ಹಿರಿಯ ಸಾಹಿತಿ, ಸಂಶೋಧಕ ಪ್ರೊ. ಬಿ.ಎಂ.ಇಚ್ಲಂಗೋಡು ಅವರ ನಿಧನಕ್ಕೆ ಪಾಪ್ಯುಲರ್ ಫ್ರಂಟ್ ಸಂತಾಪ

Prasthutha|

ಹಿರಿಯ ಸಾಹಿತಿ, ಸಂಶೋಧಕ ಪ್ರೊ. ಬಿ.ಎಂ.ಇಚ್ಲಂಗೋಡು ಅವರ ನಿಧನಕ್ಕೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಯಾಸಿರ್ ಹಸನ್, ರಾಜ್ಯ ಕಾರ್ಯದರ್ಶಿ ಎ.ಕೆ.ಅಶ್ರಫ್, ದ.ಕ.ಜಿಲ್ಲಾಧ್ಯಕ್ಷ ಇಜಾಝ್ ಅಹ್ಮದ್ ತೀವ್ರ ಸಂತಾಪ ಸೂಚಿಸಿದ್ದಾರೆ.

- Advertisement -

ಬ್ಯಾರಿ ಸಮುದಾಯದ ಸಾಕ್ಷಿ ಪ್ರಜ್ಞೆಯಾಗಿದ್ದ ಇಚ್ಲಂಗೋಡು ಅವರು ಬ್ಯಾರಿ ಸಂಶೋಧನೆಗೆ ನೀಡಿದ ಕೊಡುಗೆಗಳು ಅನನ್ಯ. ತುಳುನಾಡಿನ ಬ್ಯಾರಿ ಸಂಸ್ಕೃತಿ, ಭಾಷೆಯ ಕುರಿತಾಗಿ ಆಳವಾದ ಅಧ್ಯಯನ ನಡೆಸಿದ ಇವರು ಹಲವಾರು ಉತ್ಕೃಷ್ಟ ಕೃತಿಗಳನ್ನು ಸಮಾಜಕ್ಕೆ ಸಮರ್ಪಿಸಿದ್ದಾರೆ. ಬ್ಯಾರಿಗಳ ಬಗ್ಗೆ ಅಧ್ಯಯನ ನಡೆಸುವಾಗ ಹಲವು ಬೆದರಿಕೆಗಳನ್ನು ಎದುರಿಸಿದಾಗಲೂ ಅವರು ತಮ್ಮ ಅಧ್ಯಯನದಲ್ಲಿ ಅಚಲರಾಗಿ ನಿಂತರು. ದ.ಕ.ಜಿಲ್ಲೆಯ ವಿವಿಧ ತಾಲೂಕುಗಳ ಸಂಸ್ಕೃತಿಗಳ ಬಗ್ಗೆಯೂ ಅವರು ಅಧ್ಯಯನ ನಡೆಸಿದ್ದಾರೆ. ತುಳುನಾಡ ಬ್ಯಾರಿಗಳು ಎಂಬ ಇವರ ಕೃತಿಯು ಬ್ಯಾರಿ ಸಮುದಾಯದ ಮೂಲ, ಭಾಷೆ, ಸಂಸ್ಕೃತಿಯ ದರ್ಶನ ಮಾಡುತ್ತದೆ. ಸಾಹಿತ್ಯ ಲೋಕಕ್ಕೆ ಅನುಪಮ ಕೊಡುಗೆ ನೀಡಿದ ಅವರು ಹಲವು ನಿಯತಕಾಲಿಕಗಳಲ್ಲಿ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ಗ್ರಾಹಕರ ಹಕ್ಕುಗಳ ಬಗ್ಗೆ ಜನಜಾಗೃತಿ ಮೂಡಿಸುತ್ತಿದ್ದ ಅವರು, ಗ್ರಾಹಕ ವಿಚಾರಗಳ ಬಗ್ಗೆ ಮಾಹಿತಿಯುಕ್ತ ಕೃತಿಯನ್ನೂ ಹೊರತಂದಿದ್ದಾರೆ. ಮಾತ್ರವಲ್ಲ, ಗ್ರಾಹಕರ ವೇದಿಕೆಯ ಮೂಲಕ  ಅಸಂಖ್ಯಾತ ಗ್ರಾಹಕರಿಗೆ ನ್ಯಾಯವನ್ನೂ ಒದಗಿಸಿಕೊಟ್ಟಿದ್ದಾರೆ.

ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದ ಬಿ.ಎಂ.ಇಚ್ಲಂಗೋಡು ಅವರು ಸಾಹಿತಿಯಾಗಿ, ಸಂಪಾದಕನಾಗಿ, ಸಾಮಾಜಿಕ ಕಾರ್ಯಕರ್ತನಾಗಿ, ಹೋರಾಟಗಾರನಾಗಿ ಏಕಕಾಲದಲ್ಲಿ ಹಲವು ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅವರ ಆದರ್ಶ ಜೀವನವು ಮುಂದಿನ ತಲೆಮಾರಿಗೆ ಎಂದೂ ಉತ್ತೇಜನಕಾರಿಯಾಗಿದೆ.  ಸೃಷ್ಟಿಕರ್ತನು ಬಿ.ಎಂ.ಇಚ್ಲಂಗೋಡು ಅವರ ಕುಟುಂಬಸ್ಥರಿಗೆ, ಅಭಿಮಾನಿ ಬಳಗಕ್ಕೆ ಅವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕರುಣಿಸಲಿ ಎಂದು ಅವರು ಪ್ರಾರ್ಥಿಸಿದ್ದಾರೆ.

Join Whatsapp