Home ಟಾಪ್ ಸುದ್ದಿಗಳು ರಾಮನವಮಿ ಸಂದರ್ಭದಲ್ಲಿ ಮುಸ್ಲಿಮರ ವಿರುದ್ಧ ಹಿಂಸಾಚಾರ: ನ್ಯಾಯಾಂಗ ತನಿಖೆಗೆ ಪಾಪ್ಯುಲರ್ ಫ್ರಂಟ್ ಒತ್ತಾಯ

ರಾಮನವಮಿ ಸಂದರ್ಭದಲ್ಲಿ ಮುಸ್ಲಿಮರ ವಿರುದ್ಧ ಹಿಂಸಾಚಾರ: ನ್ಯಾಯಾಂಗ ತನಿಖೆಗೆ ಪಾಪ್ಯುಲರ್ ಫ್ರಂಟ್ ಒತ್ತಾಯ

ಬೆಂಗಳೂರು: ರಾಮನವಮಿಯ ಸಂದರ್ಭದಲ್ಲಿ ಮುಸ್ಲಿಮರನ್ನು ಗುರಿಯಾಗಿಸಿ ವ್ಯವಸ್ಥಿತವಾಗಿ ನಡೆದ ಹಿಂಸಾಚಾರದ ಬಗ್ಗೆ ಸುಪ್ರೀಂ ಕೋರ್ಟ್ ಹಾಲಿ ನ್ಯಾಯಾಧೀಶರು ಅಥವಾ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಪಿಎಫ್ಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಿಸ್ ಅಹ್ಮದ್ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮನವಮಿಯ ಮೆರವಣಿಗೆ ಸಂದರ್ಭದಲ್ಲಿ ನಡೆದ ಹಿಂಸಾಚಾರ ಖಂಡನೀಯ. ಭಾರತದಲ್ಲಿ ಒಂದೇ ರೀತಿಯಲ್ಲಿ ವ್ಯವಸ್ಥಿತವಾಗಿ ದಂಗೆಗಳು ನಡೆಯುತ್ತಿವೆ. ಎಲ್ಲಾ ದಂಗೆಗಳಲ್ಲೂ ಮುಸ್ಲಿಮರನ್ನು ಗುರಿಯಾಗಿಸಲಾಗಿದೆ. ಗುಜರಾತ್, ಕರ್ನಾಟಕ, ಗೋವಾ , ಬಿಹಾರ, ಮಧ್ಯ ಪ್ರದೇಶದಲ್ಲಿ ನಡೆದ ಅಹಿತಕರ ಘಟನೆಗಳನ್ನು ಗಮನಿಸಿದಾಗ ಇವೆಲ್ಲವೂ ಮುಸ್ಲಿಮರ ಆಸ್ತಿ ಪಾಸ್ತಿಯನ್ನು, ಪ್ರಾರ್ಥನಾ ಮಂದಿರಗಳನ್ನು ಗುರಿಯಾಗಿಸಿ ನಡೆದ ದಾಳಿ ಎಂಬುದು ಸಾಬೀತಾಗಿದೆ. ಮಸೀದಿ ಇರುವ ಕಡೆ ಮೆರವಣಿಗೆಯಲ್ಲಿ ತಲವಾರು ಪ್ರದರ್ಶಿಸಿ ಘೋಷಣೆ ಕೂಗಲಾಗಿದೆ. ಬಳಿಕ ದಂಗೆ ನಡೆಸಿ ಮುಸ್ಲಿಮರ ಆಸ್ತಿಪಾಸ್ತಿಗಳನ್ನು ಮಾತ್ರ ನಾಶಪಡಿಸಲಾಗಿದೆ. ಮುಸ್ಲಿಮರ ಅಂಗಡಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತದೆ ಎಂದು ಆರೋಪಿಸಿದರು.


ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಕಾರ್ಯದರ್ಶಿ ಎ. ಕೆ. ಅಶ್ರಫ್ ಮಾತನಾಡಿ, ದೇಶದಲ್ಲಿ ಒಂದು ಧರ್ಮವನ್ನು ಗುರಿಯಾಗಿಸಿ ನಡೆಯುತ್ತಿರುವ ಹಿಂಸಾಚಾರ ಖಂಡನೀಯ. ರಾಮನವಮಿಯ ಮೆರವಣಿಗೆ ಸಂದರ್ಭದಲ್ಲಿ ಗುಜರಾತ್, ಕರ್ನಾಟಕ, ಗೋವಾ , ಬಿಹಾರ, ಮಧ್ಯಪ್ರದೇಶ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ನಡೆದ ದಾಳಿ, ಮುಸ್ಲಿಮರ ವಿರುದ್ಧ ವ್ಯವಸ್ಥಿತವಾಗಿ ನಡೆಯುತ್ತಿರುವ ಸಂಘಟಿತ ದಾಳಿಯ ಮುಂದುವರಿದ ಭಾಗವಾಗಿದೆ ಎಂದು ಹೇಳಿದರು.


