Home ಟಾಪ್ ಸುದ್ದಿಗಳು ವಕೀಲರಿಗೆ ಯುಎಪಿಎ ನೋಟೀಸ್ ಕಳಿಸಿದ ತ್ರಿಪುರಾ ಪೊಲೀಸರ ಕ್ರಮಕ್ಕೆ ಪಾಪ್ಯುಲರ್ ಫ್ರಂಟ್ ಖಂಡನೆ: ಕೂಡಲೇ ಹಿಂಪಡೆಯಲು...

ವಕೀಲರಿಗೆ ಯುಎಪಿಎ ನೋಟೀಸ್ ಕಳಿಸಿದ ತ್ರಿಪುರಾ ಪೊಲೀಸರ ಕ್ರಮಕ್ಕೆ ಪಾಪ್ಯುಲರ್ ಫ್ರಂಟ್ ಖಂಡನೆ: ಕೂಡಲೇ ಹಿಂಪಡೆಯಲು ಆಗ್ರಹ

ಹೊಸದಿಲ್ಲಿ: ತ್ರಿಪುರಾದಲ್ಲಿ ಮುಸ್ಲಿಮ್ ವಿರೋಧಿ ಹಿಂಸಾಚಾರದ ವಿರುದ್ಧ ಧ್ವನಿ ಎತ್ತಿದ ಕಾರಣಕ್ಕಾಗಿ ನ್ಯಾಯವಾದಿಗಳಿಗೆ ಯುಎಪಿಎ ಅಡಿ ಕಾನೂನು ನೋಟೀಸು ಜಾರಿಗೊಳಿಸಿರುವುದನ್ನು ಮಲಪ್ಪುರಂನಲ್ಲಿ ನವೆಂಬರ್ 4, 5ರಂದು ನಡೆದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ತನ್ನ ನಿರ್ಣಯದಲ್ಲಿ ಖಂಡಿಸಿದೆ.


ತ್ರಿಪುರಾ ಪೊಲೀಸರು ಸಂಘಪರಿವಾರದ ಭೀತಿಯಲ್ಲಿ ಬದುಕುತ್ತಿರುವ ಸಂತ್ರಸ್ತ ಜನರಿಗೆ ರಕ್ಷಣೆ ಕಲ್ಪಿಸುವ ಬದಲು, ಹಿಂಸಾಚಾರದ ವಿರುದ್ಧ ಧ್ವನಿ ಎತ್ತಿದ ವಕೀಲರು ಮತ್ತು ಮಾನವ ಹಕ್ಕು ಹೋರಾಟಗಾರರ ಹಿಂದೆ ಬಿದ್ದಿರುವುದು ಆತಂಕದ ವಿಚಾರವಾಗಿದೆ ಎಂದು ಸಮಿತಿ ಹೇಳಿದೆ.
ಒಂದು ವೇಳೆ ಸರಕಾರ ನಿಷ್ಕ್ರಿಯವಾಗದೇ ಇದ್ದಿದ್ದರೆ, ಹಿಂಸಾಚಾರ ಒಂದು ಗಂಟೆಗೂ ಹೆಚ್ಚು ಕಾಲ ನಡೆಯುತ್ತಿರಲಿಲ್ಲ. ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲಿನ ದಾಳಿಯ ನೆಪದಲ್ಲಿ ತ್ರಿಪುರಾದಲ್ಲಿ ಪ್ರಾರಂಭವಾದ ಹಿಂಸಾಚಾರವು ಒಂದು ವಾರಕ್ಕೂ ಅಧಿಕ ಸಮಯ ಮುಂದುವರಿಯಿತು. ವಿ.ಎಚ್.ಪಿ ಮತ್ತು ಬಜರಂಗದಳದಂತಹ ಹಿಂದುತ್ವ ಸಂಘಟನೆಗಳು ರಾಜ್ಯದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಿದರು. ಅವರು ಮಸ್ಜಿದ್ ಮತ್ತು ಮುಸ್ಲಿಮರ ಆಸ್ತಿಗೆ ಬಹಳಷ್ಟು ಹಾನಿ ಉಂಟು ಮಾಡಿದರು. ಆದರೆ ತ್ರಿಪುರಾ ಪೊಲೀಸರು ಅವರನ್ನು ನಿಯಂತ್ರಿಸಲು ವಿಫಲರಾದರು. ಈ ಪರಿಸ್ಥಿತಿಯಲ್ಲಿ ಎನ್.ಸಿ.ಎಚ್.ಆರ್.ಓ ಮತ್ತು ಪಿಯುಸಿಎಲ್ ನಂತಹ ಮಾನವ ಹಕ್ಕು ಸಂಘಟನೆಗಳ ಒಕ್ಕೂಟವು ಸತ್ಯ ಶೋಧನಾ ತಂಡದ ಮೂಲಕ ಮಧ್ಯ ಪ್ರವೇಶ ಮಾಡಿದವು. ದಿಲ್ಲಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ನ್ಯಾಯವಾದಿಗಳು ತ್ರಿಪುರಾದಲ್ಲಿನ ನೆಲದ ವಾಸ್ತವವನ್ನು ಜನರ ಮುಂದೆ ತೆರೆದಿಟ್ಟರು. ಈ ಕಾರಣಕ್ಕಾಗಿ ಅವರನ್ನು ಇದೀಗ ಶಿಕ್ಷೆಗೆ ಗುರಿಪಡಿಸಲಾಗುತ್ತಿದೆ. ಸರಕಾರಗಳು ಮಾನವ ಹಕ್ಕುಗಳ ಚಟುವಟಿಕೆ ಮತ್ತು ವಸ್ತುನಿಷ್ಠ ವರದಿಯನ್ನು ತಡೆಯಲು ಯಾವ ಮಟ್ಟಕ್ಕೆ ತಲುಪಬಹುದು ಎಂಬುದನ್ನು ಈ ವಿಚಾರದ ಮೂಲಕ ತಿಳಿದುಕೊಳ್ಳಬಹುದಾಗಿದೆ.


