ್ಯ ನಾಯಕನ ಬಂಧನ: ED ಕ್ರಮಕ್ಕೆ ಪಾಪ್ಯುಲರ್ ಫ್ರಂಟ್ ಆಕ್ರೋಶ

ನವದೆಹಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕೇರಳ ರಾಜ್ಯ ನಾಯಕನನ್ನು ಜಾರಿ ನಿರ್ದೇಶನಾಲಯ (ED) ಬಂಧಿಸಿರುವುದನ್ನು ಸಂಘಟನೆಯ ಚೆಯರ್ ಮೆನ್ ಒ.ಎಂ.ಎ ಸಲಾಂ ತೀವ್ರವಾಗಿ ಖಂಡಿಸಿದ್ದು, ಈ ಬಂಧನವು ಸಂಘಟನೆಯ ವಿರುದ್ಧ ನಡೆಯುತ್ತಿರುವ ಬೇಟೆಯ ಮುಂದುವರಿದ ಭಾಗವಾಗಿದೆ ಎಂದು ಟೀಕಿಸಿದ್ದಾರೆ.

ಪಾಪ್ಯುಲರ್ ಫ್ರಂಟ್ ನ ಕೇರಳ ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ಎಂ.ಕೆ.ಅಶ್ರಫ್ ಅವರ ಬಂಧನವು ಕಳೆದ ಕೆಲವು ವರ್ಷಗಳಿಂದ ಸಂಘಟನೆಯ ಸದಸ್ಯರು ಮತ್ತು ನಾಯಕರ ವಿರುದ್ಧ ಏಜೆನ್ಸಿಯಿಂದ ನಡೆಯುತ್ತಿರುವ ಕಿರುಕುಳದ ಮುಂದುವರಿದ ಭಾಗವಾಗಿದೆ ಎಂದು ಅವರು ಹೇಳಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಸಂಘಟನೆಯ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ ಎ) ಅಡಿಯಲ್ಲಿ ಸುಳ್ಳು ಪ್ರಕರಣ ದಾಖಲಿಸಲಾಗಿತ್ತು. ಕಿರುಕುಳ ನೀಡುವ ರೀತಿಯಲ್ಲಿ ED ಅಧಿಕಾರಿಗಳು ನಿರಂತರವಾಗಿ ಸಮನ್ಸ್ ಗಳನ್ನು ನೀಡಿದ್ದರೂ, ಕಾನೂನನ್ನು ಪಾಲಿಸುವ ಪ್ರಾಮಾಣಿಕ ನಾಗರಿಕರಾಗಿ ರಾಷ್ಟ್ರೀಯ ಮಟ್ಟದಿಂದ ರಾಜ್ಯ ಮಟ್ಟದ ವರೆಗಿನ ಸಂಘಟನೆಯ ಎಲ್ಲಾ ನಾಯಕರು ತನಿಖೆಯ ಪ್ರತಿಯೊಂದು ಹಂತದಲ್ಲೂ ಏಜೆನ್ಸಿಯೊಂದಿಗೆ ಸಹಕರಿಸುತ್ತಾ ಬರುತ್ತಿದ್ದಾರೆ. 2020, ಜನವರಿಯಿಂದ ಏಜೆನ್ಸಿ ವಿಧಿಸಿದ ಎಲ್ಲಾ ಷರತ್ತುಗಳನ್ನೂ ಪಾಲಿಸುತ್ತಾ ಬಂದಿದ್ದಾರೆ. ತನಿಖಾ ಉದ್ದೇಶದಿಂದ ದಾಳಿ ನಡೆದು ಹಲವು ವರ್ಷಗಳೇ ಕಳೆದರೂ ಸಂಘಟನೆಯ ವಿರುದ್ಧ ಜಾರಿ ನಿರ್ದೇಶನಾಲಯಕ್ಕೆ ಇದುವರೆಗೆ ಏನನ್ನೂ ಪತ್ತೆಹಚ್ಚಲು ಸಾಧ್ಯವಾಗಿಲ್ಲವಾದರೂ, ಅನುಮಾನದ ಆಧಾರದ ಮೇಲೆ ಕಿರುಕುಳ ಮತ್ತು ಬಂಧನಗಳು ನಿರಂತರವಾಗಿ ಮುಂದುವರಿಯುತ್ತಲೇ ಇವೆ ಎಂದು ತಿಳಿಸಿದ್ದಾರೆ.

