ಬೆಂಗಳೂರು: ಬಹು ಕೋಟಿ ಬಿಟ್ ಕಾಯಿನ್ ಹಗರಣದ ಬಗ್ಗೆ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ರಾಮಲಿಂಗಾ ರೆಡ್ಡಿ ಸುದ್ದಿಗೋಷ್ಠಿ ಮಾಡುವಾಗ ಗುಪ್ತಚರ ದಳದ ಪೊಲೀಸ್ ಇನ್ಸ್ ಪೆಕ್ಟರ್ ಒಬ್ಬರು ಬಂದು ಕುಳಿತುಕೊಂಡಿದ್ದು ವಿವಾದಕ್ಕೆ ಕಾರಣವಾಗಿದೆ.
ಆಡಳಿತ ಪಕ್ಷ ಬಿಜೆಪಿಯ ಇಬ್ಬರು ಪ್ರಭಾವಿ ನಾಯಕರು ಮತ್ತು ಉನ್ನತ ಮಟ್ಟದ ಅಧಿಕಾರಿಗಳೇ ಶಾಮೀಲಾಗಿದ್ದಾರೆ ಎನ್ನಲಾಗಿರುವ ಹಗರಣದ ಬಗ್ಗೆ ಇವತ್ತು ಮತ್ತೆ ದಾಖಲೆಗಳ ಸಮೇತ ಪ್ರಿಯಾಂಕ್ ಖರ್ಗೆ ಮತ್ತು ರಾಮಲಿಂಗಾ ರೆಡ್ಡಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡುತ್ತಿದ್ದರು. ಈ ವೇಳೆ ಗುಪ್ತಚರ ದಳದ ಇನ್ಸ್ ಪೆಕ್ಟರ್ ಕ್ಯಾತ್ಯಾಯಿನಿ ಕೆಪಿಸಿಸಿ ಕಚೇರಿಗೆ ಬಂದರು. ಆಗ ಕೆಪಿಸಿಸಿ ಸಿಬ್ಬಂದಿ ಅವರನ್ನು ಹೊರಗೆ ಕಳುಹಿಸಿದರು. ಪೊಲೀಸ್ ಅಧಿಕಾರಿ ಬಂದು ಹೋಗುತ್ತಿರುವ ದೃಶ್ಯವನ್ನು ಕೆಪಿಸಿಸಿ ಬಿಡುಗಡೆ ಮಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಿಯಾಂಕ್ ಖರ್ಗೆ, ಬಿಟ್ ಕಾಯಿನ್ ಹಗರಣದಿಂದ ಬಿಜೆಪಿ ಸಾಕಷ್ಟು ಒತ್ತಡದಲ್ಲಿದೆ ಎಂದು ಅನ್ನಿಸುತ್ತಿದೆ. ಇಲ್ಲವಾದರೆ ಮಪ್ತಿಯಲ್ಲಿ ಪೊಲೀಸ್ ಅಧಿಕಾರಿಯನ್ನು ಕಾಂಗ್ರೆಸ್ ಸುದ್ದಿಗೋಷ್ಠಿಗೆ ಯಾಕೆ ಕಳುಹಿಸ್ತಾರೆ..? ಗೃಹ ಸಚಿವರು ದಯವಿಟ್ಟು ವಿವರಿಸಬಲ್ಲೀರಾ..? ಎಂದು ಕುಟುಕಿದ್ದಾರೆ.