ಎನ್.ಸಿ.ಎಚ್.ಆರ್.ಓದ ಅಡ್ವೊಕೇಟ್ ಅನ್ಸಾರಿ ಇಂದೋರಿ ಮತ್ತು ಪಿಯುಸಿಎಲ್ ನ ಅಡ್ವೊಕೇಟ್ ಮುಕೇಶ್ ಕುಮಾರ್ ವಿರುದ್ಧ ತ್ರಿಪುರಾ ಪೊಲೀಸರ ಕಾರ್ಯಾಚರಣೆಯನ್ನು ಪಾಪ್ಯುಲರ್ ಫ್ರಂಟ್ ಖಂಡಿಸುತ್ತದೆ ಮತ್ತು ಕರಾಳ ಕಾನೂನು ಯುಎಪಿಎ ಅಡಿ ಅವರಿಗೆ ಕಳಿಸಲಾದ ಕಾನೂನು ನೋಟೀಸನ್ನು ಕೂಡಲೇ ರದ್ದುಪಡಿಸಬೇಕೆಂದು ಆಗ್ರಹಿಸುತ್ತದೆ.
ಪಾಪ್ಯುಲರ್ ಫ್ರಂಟ್ ಎನ್.ಇ.ಸಿ ತನ್ನ ಮತ್ತೊಂದು ನಿರ್ಣಯದಲ್ಲಿ, ತ್ರಿಪುರಾ ಹಿಂಸಾಚಾರದ ವಿರುದ್ಧ ಮನವಿ ಪತ್ರ ಸಲ್ಲಿಸಲು ತೆರಳಿದ ಮಧ್ಯಪ್ರದೇಶದ ಸಂಘಟನೆಯ ಕಾರ್ಯಕರ್ತರ ಬಂಧನಕ್ಕೂ ದಿಗ್ಭ್ರಮೆ ವ್ಯಕ್ತಪಡಿಸಿತು. ಮನವಿ ಪತ್ರದಲ್ಲಿ ಒರಟು ಭಾಷೆಯನ್ನು ಬಳಸಿದ ಆರೋಪ ಹೊರಿಸಿ ಪಾಪ್ಯುಲರ್ ಫ್ರಂಟ್ ನ ಕೆಲವು ಕಾರ್ಯಕರ್ತರನ್ನು ಎಂ.ಪಿ. ಪೊಲೀಸರು ಬಂಧಿಸಿದ್ದಾರೆ. ಮನವಿ ಪತ್ರವು ನಾಗರಿಕರ ಕಳವಳಗಳನ್ನು ಗೌರವಾನ್ವಿತ ರಾಷ್ಟ್ರಪತಿಯವರ ಬಳಿಗೆ ತಲುಪಿಸಲು ಇರುವ ಒಂದು ಪ್ರಜಾಸತ್ತಾತ್ಮಕ ವಿಧಾನವಾಗಿದೆ. ಒಂದು ಮನವಿ ಪತ್ರ ಸಲ್ಲಿಸಿದ ಕಾರಣಕ್ಕೆ ನಮ್ಮ ಕಾರ್ಯಕರ್ತರನ್ನು ಬಂಧಿಸಿರುವುದು, ಜನತೆ ಕಾನೂನು ಮತ್ತು ಪ್ರಜಾಸತ್ತಾತ್ಮಕ ವಿಧಾನಗಳ ಮೂಲಕ ತಮ್ಮ ಕಳವಳ ವ್ಯಕ್ತಪಡಿಸುವುದನ್ನು ಅಧಿಕಾರಿಗಳಿಗೆ ಸಹಿಸಲೂ ಸಾಧ್ಯವಿಲ್ಲ ಎಂಬುದಕ್ಕಿಂತ ಮಿಗಿಲಾಗಿ ಬೇರೇನೂ ಅಲ್ಲ. ಸಂಘಟನೆ ಮತ್ತು ಅದರ ಕಾರ್ಯಕರ್ತರು ಈ ರೀತಿಯ ಬೆದರಿಕೆಯ ತಂತ್ರಗಳ ಮುಂದೆ ಎಂದೂ ಮಣಿಯುವುದಿಲ್ಲ ಹಾಗೂ ನ್ಯಾಯದ ಹೋರಾಟವನ್ನೂ ತ್ಯಜಿಸುವುದಿಲ್ಲ. ತನ್ನ ಕಾರ್ಯಕರ್ತರ ಮೇಲೆ ಹೇರಿರುವ ಸುಳ್ಳು ಪ್ರಕರಣಗಳನ್ನು ಹಿಂಪಡೆಯಬೇಕು ಮತ್ತು ಅವರನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂದು ಪಾಪ್ಯುಲರ್ ಫ್ರಂಟ್ ಒತ್ತಾಯಿಸುತ್ತದೆ ಎಂದು ಪಾಪ್ಯುಲರ್ ಫ್ರಂಟ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನೀಸ್ ಅಹ್ಮದ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Join Whatsapp
Exit mobile version