Home ಟಾಪ್ ಸುದ್ದಿಗಳು ಶನಿವಾರಸಂತೆ ಪೊಲೀಸ್ ಠಾಣೆ ಮುಂದೆ ತಡರಾತ್ರಿವರೆಗೂ ನಡೆದ ಪ್ರತಿಭಟನೆಗೆ ಮಣಿದ ಪೊಲೀಸರು: ಹಲ್ಲೆಕೋರರ ವಿರುದ್ಧ ಎಫ್ಐಆರ್...

ಶನಿವಾರಸಂತೆ ಪೊಲೀಸ್ ಠಾಣೆ ಮುಂದೆ ತಡರಾತ್ರಿವರೆಗೂ ನಡೆದ ಪ್ರತಿಭಟನೆಗೆ ಮಣಿದ ಪೊಲೀಸರು: ಹಲ್ಲೆಕೋರರ ವಿರುದ್ಧ ಎಫ್ಐಆರ್ ದಾಖಲು


ಮಡಿಕೇರಿ : ಗುಂಪೊಂದು ಹಲ್ಲೆ ನಡೆಸಿದ ಬಗ್ಗೆ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುತ್ತಿಲ್ಲ, ಅಮಾಯಕರನ್ನು ಪೊಲೀಸರು ಸುಳ್ಳು ಕೇಸಿನಲ್ಲಿ ಬಂಧಿಸುತ್ತಿದ್ದಾರೆ ಎಂದು ಆರೋಪಿಸಿ ಸಂತ್ರಸ್ತ ಕುಟುಂಬ ಮತ್ತು ಸ್ಥಳೀಯ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಶನಿವಾರಸಂತೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದು, ಶುಕ್ರವಾರ ತಡರಾತ್ರಿವರೆಗೂ ಠಾಣೆಯ ಮುಂದೆ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.


ಕಾರಿನಲ್ಲಿ ಸಂಚರಿಸುತ್ತಿದ್ದ ಕುಟುಂಬದ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳ ವಿರುದ್ಧ ಕ್ರಮಕೈಗೊಳ್ಳಬೇಕು, ಅಮಾಯಕ ಯುವಕರಿಗೆ ಪೊಲೀಸರು ನೀಡುತ್ತಿರುವ ಕಿರುಕುಳ ನಿಲ್ಲಿಸಬೇಕು ಎಂದು ಒತ್ತಾಯಿಸಿ ಶುಕ್ರವಾರ ಶನಿವಾರಸಂತೆ ಪೊಲೀಸ್ ಠಾಣೆ ಮುಂಭಾಗ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಧರಣಿ ನಡೆಸಿದರು. ರಾತ್ರಿವರೆಗೂ ಪೊಲೀಸರಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ಪ್ರತಿಭಟನೆ ತೀವ್ರಗೊಳಿಸಿದ ಪ್ರತಿಭಟನಕಾರರು, ಘೋಷಣೆ ಕೂಗಿದರು. ಈ ವೇಳೆ ಓರ್ವ ಮಹಿಳೆ ಅಸ್ವಸ್ಥಗೊಂಡಿದ್ದು, ಅವರನ್ನು ತಕ್ಷಣ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತು.


ಕಾರಿನಲ್ಲಿ ಹೋಗುತ್ತಿದ್ದಾಗ ತಮ್ಮ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದು 6 ದಿನಗಳಾದರೂ ಪೊಲೀಸರು ಹಲ್ಲೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಲ್ಲ ಹಾಗೂ ಕ್ರಮಕೈಗೊಂಡಿಲ್ಲ, ಶುಕ್ರವಾರ ಮಸೀದಿಗೆ ಹೋಗಿ ಹಿಂದಿರುತ್ತಿದ್ದಾಗ ಆರು ಮಂದಿ ಅಮಾಯಕ ಮುಸ್ಲಿಮ್ ಯುವಕರನ್ನು ಬಂಧಿಸಿದ್ದಾರೆ ಎಂದು ಹಲ್ಲೆಗೊಳದಾಗ ಜಾಕಿರ್ ಪಾಷ ಅವರ ಪತ್ನಿ ನಾಝಿಯಾ ತಬಸ್ಸುಮ್ ಆರೋಪಿಸಿದರು.
ಪೊಲೀಸರು ಅಮಾಯಕ ಯುವಕರನ್ನು ಠಾಣೆಗೆ ಕರೆಸಿ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಕೂಡಲೇ ಹಿರಿಯ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು. ಪೊಲೀಸರು ಕಾನೂನಿನ ಪ್ರಕಾರ ನಡೆದುಕೊಳ್ಳುತ್ತಿಲ್ಲ. ಸಂಘಪರಿವಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದರು.


ಮಧುಮಗಳಿಂದ ಪ್ರತಿಭಟನೆ
ಪೊಲೀಸರು ಬಂಧಿಸಿರುವ ಜಾಕಿರ್ ಅವರ ಸಹೋದರಿಗೆ ನವೆಂಬರ್ 14, ಭಾನುವಾರದಂದು ಮದುವೆ ನಿಗದಿಯಾಗಿದೆ. ಅವರು ಕೂಡ ತಡರಾತ್ರಿವರೆಗೆ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.
ಅಣ್ಣ ಜೈಲಿನಿಂದ ಬಾರದೆ ನಾನು ಮದುವೆಯಾಗುವುದಿಲ್ಲ ಎಂದು ಮಧುಮಗಳು ಹಠಹಿಡಿದು ಕುಳಿತ ಘಟನೆ ಕೂಡ ನಿನ್ನೆ ನಡೆಯಿತು.


