ಬೆಳ್ತಂಗಡಿ : ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಮುಂಡಾಜೆ ಗ್ರಾಮದ ಹೊಸಕಾಪು ಹರೀಶ್ ಗೌಡ ಎಂಬವರ ಜಾಗದಲ್ಲಿ ಹಾದುಹೋಗುವ ಹೊಳೆಯಲ್ಲಿ ಅಕ್ರಮವಾಗಿ ಅನೇಕ ಸಮಯಗಳಿಂದ ರಾಜಾರೋಷವಾಗಿ ಮರಳುಗಾರಿಕೆಗೆ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದು ಬಂಟ್ವಾಳ ಎಎಸ್ಪಿ ಮತ್ತು ತಂಡ ಇಂದು ಬೆಳಗ್ಗಿನ ಜಾವ ಮಾರುವೇಷದಲ್ಲಿ ದಾಳಿ ಮಾಡಿದೆ.
ದಾಳಿ ವೇಳೆ ಮರಳುಗಾರಿಕೆಗೆ ಬಳಸುತ್ತಿದ್ದ ಎರಡು ದೋಣಿ ಹಾಗೂ ಎರಡು ಟಿಪ್ಪರ್ ವಾಹನವನ್ನು ವಶಪಡಿಸಿಕೊಂಡು ಧರ್ಮಸ್ಥಳ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಉಜಿರೆ ನಿವಾಸಿ ಸುನಿಲ್ ಎಂಬವರ ಸೈಂಟ್ ಅಂತೋಣಿ (S.A) ಮತ್ತು ಸೋಮಂದಡ್ಕದ ನಿವಾಸಿ ರಾಧಕೃಷ್ಣ ಎಂಬವರ ಲಕ್ಷ್ಮೀ ವೆಂಕಟೇಶ್ ಎಂಬ ಹೆಸರಿನ ಟಿಪ್ಪರ್ ವಾಹನ ವಶಪಡಿಸಿಕೊಳ್ಳಲಾಗಿದೆ.
ಧರ್ಮಸ್ಥಳ ನೇತ್ರಾವತಿ ನದಿಯಲ್ಲಿ ಅಕ್ರಮ ಮರಳುಗಾರಿಕೆ ಮೇಲೆ ದಾಳಿಯಲ್ಲಿ ಒಂದು ದೋಣಿಯನ್ನು ವಶಪಡಿಸಿಕೊಳ್ಳಲಾಗಿದೆ. ಎರಡು ಕಡೆ ದಾಳಿ ವೇಳೆ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದೆ.