ಲಕ್ನೋ: ಟಿವಿ ಪತ್ರಕರ್ತ ಅಮನ್ ಚೋಪ್ರಾ ಬಂಧನದ ವಿಚಾರದಲ್ಲಿ ನಾಟಕೀಯ ಪ್ರಸಂಗ ನಡೆದಿದೆ. ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದ ಮೇಲೆ ಪತ್ರಕರ್ತ ಅಮನ್ ಚೋಪ್ರಾ ವಿರುದ್ಧ ರಾಜಸ್ಥಾನದಲ್ಲಿ ಮೂರು ಎಫ್‌ಐಆರ್ ದಾಖಲಾಗಿತ್ತು. ಕೊಟ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಮನ್ ಚೋಪ್ರಾ ವಿರುದ್ಧ ವ್ಯಕ್ತಿಯೊಬ್ಬರು ನೀಡಿದ ದೂರಿನ ಅನ್ವಯ ಎಫ್‌ಐಆರ್ ದಾಖಲಿಸಲಾಗಿತ್ತು.
ಪತ್ರಕರ್ತ ಅಮನ್ ಚೋಪ್ರಾನನ್ನು ಬಂಧಿಸಲು ಆಗಮಿಸಿದ್ದರಾಜಸ್ಥಾನ ಪೊಲೀಸರು ನೋಯ್ಡಾದಲ್ಲಿ ಕಾದು ಕುಳಿತಿದ್ದರು. ಆದರೆ ಆತ ಪರಾರಿಯಾಗಿದ್ದು,ಉತ್ತರ ಪ್ರದೇಶ ಪೊಲೀಸರು ಸರಿಯಾಗಿ ಸಹಕಾರ ನೀಡಲಿಲ್ಲ ಎಂದು ರಾಜಸ್ಥಾನ ಪೊಲೀಸರು ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿದ ದುಂಗರ್‌ಪುರ್ ಎಸ್ಪಿ ಸುಧೀರ್ ಜೋಶಿ “ನಮ್ಮ ತಂಡ ನೋಯ್ಡಾ ಪೊಲೀಸ್ ಠಾಣೆಯಲ್ಲಿ ಕಾಯುತ್ತಿತ್ತು. ಆಗ ಆರೋಪಿ ಪರಾರಿಯಾಗಿದ್ದಾರೆ. ನಾವು ತೆರಳಿದಾಗ ಚೋಪ್ರಾ ನಿವಾಸಕ್ಕೆ ಬೀಗ ಹಾಕಲಾಗಿತ್ತು” ಎಂದು ಹೇಳಿದ್ದಾರೆ.
ದೆಹಲಿಯ ಜಾಹಂಗೀರ್‌ಪುರಿ ಗಲಭೆ ಬಳಿಕ ಆ ಪ್ರದೇಶದಲ್ಲಿ ಕಟ್ಟಡ ತೆರವು ಕಾರ್ಯಾಚರಣೆ ಆರಂಭಿಸಲಾಗಿತ್ತು. ಇದಕ್ಕೆ ಸೇಡು ತೀರಿಸಿಕೊಳ್ಳಲು ರಾಜಸ್ಥಾನ ಸರ್ಕಾರ ಅಲ್ವಾರ್ ಜಿಲ್ಲೆಯಲ್ಲಿ ದೇವಾಲಯ ಕಡೆವಿದೆ ಎಂದು ಅಮನ್ ಚೋಪ್ರಾ ಸುಳ್ಳು ವಿವರ ನೀಡಿದ್ದಾರೆ ಎಂಬುದಾಗಿತ್ತು ಆರೋಪ.
ಚೋಪ್ರಾ ವಿರುದ್ಧ ಬಂಡಿ, ಅಲ್ವಾರ್ ಮತ್ತು ಡುಂರ್ಗಾಪುರ ಜಿಲ್ಲೆಗಳಲ್ಲಿ ದೇಶದ್ರೋಹ, ಧಾರ್ಮಿಕ ಭಾವನೆಗೆ ಧಕ್ಕೆ, ಎರಡು ಗುಂಪುಗಳ ನಡುವೆ ವೈಷಮ್ಯ ಬಿತ್ತುವುದು ಸೇರಿದಂತೆ ವಿವಿಧ ಪ್ರಕರಣಗಳ ಅಡಿ ಎಫ್‌ಐಆರ್ ದಾಖಲಾಗಿದೆ. ಬಂಡಿ, ಅಲ್ವಾರ್‌ನಲ್ಲಿನ ಎಫ್‌ಐಆರ್‌ಗಳಿಗೆ ಅಮನ್ ಚೋಪ್ರಾ ತಡೆಯಾಜ್ಞೆ ಪಡೆದುಕೊಂಡಿದ್ದಾರೆ. ಆದರೆ ಡುಂರ್ಗಾಪುರ ಜಿಲ್ಲಾ ನ್ಯಾಯಾಲಯ ಬಂಧನದ ವಾರೆಂಟ್ ಹೊರಡಿಸಿದೆ.