ಕಳೆದ ಜನವರಿಯಲ್ಲಿ ಎಂ.ಕೆ ಅಶ್ರಫ್ ಅವರ ನಿವಾಸದ ಮೇಲೆ ED ದಾಳಿ ನಡೆಸಿತ್ತು. ನಂತರ, ಅವರನ್ನು ಹಲವು ಬಾರಿ ವಿಚಾರಣೆಗಾಗಿ ದೆಹಲಿಗೆ ಕರೆಸಲಾಗಿತ್ತು. ಮಾರ್ಚ್ ತಿಂಗಳೊಂದರಲ್ಲೇ 19ರಿಂದ 23ರ ವರೆಗೆ ಸತತ ನಾಲ್ಕು ದಿನಗಳ ಕಾಲ ವಿಚಾರಣೆಗೊಳಪಡಿಸಲಾಗಿತ್ತು. ಮತ್ತೆ ಏಪ್ರಿಲ್ 5ರಂದು ಹಾಜರಾಗುವಂತೆ 29ರಂದು ಮತ್ತೊಂದು ಸಮನ್ಸ್ ನೀಡಲಾಯಿತು. ರಮಝಾನ್ ಉಪವಾಸದ ಹಿನ್ನೆಲೆಯಲ್ಲಿ ಹಾಜರಾಗಲು ಸಾಧ್ಯವಾಗುತ್ತಿಲ್ಲ, ಆದ್ದರಿಂದ ವಿಚಾರಣೆ ಮುಂದೂಡುವಂತೆ ಅವರು ಮಾಡಿದ ಮನವಿಯನ್ನು ಕೂಡ ತಿರಸ್ಕರಿಸಲಾಯಿತು.

ನ್ಯಾಯಸಮ್ಮತ ತನಿಖೆಗಿಂತ ಹೆಚ್ಚಾಗಿ, ಏಜೆನ್ಸಿಯು ಪ್ರಕರಣದ ಹಿಂದೆ ದುರುದ್ದೇಶ ಹೊಂದಿದೆ ಎಂಬುದನ್ನು ಇವೆಲ್ಲವೂ ತೋರಿಸುತ್ತವೆ. ಅಂತಿಮವಾಗಿ, ಕಾನೂನು ಪಾಲಿಸುವ ನಾಗರಿಕನಾಗಿ, ಅಶ್ರಫ್ ಅವರು EDಯ ದೆಹಲಿ ಪ್ರಧಾನ ಕಚೇರಿಗೆ ಹಾಜರಾದಾಗ ಅವರನ್ನು ಬಂಧಿಸಿ ಲಕ್ನೋಗೆ ಕರೆದೊಯ್ಯಲಾಗಿದೆ ಎಂದು ಹೇಳಿದ್ದಾರೆ.

ಇದು ಸಂಘಟನೆಯ ವಿರುದ್ಧ ಗೃಹ ಸಚಿವಾಲಯವು ಪ್ರಾರಂಭಿಸಿದ ಸಂಪೂರ್ಣ ಸುಳ್ಳು ಪ್ರಕರಣ ಎಂಬುದನ್ನು ಮನಗಂಡಿರುವ ಪಾಪ್ಯುಲರ್ ಫ್ರಂಟ್, ಸಂಸ್ಥೆಯ ವಿರುದ್ಧ ದಾಖಲಾದ ಇಸಿಐಆರ್ (ಜಾರಿ ಅಪರಾಧ ಮಾಹಿತಿ ವರದಿ) ಯ ಕಾನೂನುಬದ್ಧತೆಯನ್ನು ಗೌರವಾನ್ವಿತ ದೆಹಲಿ ಹೈಕೋರ್ಟ್ ನಲ್ಲಿ ಪ್ರಶ್ನಿಸಿತ್ತು. ಈ ಪ್ರಕರಣದ ವಿಚಾರಣೆ ಇನ್ನೂ ನ್ಯಾಯಾಲಯದಲ್ಲಿ ಬಾಕಿಯಿರುವಾಗಲೇ ಮತ್ತು ಅಂತಿಮ ವಿಚಾರಣೆಗೆ ಕೇವಲ ಒಂದು ವಾರ ಮಾತ್ರ ಬಾಕಿಯಿರುವಾಗಲೇ, ಸಂಘಟನೆಯ ನಾಯಕರು ಮತ್ತು ಸದಸ್ಯರ ವಿಚಾರಣೆ ಮತ್ತು ಬಂಧನ ಕ್ರಮಗಳು ನ್ಯಾಯಾಲಯದ ಮುಂದೆ ಪ್ರಕರಣವು ಬಿದ್ದು ಹೋಗಬಹುದು ಎಂಬ ಭಯದಿಂದ ಏಜೆನ್ಸಿ ನಡೆಸುತ್ತಿರುವ ಹೇಡಿತನದ ಕೃತ್ಯಗಳಲ್ಲದೆ ಬೇರೇನೂ ಅಲ್ಲ ಎಂದು ಸಲಾಂ ಆರೋಪಿಸಿದ್ದಾರೆ.

