Home ಟಾಪ್ ಸುದ್ದಿಗಳು ಹೋಟೆಲ್ ಜಾಹೀರಾತಿನಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ಆರೋಪ: ಹೋಟೆಲ್ ಬಂದ್ ಮಾಡಿಸಿದ ಪೊಲೀಸರು

ಹೋಟೆಲ್ ಜಾಹೀರಾತಿನಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ಆರೋಪ: ಹೋಟೆಲ್ ಬಂದ್ ಮಾಡಿಸಿದ ಪೊಲೀಸರು

ಬೆಳಗಾವಿ: ಬೆಳಗಾವಿಯ ಪ್ರಸಿದ್ಧ ಹೋಟೆಲ್ ಒಂದರ ಪ್ರಚಾರದ ಆನ್ ಲೈನ್ ಜಾಹೀರಾತಿನಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತರಲಾಗಿದೆ ಎಂದು ಸಂಘಪರಿವಾರದ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪೊಲೀಸರು ಹೋಟೆಲ್ ಬಂದ್ ಮಾಡಿಸಿ, ಭದ್ರತೆ ಒದಗಿಸಿದ ಘಟನೆ ನಡೆದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಹೋಟೆಲ್ ಬಂದ್ ಮಾಡಲಾಗಿತ್ತು. ಬಳಿಕ ಹೋಟೆಲ್ ನವರು ಕ್ಷಮೆಯಾಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ಬೆಳಗಾವಿ ನಗರದಲ್ಲಿ ಹಲವು ಶಾಖೆಗಳನ್ನು ಹೊಂದಿರುವ ನಿಯಾಜ್ ಹೋಟೆಲ್ ತನ್ನ ಆನ್ ಲೈನ್ ಜಾಹೀರಾತಿನಲ್ಲಿ ಹಿಂದೂ ಸಂತರೊಬ್ಬರು, ಹೋಟೆಲ್ ನ ಬಿರಿಯಾನಿ ರುಚಿ ನೋಡಿದ ಬಳಿಕ “ನನಗೆ ಬಿರಿಯಾನಿ ಕೊಡಲೇ ಬೇಕು” ಎಂದು ಹೇಳುತ್ತಿರುವಂತೆ ತೋರಿಸಲಾಗಿದೆ. ನಮ್ಮ ಬಿರಿಯಾನಿ ಇತರೆಲ್ಲಾ ಬಿರಿಯಾನಿಗಳಿಗಿಂತ ಅತ್ಯಂತ ಶ್ರೇಷ್ಠವಾದುದು (ಅಹಂ ಬ್ರಹ್ಮಾಸ್ಮಿ) ಎಂದೂ ಜಾಹೀರಾತಿನಲ್ಲಿ ಬರೆಯಲಾಗಿದೆ.


ಪೋಸ್ಟರ್ ವೈರಲ್ ಆಗುತ್ತಿದ್ದಂತೆ ವಿಶ್ವ ಹಿಂದು ಪರಿಷತ್, ಬಜರಂಗ ದಳ, ಬಿಜೆಪಿ ನಾಯಕರು, ಜಾಹೀರಾತಿನಲ್ಲಿ ಹಿಂದೂಗಳನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿ, ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿ, ಹೋಟೆಲ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರು. ಬಳಿಕ ನಿಯಾಜ್ ಹೋಟೆಲ್ ನಿರ್ವಾಹಕರು ಆ ಪೋಸ್ಟರ್ ತೆಗೆದು ಹಾಕಿದ್ದಲ್ಲದೆ, ಧಾರ್ಮಿಕ ಭಾವನೆಗೆ ನೋವಾಗಿದ್ದರೆ ಕ್ಷಮೆ ಕೇಳುವುದಾಗಿ ಹೇಳಿ ವಿವಾದಕ್ಕೆ ತೆರೆ ಎಳೆದಿದ್ದಾರೆ.

Join Whatsapp
Exit mobile version