ಹರಿದ್ವಾರದಲ್ಲಿ ನಡೆದ ಧರ್ಮ ಸಂಸತ್ ನಲ್ಲಿ ಮುಸ್ಲಿಮರ ನರಮೇಧಕ್ಕೆ ಕರೆಕೊಟ್ಟವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದು ಕೊಳ್ಳದ ಹಿನ್ನೆಲೆಯಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ. ಈ ಬೆಳವಣಿಗೆ ಹಿಂದುತ್ವ ಶಕ್ತಿಗಳಿಗೆ ಇನ್ನಷ್ಟು ಪ್ರೋತ್ಸಾಹ ನೀಡಿದೆ ಎಂದ ಅವರು, ಹಿಂದೂ ಧರ್ಮದ ಕಾರ್ಯಕ್ರಮಗಳನ್ನು RSS ಹೈಜಾಕ್ ಮಾಡಿ, ದ್ವೇಷ ಮತ್ತು ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಪ್ರಯತ್ನದಲ್ಲಿದೆ, ಆದರೆ ಇದು ಹಿಂದೂ ಮುಸ್ಲಿಮ್- ಸಂಘರ್ಷವಲ್ಲ. ಇಲ್ಲಿನ ಆಡಳಿತ ವರ್ಗ ಅಧಿಕಾರಿಗಳನ್ನು ಮತ್ತು ಪೊಲೀಸ್ ಇಲಾಖೆವನ್ನು ದುರ್ಬಳಕೆ ಮಾಡುತ್ತಿದೆ ಎಂದು ಅಶ್ರಫ್ ವಾಗ್ದಾಳಿ ನಡೆಸಿದರು.


ಮಧ್ಯಪ್ರದೇಶದ ಖರ್ಗೋನ್ ಎಂಬಲ್ಲಿ ನಡೆದ ಹಿಂಸಾಚಾರದ ಬಳಿಕ ಸಂಶಯಾಸ್ಪದ ಗಲಭೆಕೋರರು ಎಂದು ಬಿಂಬಿಸಿ ಪೊಲೀಸರು ಪ್ರಧಾನ ಮಂತ್ರಿಯ ವಸತಿ ಯೋಜನೆಯಡಿಯಲ್ಲಿ ನಿರ್ಮಾಣವಾಗಿದ್ದ ಮುಸ್ಲಿಮರ ಮನೆಯನ್ನು ಧ್ವಂಸಗೊಳಿಸಿದ್ದಾರೆ. ಅಲ್ಲದೇ ಮಸೀದಿ ಮತ್ತು ಮುಸ್ಲಿಮರ ಆಸ್ತಿಗಳನ್ನು ನಾಶ ಪಡಿಸಿದ್ದಾರೆ. ಇದು ಸರಕಾರಿ ಪ್ರಾಯೋಜಿತ ಧ್ವಂಸ ಮತ್ತು ವ್ಯವಸ್ಥಿತವಾದ ಪಿತೂರಿಯಾಗಿದೆ ಎಂದು ಅವರು ಆರೋಪಿಸಿದರು.


ದೇಶದ ಕೆಲವೊಂದು ರಾಜ್ಯಗಳಲ್ಲಿ ರಾಮನವಮಿ ಉತ್ಸವದ ವೇಳೆ ಮುಸ್ಲಿಮ್ ಬಾಹುಳ್ಯವಿರುವ ಪ್ರದೇಶಗಳಲ್ಲಿ ಮರವಣಿಗೆಗಳನ್ನು ಆಯೋಜಿಸಲಾಗಿದೆ. ಗಲಭೆಯ ಉದ್ದೇಶದಿಂದಲೇ ಮುಸ್ಲಿಮರ ಮಸೀದಿಗಳ ಮುಂದೆ ಆಕ್ಷೇಪಾರ್ಹ ಹಾಡುಗಳನ್ನು ಹಾಕಿ, ಘೋಷಣೆಗಳನ್ನು ಕೂಗಲಾಗಿದೆ. ಮುಸ್ಲಿಮರನ್ನು ಪ್ರಚೋದಿಸುವ ಕಾರ್ಯವನ್ನು ನಿರಂತರವಾಗಿ ಮಾಡಲಾಗಿದೆ. ಈ ಘಟನೆಯನ್ನು ಒಟ್ಟಾರೆಯಾಗಿ ಖಂಡಿಸಬೇಕಾಗಿದ್ದ ಜಾತ್ಯತೀತ ಪಕ್ಷಗಳು ಮೌನವಹಿಸಿರುವುದು ನಿರಾಶಾದಾಯಕ ಬೆಳವಣಿಗೆಯಾಗಿದೆ. ಶಾಂತಿ ಸೌಹಾರ್ದತೆಯ ನಾಡಿನಲ್ಲಿ ಈ ಶಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳದೆ ಇಲ್ಲಿ ಶಾಂತಿ ನೆಲೆಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.


ಸಂಘಪರಿವಾರದಿಂದ ಮತ್ತು ಪೊಲೀಸರಿಂದ ಕಿರುಕುಳಕ್ಕೊಳಗಾದ ಸಂತ್ರಸ್ತರಿಗೆ ಪಾಪ್ಯುಲರ್ ಫ್ರಂಟ್ ಕಾನೂನು ನೆರವು ನೀಡುವ ಕುರಿತು ಚಿಂತನೆ ನಡೆಸಿದೆ. ಮುಸ್ಲಿಮರ ಇಚ್ಛಾಶಕ್ತಿ ಮತ್ತು ಆತ್ಮಸ್ಥೈರ್ಯವನ್ನು ಕುಗ್ಗಿಸಲು ಹಿಂಸಾಚಾರವನ್ನು ಸೃಷ್ಟಿಸಲಾಗಿದೆ ಎಂದು ಅಶ್ರಫ್ ದೂರಿದರು. ಒಟ್ಟಾರೆ ದೇಶದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳು, ಮುಸ್ಲಿಮರ ಮಸೀದಿಗಳ ಮೇಲಿನ ದಾಂಧಲೆಯ ಕುರಿತಾದ ಪ್ರಕರಣಗಳ ಬಗ್ಗೆ ಸುಪ್ರೀಂ ಕೋರ್ಟ್ ಹಾಲಿ ನ್ಯಾಯಾಧೀಶರು ಅಥವಾ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಎ ಕೆ ಅಶ್ರಫ್ ಆಗ್ರಹಿಸಿದ್ದಾರೆ.

Join Whatsapp
Exit mobile version