Home ಕರಾವಳಿ ಮಂಗಳೂರು : ಸಿಸಿಬಿ ಪೋಲೀಸ್ ಅಧಿಕಾರಿಗಳಿಬ್ಬರ ಅಮಾನತು

ಮಂಗಳೂರು : ಸಿಸಿಬಿ ಪೋಲೀಸ್ ಅಧಿಕಾರಿಗಳಿಬ್ಬರ ಅಮಾನತು

ಮಂಗಳೂರು : ಆರೋಪಿಗಳಿಗೆ ಸೇರಿದ ಕಾರುಗಳನ್ನು ಮಾರಾಟ ಮಾಡಿದ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಿದ ಹಿನ್ನಲೆಯಲ್ಲೆ ಆರೋಪಿಗಳಾದ ಮಂಗಳೂರು ಎಸ್ ಐ ಕಬ್ಬಾಳರಾಜ್ ಮತ್ತು ಇನ್ ಸ್ಪೆಕ್ಟರ್ ರಾಮಕೃಷ್ಣ ಅವರನ್ನು ರಾಜ್ಯ ಪೋಲೀಸ್ ನಿರ್ದೇಶಕರು ಅಮಾನತು ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಕಬ್ಬಾಳರಾಜ್ ಮಂಗಳೂರು ಸಿಸಿಬಿ ತಂಡದಲ್ಲಿ ಎಸ್ ಐ ಆಗಿದ್ದರು, ರಾಮಕೃಷ್ಣ ಪಾಂಡೇಶ್ವರ ಎಕಾನಮಿಕ್ ಮತ್ತು ನಾರ್ಕೋಟಿಕ್ ಠಾಣೆಯ ಇನ್ ಸ್ಪೆಕ್ಟರ್ ಆಗಿ ಹುದ್ದೆ ನಿರ್ವಹಿಸುತ್ತಿದ್ದರು. ಕಳೆದ ಅ.16ರಂದು ಮಂಗಳೂರು ಠಾಣೆಯಲ್ಲಿ ಹಣ ಡಬ್ಲಿಂಗ್ ಜಾಲದ ಆರೋಪದ ಬಗ್ಗೆ ಪ್ರಕರಣ ದಾಖಲಾಗಿತ್ತು. ಪೊಲೀಸರು ಆರೋಪಿಗಳಿಂದ ಮೂರು ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡಿದ್ದರು. ಆರೋಪಿಗಳನ್ನು ಪಾರು ಮಾಡಲು ಲಂಚ ಕೇಳಿದ್ದು, ಹಣ ಇಲ್ಲದಕ್ಕೆ ಕಾರನ್ನು ಮಾರಾಟ ಮಾಡುವುದಾಗಿ ಡೀಲ್ ನಡೆದಿದೆ ಎನ್ನಲಾಗಿದೆ.

ಪ್ರಕರಣದ ಬಗ್ಗೆ ಮಂಗಳೂರು ಡಿಸಿಪಿ ವಿನಯ ಗಾಂವ್ಕರ್ ರಾಜ್ಯ ಪೊಲೀಸರಿಗೆ ದೂರು ನೀಡಿ ತನಿಖೆ ಆರಂಭಿಸಿತ್ತು. ಆ ಹಿನ್ನಲೆಯಲ್ಲಿ ಕೂಡಲೇ ಈ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಕಾರು ಡೀಲಿಂಗ್ ನಲ್ಲಿ ಸಿಸಿಬಿಯಲ್ಲಿದ್ದ ಕೆಲವು ಅಧಿಕಾರಿಗಳ ಬಗ್ಗೆಯೂ ಆರೋಪವಿದೆ. ಸದ್ಯಕ್ಕೆ ಇಬ್ಬರನ್ನು ಆರಂಭಿಕ ನೆಲೆಯಲ್ಲಿ ಅಮಾನತು ಮಾಡಲಾಗಿದ್ದು, ಉಳಿದವರ ಸರದಿ ಮುಂದೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

Join Whatsapp
Exit mobile version