ಮಂಗಳೂರು: ಸುರತ್ಕಲ್’ನ ಕಾಟಿಪಳ್ಳದಲ್ಲಿ ನಡೆದ ಅಬ್ದುಲ್ ಜಲೀಲ್ ಹತ್ಯೆಯನ್ನು ನಿಷ್ಪಕ್ಷಪಾತ ತನಿಖೆ ನಡೆಸಿ, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಸುರತ್ಕಲ್ ಮುಸ್ಲಿಂ ಐಕ್ಯತಾ ವೇದಿಕೆ ಆಗ್ರಹಿಸಿದೆ.
ಮುಸ್ಲಿಂ ಐಕ್ಯತಾ ವೇದಿಕೆ ಸುರತ್ಕಲ್ ಅಧ್ಯಕ್ಷ ಅಶ್ರಫ್ ಬದ್ರಿಯಾ ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಶನಿವಾರ ಸಂಜೆ ಮಂಗಳೂರು ನಗರದ ಹೊರವಲಯದ ಕಾಟಿಪಳ್ಳದ ಲತೀಫಾ ಸ್ಟೋರ್ ಮಾಲಕ ಅಬ್ದುಲ್ ಜಲೀಲ್ ಎಂಬವರನ್ನು ತನ್ನ ಅಂಗಡಿಯ ಮುಂದೆ ದುಷ್ಕರ್ಮಿಗಳು ಚೂರಿಯಿಂದ ಇರಿದು ಹತ್ಯೆ ನಡೆಸಿರುವುದನ್ನು ಮಾನವೀಯತೆ ಇರುವ ಪ್ರತಿಯೊಬ್ಬರು ಖಂಡಿಸಲೇಬೇಕಾಗಿದೆ. ಈ ಹತ್ಯೆಯ ಹಿಂದಿರುವ ಕಾಣದ ಕೈಗಳನ್ನು ನಿಷ್ಪಕ್ಷಪಾತ ತನಿಖೆಯನ್ನು ನಡೆಸಿ ಪೊಲೀಸ್ ಇಲಾಖೆ ಬಯಲಿಗೆಳೆಯಬೇಕು ಹಾಗೂ ಆರೋಪಿಗಳ ವಿರುದ್ಧ ಯುಎಪಿಎ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದು ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ ಪದೇ ಪದೇ ಶಾಂತಿ ಕದಡುವ ಕೆಲಸ ಆಗುತ್ತಿರುವುದು ಪೊಲೀಸ್ ವೈಫಲ್ಯಕ್ಕೆ ನಿದರ್ಶನವಾಗಿದೆ. ದಕ್ಷಿಣ ಕನ್ನಡದ ಶಾಂತಿ ಪ್ರಿಯ ನಾಗರಿಕರು ಶಾಂತಿಯನ್ನು ಕಾಪಾಡಬೇಕಾಗಿ ಮುಸ್ಲಿಂ ಐಕ್ಯತಾ ವೇದಿಕೆ ಸುರತ್ಕಲ್ ಆಗ್ರಹಿಸಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.