ವಿಷಯ ತಿಳಿಯುತ್ತಿದ್ದಂತೆ ಸೋಮವಾರಪೇಟೆ ಡಿವೈಎಸ್ ಪಿ ಶ್ಯೆಲೇಂದ್ರಕುಮಾರ್, ಸೋಮವಾರಪೇಟೆ ವೃತ್ತ ನಿರೀಕ್ಷಕ ಮಹೇಶ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ಹಾನಗಲ್, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಉಸ್ಮಾನ್ , ಬ್ಲಾಕ್ ಅಧ್ಯಕ್ಷ ಶಾಹೀದ್ ಖಾನ್, ಮುಖಂಡರಾದ ಅಕ್ಮಲ್ ಪಾಷ ಆಗಮಿಸಿ ಮಾತುಕತೆ ನಡೆಸಿದರು. ಅದರಂತೆ ಜಾಕೀರ್ ಕುಟುಂಬ ಸಂಚರಿಸುತ್ತಿದ್ದ ಕಾರನ್ನು ಅಡ್ಡಗಟ್ಡಿ ಹಲ್ಲೆ ನಡೆಸಿದವರ ವಿರುದ್ಧ ಎಫ್ಐಆರ್ ದಾಖಲಿಸಲಾಯಿತು. ಇನ್ನು ಮುಂದೆ ಅಮಾಯಕರನ್ನು ಬಂಧಿಸುವುದಿಲ್ಲ ಎಂದು ಡಿವೈಎಸ್ ಪಿ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಕೈಬಿಡಲಾಯಿತು.

ಘಟನೆಯ ಹಿನ್ನೆಲೆ
ಇತ್ತೀಚೆಗೆ ಶನಿವಾರಸಂತೆ ನಿವಾಸಿ ಜಾಕಿರ್ ಪಾಷ ಅವರು ತನ್ನ ಪತ್ನಿ, ಮಕ್ಕಳೊಂದಿಗೆ ಕಾರಿನಲ್ಲಿ ಗುಡುಗಳಲೆ ಎಂಬಲ್ಲಿಗೆ ಹೋಗುತ್ತಿದ್ದಾಗ ಎರಡು ಬೈಕ್ ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು, ಕಾರಿಗೆ ಅಡ್ಡ ಬಂದು ಅಸಭ್ಯವಾಗಿ ವರ್ತಿಸಿದ್ದರು. ಕಾರು ನಿಲ್ಲಿಸಿದ ಜಾಕಿರ್, ಅವರನ್ನು ಪ್ರಶ್ನಿಸಿದಾಗ ನಾಲ್ವರು ಸೇರಿ ಪಾಷ ಅವರಿಗೆ ಹಲ್ಲೆ ನಡೆಸಿದ್ದರು.


ಈ ವೇಳೆ ಕಾರಿನಲ್ಲಿ ಕುಳಿತಿದ್ದ ಅವರ ಪತ್ನಿ ತಕ್ಷಣ ಜಾಕಿರ್ ಅವರ ಸಹೋದರರಿಗೆ ಕರೆ ಮಾಡಿ, ತಕ್ಷಣ ಸ್ಥಳಕ್ಕೆ ಬರುವಂತೆ ಹೇಳಿದ್ದಾರೆ. ಸ್ಥಳಕ್ಕೆ ಧಾವಿಸಿದ ಜಾಕಿರ್ ಅವರ ಸಹೋದರರು, ದುಷ್ಕರ್ಮಿಗಳ ಮೇಲೆ ಹಲ್ಲೆ ನಡೆಸಿದ್ದು, ಈ ವೇಳೆ ಇಬ್ಬರು ಪರಾರಿಯಾಗಿದ್ದಾರೆ. ಮತ್ತಿಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಈ ವಿಷಯ ತಿಳಿದ ಸಂಘಪರಿವಾರದ ನಾಯಕರು ಪೊಲೀಸರ ಮೇಲೆ ಒತ್ತಡ ಹಾಕಿದ್ದಾರೆ. ಒತ್ತಡಕ್ಕೆ ಮಣಿದ ಪೊಲೀಸರು ದೂರು ನೀಡಲು ಬಂದ ಜಾಕಿರ್ ಪಾಷ, ಅಝರ್, ಮುಜಾಹಿದ್ ಮತ್ತು ರಶೀದ್ ಅವರ ಮೇಲೆ 307, 323,142,144,147,148 ಸೇರಿದಂತೆ ಐಪಿಸಿಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿ, ಬಂಧಿಸಿದ್ದರು. ಹಲ್ಲೆ ನಡೆಸಿದ ಸಂದೇಶ್, ನಂದನ್ ಸೇರಿದಂತೆ ಇತರರ ಮೇಲೆ ದೂರು ನೀಡಿದ್ದರೂ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸದೆ ನಿರ್ಲಕ್ಷ್ಯ ತೋರಿದ್ದರು ಎಂಬ ಆರೋಪ ಕೇಳಿಬಂದಿತ್ತು.

Join Whatsapp
Exit mobile version