ಅಲ್ಪಸಂಖ್ಯಾತರ ಪರವಾಗಿ ನಿಲ್ಲುವ ಸಂಘಟನೆಯ ವಿರುದ್ಧ ಧಾರ್ಮಿಕ ಮತ್ತು ರಾಜಕೀಯ ಸೇಡಿನ ಇಂತಹ ಕೃತ್ಯಗಳ ಮೂಲಕ, ಕಾನೂನು ಮತ್ತು ನಿಷ್ಪಕ್ಷಪಾತ ಸಂಸ್ಥೆ, ED ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದೆ. ರಾಜಕೀಯ ಬೆಂಬಲ ಇರುವ ಕೋಟ್ಯಂತರ ರೂ. ವ್ಯಾಪಾರ ವಂಚನೆ ಎಸಗಿದವರನ್ನು ಮುಟ್ಟದಂತೆ ಏಜೆನ್ಸಿಯ ಕೈಗಳನ್ನು ಕಟ್ಟಿ ಹಾಕಲಾಗಿದೆ, ED ಇನ್ನು ಮುಂದೆ ತನ್ನ ಘೋಷಿತ ಉದ್ದೇಶಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಸಾಬೀತಾಗಿದೆ. ಕೇಂದ್ರೀಯ ಏಜೆನ್ಸಿಯ ಈ ದುರ್ನಡತೆಗಳನ್ನು ತಡೆಯಲು ಉನ್ನತ ನ್ಯಾಯಾಲಯವು ಈ ವಿಷಯದಲ್ಲಿ ಮಧ್ಯಪ್ರವೇಶಿಸಲು ಇದು ಸೂಕ್ತ ಸಮಯವಾಗಿದೆ ಎಂದು ಹೇಳಿದ್ದಾರೆ.

ದೇಶದಲ್ಲಿ ಅಲ್ಪಸಂಖ್ಯಾತರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಹತ್ತಿಕ್ಕಲು ಮತಾಂಧ ರಾಜಕೀಯ ಯಜಮಾನರ ಕೈಗೊಂಬೆಗಳಂತೆ ವರ್ತಿಸದಂತೆ ಪಾಪ್ಯುಲರ್ ಫ್ರಂಟ್ ಮತ್ತೊಮ್ಮೆ ಈಡಿಯನ್ನು ಒತ್ತಾಯಿಸುತ್ತದೆ. ಪಾಪ್ಯುಲರ್ ಫ್ರಂಟ್ ಈ ರಾಜಕೀಯ ಪ್ರೇರಿತ ಪ್ರಕರಣಗಳಿಂದ ಬೆದರುವುದಿಲ್ಲ ಮತ್ತು ಸುಳ್ಳು ಪ್ರಕರಣಗಳ ವಿರುದ್ಧ ನ್ಯಾಯಾಲಯಗಳಲ್ಲಿ ಹೋರಾಡುವುದರ ಜೊತೆಗೆ ಈಡಿಯ ಕಾನೂನುಬಾಹಿರ ಕೃತ್ಯಗಳ ವಿರುದ್ಧ ಸಾರ್ವಜನಿಕ ಅಭಿಪ್ರಾಯವನ್ನು ಕ್ರೋಢೀಕರಿಸುತ್ತದೆ ಎಂದು ಸ್ಪಷ್ಟಪಡಿಸಲು ಬಯಸುತ್ತದೆ ಎಂದು ಒ.ಎಂ.ಎ ಸಲಾಂ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Join Whatsapp
Exit mobile version